ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಬಡವರಿಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುವುದು. ಸಾರ್ವಜನಿಕರ ಹಣ ಬಡವರು, ದೀನದಲಿತರು ಸೇರಿ ಎಲ್ಲ ವರ್ಗದವರಿಗೂ ತಲುಪಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬೋರಪ್ಪ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಕುರಿತ ಐಮಂಗಲ ಹೋಬಳಿ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆ ಮಹಿಳೆಯರಿಗೆ ನೀಡಲಾಗಿದೆ. ಶೇ.98ರಷ್ಟು ಮಹಿಳೆಯರು ಯೋಜನೆ ಸದುಪಯೋಗ ಪಡೆದಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಬಡವರು ಸ್ವಾವಲಂಬನೆಯಿಂದ ಸಮರ್ಥವಾಗಿ ಕುಟುಂಬ ಹಾಗೂ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂ 5ವರ್ಷಗಳ ಕಾಲ ಗ್ಯಾರಂಟಿ ಯೋಜನೆ ಮುಂದುವರೆಯಲಿವೆ. ಇದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಲಾಗುವುದು ಎಂದರು.
ಚುನಾವಣೆಗೂ ಮುನ್ನ ಜನರಿಗೆ ನೀಡಿದ ಆಶ್ವಾಸನೆಯಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆ ಮುಂದುವರಿಕೆ ಜತೆಗೆ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಈಚೆಗೆ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ₹100 ಕೋಟಿ ಅನುದಾನ ನೀಡಲಾಗಿದೆ. ಅವಶ್ಯಕತೆ ಇರುವ ಕಡೆ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.ಹಿರಿಯೂರು ತಹಸೀಲ್ದಾರ್ ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯೂರು ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 65,019 ಕುಟುಂಬಗಳು, ಗೃಹಲಕ್ಷ್ಮೀ ಯೋಜನೆಯಡಿ 66,014 ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ 64,778 ಕುಟುಂಬಗಳು ಪ್ರಯೋಜನ ಪಡೆದಿವೆ. ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರದ ಸಾರಿಗೆ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹಿರಿಯೂರು ತಾಲೂಕಿನಲ್ಲಿ ಯುವನಿಧಿ ಯೋಜನೆಯಡಿ 517ಕ್ಕೂ ಹೆಚ್ಚು ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಫಲಾನುಭವಿ ಐಮಂಗಲ ಹೋಬಳಿ ಪಾಲವ್ವನಹಳ್ಳಿಯ ಶಾರದಮ್ಮ ತನ್ನ ಅನಿಸಿಕೆ ವ್ಯಕ್ತಪಡಿಸಿ, ವಯಸ್ಸಾದ ಕಾರಣಕ್ಕೆ ಕೂಲಿ ಕೆಲಸಕ್ಕೂ ನನ್ನನ್ನು ಯಾರು ಕರೆಯುತ್ತಿರಲಿಲ್ಲ. ನನ್ನ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಜಮೀನು ಸಹ ಇಲ್ಲ. ಹಾಗಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗಿದೆ. ಮನೆ ಯಜಮಾನಿಗೆ ರು.2000 ನೀಡುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಔಷಧೋಪಚಾರಕ್ಕೆ ಬಳಸುತ್ತಿದ್ದೇನೆ. ನನ್ನ ತವರು ಮನೆ ಹಾಸನ ಜಿಲ್ಲೆ. ಯಾವುದಾದರೂ ಕಾರ್ಯಕ್ರಮಗಳಿಗೆ ಕರೆದಾಗ ಹಣದ ಸಮಸ್ಯೆಯಿಂದಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಶಕ್ತಿ ಯೋಜನೆಯಡಿ ಆಧಾರಕಾರ್ಡ್ ಇಟ್ಟುಕೊಂಡು ಉಚಿತವಾಗಿ 4 ಬಾರಿ ಹಾಸನ ಜಿಲ್ಲೆಗೆ ಹೋಗಿ ಬಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಸ್ಲಾಂಬಾಷಾ, ಬೆಸ್ಕಾಂ ಎಇಇ ಪೀರ್ ಸಾಬ್ , ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್, ಮುಖಂಡರಾದ ಈರಲಿಂಗೇಗೌಡ, ಎಚ್.ಮಹಂತೇಶ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಜಯಣ್ಣ, ಟಿ.ಎಲ್.ಬಸವರಾಜಪ್ಪ, ಸಿದ್ದೇಶ್ವರ್, ಷಡಾಕ್ಷರಿ, ಇದ್ದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಸ್ವಾಗತಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಚಿವ ಡಿ.ಸುಧಾಕರ್ ಚಾಲನೆಹಿರಿಯೂರು: ವಾಣಿವಿಲಾಸ ಜಲಾಶಯದಿಂದ ಐಮಂಗಲ ಹೋಬಳಿ ವ್ಯಾಪ್ತಿಯ 30 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಐಮಂಗಲ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದರು.
ಐಮಂಗಲ ಮತ್ತು ಇತರೆ 30ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಹಂತ-1ರ ರು. 26.37 ಕೋಟಿ ವೆಚ್ಚದ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ಲೋರೈಡ್ ನೀರಿನ ಸಮಸ್ಯೆಯಿಂದ ಮುಕ್ತಿಗೊಳಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಬಹುದಿನದ ಕನಸು ನನಸಾಗಿರುವುದು ಸಂತಸ ತಂದಿದೆ ಎಂದರು.ಮಾರಿಕಣಿವೆಯ 800 ಅಡಿ ಎತ್ತರದ ಗುಡ್ಡದ ಮೇಲೆ ₹16 ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕರ್ ನಿರ್ಮಿಸಿ, ಗ್ರ್ಯಾವಿಟಿ ಆಧಾರದ ಮೇಲೆ ಐಮಂಗಲ ಹೋಬಳಿ ವ್ಯಾಪ್ತಿಯ ಸೂರಗೊಂಡನಹಳ್ಳಿ, ಐಮಂಗಲ, ಮೇಟಿಕುರ್ಕೆ, ಬುರುಜನರೊಪ್ಪ, ಮರಡಿಹಳ್ಳಿ, ಎಂ.ಡಿ.ಕೋಟೆ ಗ್ರಾಪಂ ವ್ಯಾಪ್ತಿಯ ಸುಮಾರು 30 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಮುಂದಿನ ಒಂದು ವರ್ಷದ ವೇಳೆಗೆ ಹಿರಿಯೂರಿನ ತಾಲೂಕಿನ ಸುಮಾರು 300 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಕುಡಿಯುವ ನೀರು ಹರಿಸಲು ಕ್ರಮವಹಿಸಲಾಗುವುದು. ಈ ನಿಟ್ಟಿನಲ್ಲಿ ಕುಡಿವ ನೀರಿನ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದೊಂದು ದೊಡ್ಡ ದಾಖಲೆಯ ಸಂಗತಿ ಎಂದು ಹೇಳಿದರು. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಸ್ಲಾಂಬಾಷಾ, ಬೆಸ್ಕಾಂ ಎಇಇ ಪೀರ್ ಸಾಬ್ ಇದ್ದರು.