ಅನಾಮಿಕನ ವಿಚಾರಣೆಯ ಆಧಾರದಲ್ಲಿ ಮುಂದಿನ ತನಿಖೆ: ಡಾ.ಪರಮೇಶ್ವರ್

| Published : Aug 24 2025, 02:00 AM IST

ಅನಾಮಿಕನ ವಿಚಾರಣೆಯ ಆಧಾರದಲ್ಲಿ ಮುಂದಿನ ತನಿಖೆ: ಡಾ.ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ.ಪರಮೇಶ್ವರ್, ದೂರುದಾರ ಅನಾಮಿಕ ವ್ಯಕ್ತಿಯನ್ನು ಬಂಧಿಸಿದ ಕೂಡಲೇ ಎಸ್‌ಐಟಿ ತನಿಖೆ ನಿಲ್ಲುವುದಿಲ್ಲ, ತನಿಖೆ ಪೂರ್ಣಗೊಳ್ಳುತ್ತದೆ. ಪ್ರಕರಣದ ಹಿಂದೆ ಏನು ಜಾಲ ಇದೆ ಅದು ಪತ್ತೆಯಾಗಬೇಕಲ್ಲ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಧರ್ಮಸ್ಥಳ ಗ್ರಾಮದ ಪ್ರಕರಣದ ದೂರುದಾರ ಅನಾಮಿಕ ವ್ಯಕ್ತಿಯ ದೂರಿನ ಆಧಾರದಲ್ಲಿ ಇದುವರೆಗೆ ಎಸ್‌ಐಟಿ ತನಿಖೆ ನಡೆಸಿದೆ. ಈಗ ಆತನನ್ನು ಎಸ್‌ಐಟಿ ಬಂಧಿಸಿದ್ದು, ಆತನ ವಿಚಾರಣೆ ನಡೆಸಿ, ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ರಾಜ್ಯ ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೂರುದಾರ ಅನಾಮಿಕ ವ್ಯಕ್ತಿಯನ್ನು ಬಂಧಿಸಿದ ಕೂಡಲೇ ಎಸ್‌ಐಟಿ ತನಿಖೆ ನಿಲ್ಲುವುದಿಲ್ಲ, ತನಿಖೆ ಪೂರ್ಣಗೊಳ್ಳುತ್ತದೆ. ಪ್ರಕರಣದ ಹಿಂದೆ ಏನು ಜಾಲ ಇದೆ ಅದು ಪತ್ತೆಯಾಗಬೇಕಲ್ಲ ಎಂದರು.ಅನಾಮಿಕ ವ್ಯಕ್ತಿಯನ್ನು ಯಾಕೆ ಬಂಧಿಸಿದ್ದಾರೆ ಗೊತ್ತಿಲ್ಲ, ಎಸ್‌ಐಟಿ ಸ್ವತಂತ್ರವಾಗಿ ತನಿಖೆ ಮಾಡುತ್ತದೆ. ಸರ್ಕಾರ ಎಸ್‌ಐಟಿ ರಚಿಸಿದ ಮೇಲೆ ಅದು ಹೇಗೆ ತನಿಖೆ ಮಾಡಬೇಕು ಎಂದು ಯಾರೂ ನಿರ್ದೇಶನ ಮಾಡುವುದಕ್ಕಾಗುವುದಿಲ್ಲ ಎಂದು ತಿಳಿಸಿದರು.ಬಿಜೆಪಿಯವರು ಆರೋಪ ಮಾಡ್ತಾನೆ ಇರ್ತಾರೆ, ಯಾರ್ಯಾರೋ ಹೇಳಿಕೆಗಳನ್ನು ನೀಡುತಿದ್ದಾರೆ. ಆ ಹೇಳಿಕೆಗಳ ಅಧಾರದಲ್ಲಿ ತನಿಖೆ ಮಾಡುವುದಕ್ಕಾಗುವುದಿಲ್ಲ. ಎಸ್‌ಐಟಿ ಅಂತಿಮ ವರದಿ ನೀಡುವರೆಗೂ ತನಿಖೆ ಪೂರ್ಣಗೊಳ್ಳುವುದಿಲ್ಲ. ತನಿಖೆ ಬಗ್ಗೆ ಈಗ ಏನೂ ಹೇಳುವುದಕ್ಕಾಗುವುದಿಲ್ಲ, ಹೇಳಿದರೆ ತನಿಖೆ ಮೇಲೆ ಪರಿಣಾಮವಾಗುತ್ತದೆ. ಅದಕ್ಕೆ ಮೊದಲು ಯಾರು ಏನು ಹೇಳಿದರೂ ಅದು ಊಹಪೂಹ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು.ಅನನ್ಯಾ ಭಟ್ ತಾಯಿ ಸುಜಾತ ಭಟ್ ಕೂಡ ಎಸ್‌ಐಟಿ ತನಿಖೆಯ ಭಾಗವಾಗಿದ್ದಾರೆ. ಅವರ ಆರೋಪದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ವರದಿ ಬಂದ ಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದರು.ಪೂಂಜ ಸ್ಟೇ ತಂದಿದ್ದಾರೆ:

ಸಿಎಂ ಸಿದ್ದರಾಮಯ್ಯ ಹಿಂದು ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜ ಹೇಳಿದ್ದು 2023ರಲ್ಲಿ. ಅವರು ಆಗಲೇ ತಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಂತೆ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಅವರ ಮೇಲೆ ಕ್ರಮ ತಗೊಂಡಿಲ್ಲ. ತಡೆಯಾಜ್ಞೆ ತೆರವು ಆದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.