ಗುಳ್ಳಾಪುರ-ಹೆಗ್ಗಾರ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು

| Published : Sep 13 2025, 02:05 AM IST

ಗುಳ್ಳಾಪುರ-ಹೆಗ್ಗಾರ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ತಾತ್ಕಾಲಿಕವಾಗಿ ಸರ್ಕಾರದಿಂದ ಸ್ವಲ್ಪ ಹಣ ತಂದು ಶಾಸಕ ಶಿವರಾಮ ಹೆಬ್ಬಾರ ಗುಳ್ಳಾಪುರದ ಮೇಲ್ಭಾಗದಲ್ಲಿ ಭಾರೀ ಮಳೆ ಇಲ್ಲದಾಗ ಓಡಾಡುವಂತ ಕಿರು ಸೇತುವೆ ನಿರ್ಮಿಸಿದ್ದರು.

ಯಲ್ಲಾಪುರ: ಹಲವು ವರ್ಷಗಳ ಬೇಡಿಕೆಯಾಗಿದ್ದ ನನೆಗುದಿಗೆ ಬಿದ್ದಿದ್ದ ತಾಲೂಕಿನ ಗುಳ್ಳಾಪುರ-ಹೆಗ್ಗಾರ ಸೇತುವೆ ಕಳೆದ ೪ ವರ್ಷಗಳ ಹಿಂದೆ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು. ಅದಕ್ಕೆ ಪ್ರಸ್ತುತ ರಾಜ್ಯ ಸರ್ಕಾರ ₹೩೫ ಕೋಟಿ ಅನುದಾನ ಮಂಜೂರು ಮಾಡಿದೆ. ಇದರಿಂದ ಯಲ್ಲಾಪುರ, ಶಿರಸಿ ಮತ್ತು ಅಂಕೋಲಾ ತಾಲೂಕಿನ ಜನರಿಗೆ ಉತ್ತಮ ಸಂಪರ್ಕ ಸೇತುವೆಯಾಗಿ ನಿರ್ಮಾಣಗೊಳ್ಳುವುದು ಮತ್ತು ಈ ಪ್ರದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಹೊಸ ಆಯಾಮ ದೊರೆತಂತಾಗಿದೆ.ಈ ಸೇತುವೆ ಕುಸಿದು ಹೋದ ತಕ್ಷಣ ಹೆಗ್ಗಾರು, ಕೈಗಡಿ, ಕಲ್ಲೇಶ್ವರ, ಹಳವಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಜನರಿಗೆ ಯಲ್ಲಾಪುರದ ಸಂಪರ್ಕ ಗಗನಕುಸುಮವಾಗಿತ್ತು. ಆದರೆ ತಾತ್ಕಾಲಿಕವಾಗಿ ಸರ್ಕಾರದಿಂದ ಸ್ವಲ್ಪ ಹಣ ತಂದು ಶಾಸಕ ಶಿವರಾಮ ಹೆಬ್ಬಾರ ಗುಳ್ಳಾಪುರದ ಮೇಲ್ಭಾಗದಲ್ಲಿ ಭಾರೀ ಮಳೆ ಇಲ್ಲದಾಗ ಓಡಾಡುವಂತ ಕಿರು ಸೇತುವೆ ನಿರ್ಮಿಸಿದ್ದರು. ಈ ಪ್ರದೇಶದಲ್ಲಿ ಸಾವಿರಾರು ಏಕರೆ ಕೃಷಿ ಜಮೀನನ್ನು ರೈತರು ಹೊಂದಿದ್ದಾರೆ. ಅವರ ಪ್ರತಿಯೊಂದು ಚಟುವಟಿಕೆಗಳಿಗೂ ಯಲ್ಲಾಪುರ ಅನಿವಾರ್ಯವಾಗಿದೆ. ಹಾಗಾಗಿ ಈ ಸೇತುವೆಗೆ ಅತ್ಯಂತ ಬೇಡಿಕೆಯಿತ್ತು. ಸರ್ಕಾರದ ಆರ್ಥಿಕ ತೊಂದರೆಯಿಂದಾಗಿ ವಿಳಂಬವಾಗುತ್ತಲೇ ಸಾಗಿತ್ತು. ಅಂತೂ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಶಾಸಕ ಶಿವರಾಮ ಹೆಬ್ಬಾರ ಸೇತುವೆ ಕೊಚ್ಚಿ ಹೋದಂದಿನಿಂದ ಇಂದಿನವರೆಗೂ ಈ ಸೇತುವೆಯ ಮರು ನಿರ್ಮಾಣಕ್ಕಾಗಿ ನಿರಂತರ ಸರ್ಕಾರದ ಮಟ್ಟದಲ್ಲಿ ಹೋರಾಡುತ್ತಲೇ ಬಂದಿದ್ದರು. ಅಂತೂ ಮಳೆಗಾಲದೊಳಗೆ ಈ ಸೇತುವೆ ನಿರ್ಮಾಣವಾಗುವ ಎಲ್ಲ ಲಕ್ಷಣ ಗೋಚರಿಸಿವೆ.

ಗುಳ್ಳಾಪುರ, ಶೇವ್ಕಾರ ಮೂಲಕ ಶಿರಸಿಯ ಮೆಣಸೆ, ವಾನಳ್ಳಿ, ಜಡ್ಡಿಗದ್ದೆಯಿಂದ ಶಿರಸಿಗೂ ಸಂಪರ್ಕ ರಸ್ತೆಯಿದೆ. ಅಲ್ಲಿನ ಪ್ರದೇಶದವರಿಗೂ ಕಾರವಾರಕ್ಕೆ ಹೋಗುವುದು ತೀರಾ ಹತ್ತಿರವಾಗಲಿದೆ.

ಪಟಾಕಿ ಸಿಡಿಸಿ ಸಂಭ್ರಮ:

ಯಲ್ಲಾಪುರ ತಾಲೂಕಿನ ಗುಳ್ಳಾಪುರ ಹಾಗೂ ಅಂಕೋಲಾ ತಾಲೂಕಿನ ಹೆಗ್ಗಾರ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಾಣಕ್ಕೆ ಶಾಸಕ ಶಿವರಾಮ ಹೆಬ್ಬಾರ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಶಾಸಕ ಶಿವರಾಮ ಹೆಬ್ಬಾರ ಗುರುವಾರ ಗುಳ್ಳಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.