ಗದಗ ದೊಡ್ಡಾಟ ಕಲೆಯ ಶ್ರೀಮಂತ ನೆಲ

| Published : Jan 05 2025, 01:35 AM IST

ಸಾರಾಂಶ

ಆಧುನಿಕತೆ ಭರದಲ್ಲಿ ಸಿಲುಕಿ ನಶಿಸಿ ಹೋಗುತ್ತಿರುವ ಕಲೆ, ಕಲಾವಿದ, ಕಲಾ ಪ್ರಕಾರ ಉಳಿಸುವ ಅಗತ್ಯತೆ ಈ ಹೊತ್ತಿನ ತುರ್ತು.ಇಂತಹ ಪಾರಂಪರಿಕ ಕಲೆ ಆಧುನಿಕ ಬದುಕಿನ ಅಗತ್ಯಗಳಿಗೂ ದುಡಿಸಿಕೊಳ್ಳುವ ಅಗತ್ಯ

ಮುಳಗುಂದ: ಗದಗ ಜನಪದ ರಂಗಭೂಮಿಯ ಶ್ರೀಮಂತಿಕೆಯ ನೆಲ. ಜಿಲ್ಲೆಯಾದ್ಯಂತ ಇಂದಿಗೂ ಉಳಿದುಕೊಂಡು ಬಂದಿರುವ ದೊಡ್ಡಾಟ ಕಲೆಯೇ ಶ್ರೀಮಂತಿಕೆಗೆ ಸಾಕ್ಷಿ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸಂಶೋಧನ ಸಹಾಯಕ ಡಾ.ಅಂದಯ್ಯ ಅರವಟಗಿಮಠ ಹೇಳಿದರು.

ಸಮೀಪದ ಸೊರಟೂರು ಗ್ರಾಮದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ನಡೆದ ಕಲಾವಿದರ ಮಾಹಿತಿ ಹಾಗೂ ಹಸ್ತ ಪ್ರತಿಗಳ ಸಂಗ್ರಹಣ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕತೆ ಭರದಲ್ಲಿ ಸಿಲುಕಿ ನಶಿಸಿ ಹೋಗುತ್ತಿರುವ ಕಲೆ, ಕಲಾವಿದ, ಕಲಾ ಪ್ರಕಾರ ಉಳಿಸುವ ಅಗತ್ಯತೆ ಈ ಹೊತ್ತಿನ ತುರ್ತು.ಇಂತಹ ಪಾರಂಪರಿಕ ಕಲೆ ಆಧುನಿಕ ಬದುಕಿನ ಅಗತ್ಯಗಳಿಗೂ ದುಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಬಯಲಾಟ ಕರ್ನಾಟಕದ ಪ್ರಾಚೀನ ಜನಪದ ರಂಗ ಪ್ರಕಾರವಾಗಿದೆ. ಬಯಲಿನಲ್ಲಿ ಆಡುವ ಆಟವೇ ಬಯಲಾಟ. ವರ್ಷವಿಡಿ ಹೊಲಗದ್ದೆಗಳಲ್ಲಿ ದುಡಿಯುವ ಜನ ಬದುಕಿನ ಬೇಗುದಿ ಮತ್ತು ಒತ್ತಡಗಳಿಂದ ಪಾರಾಗಿ ಸಂತೋಷ ಹಂಚಿಕೊಳ್ಳಲು ಹಬ್ಬದ ಜತೆ ಬಯಲಾಟ ಪ್ರದರ್ಶನ ಹಮ್ಮಿಕೊಳ್ಳುವ ರೂಢಿ ನಮ್ಮಲ್ಲಿದೆ. ಕಲೆ, ಹಾಡು, ಕುಣಿತ, ಅಭಿನಯ ಮತ್ತು ವೇಷಭೂಷಣಗಳಿಂದ ಕೂಡಿದ ಈ ಕಲೆ ಅನಕ್ಷಸ್ಥರು, ಅಕ್ಷರಸ್ಥರು ಮತ್ತು ಬಾಲಕ ಬಾಲಕಿಯರಿಂದ ವಯಸ್ಸಾದ ಹಿರಿಯರನ್ನು ರಂಜಿಸುವ ಸಮರ್ಥವಾದ ಮಾಧ್ಯಮ ಎಂದು ತಿಳಿಸಿದರು.

ಬಯಲಾಟವನ್ನು ಹಿಂದಿನಿಂದಲೂ ಉಳಿಸಿ ಬೆಳೆಸಿಕೊಂಡು ಬಂದವರು ಕಲಾವಿದರು. ಜೀವನ ಪೂರ್ತಿ ಕಲೆಗಾಗಿ ದುಡಿದ ಈ ಕಲಾವಿದರನ್ನು ಕುರಿತಂತೆ ಅಕ್ಷರ ಮಾಧ್ಯಮದಲ್ಲಿ ಮಾಹಿತಿ ದೊರಕುವುದಿಲ್ಲ.ಈ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಮೂಡಲಪಾಯ ಬಯಲಾಟ, ದೊಡ್ಡಾಟ,ಸಣ್ಣಾಟ ಮತ್ತು ಶ್ರೀಕೃಷ್ಣ ಪಾರಿಜಾತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟಗಳ ಕಲಾವಿದರ ಸಾಧನೆಗಳ ಕುರಿತು ಮಾಹಿತಿ ಸಂಗ್ರಹ ಆರಂಭವಾಗಿದೆ. ಕಲಾವಿದರ ಚರಿತ್ರೆಯು ಗ್ರಂಥಸ್ಥಗೊಳ್ಳುತ್ತಿರುವುದು ಮಹತ್ವಪೂರ್ಣವಾದದು ಎಂದು ತಿಳಿಸಿದರು.

ಮಾಹಿತಿ ಸಂಗ್ರಹಣ ಕಾರ್ಯದಲ್ಲಿ ಗ್ರಾಮದ ಕಲ್ಮೇಶ್ವರ ದೊಡ್ಡಾಟ ಮೇಳ, ವೀರಭದ್ರೇಶ್ವರ ಬಯಲಾಟ ಸಂಘ, ಬಸವೇಶ್ವರ ದೊಡ್ಡಾಟ ಮೇಳ, ಕಾಲಬೈರವ ದೊಡ್ಡಾಟ ಮೇಳಗಳ ಸುಮಾರು 50 ಜನ ಕಲಾವಿದರ ಮಾಹಿತಿ ಸಂಗ್ರಹಿಸಲಾಯಿತು.

ಕೃಷ್ಣಾರ್ಜುನ ಕಾಳಗ, ರತಿ ಕಲ್ಯಾಣ, ಮೂರುವರೆ ವಜ್ರ, ದಕ್ಷಬ್ರಹ್ಮ ವಧೆ, ಅಂಧಕಾಸುರ ವಧೆ ದೊಡ್ಡಾಟಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಲಾಯಿತು.

ಈ ವೇಳೆ ದೊಡ್ಡಾಟ ತಂಡಗಳ ಮುಖ್ಯಸ್ಥ ಪರಶುರಾಮ ಹೂಗಾರ, ಚೆನ್ನಪ್ಪ ಗಿಡಕೆಂಚನ್ನವರ, ತಿರಕಪ್ಪ ಹಳ್ಳಿ, ರುದ್ರಪ್ಪ ಕಮ್ಮಾರ, ಬಸಲಿಂಗಪ್ಪ ಕುಸ್ಲಾಪುರ, ಯಲ್ಲಪ್ಪ ಹೂಗಾರ, ದೇವೆಂದ್ರಪ್ಪ ಮೇಟಿ ಮುಂತಾದವರು ಇದ್ದರು.