ದೊಡ್ಡಮನಿ ಅಭಿಮಾನಿಗಳ ಸಭೆಯಲ್ಲಿ ಗಡ್ಡದೇವರಮಠಗೆ ತರಾಟೆ

| Published : Mar 26 2024, 01:00 AM IST

ಸಾರಾಂಶ

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ತಮ್ಮ ಮುಂದಿನ ನಡೆಯ ಕುರಿತು ಚರ್ಚಿಸಲು ಸಂಜೆ ಅಭಿಮಾನಿಗಳ ಸಭೆ ಕರೆದಿದ್ದರು. ಗಡ್ಡದೇವರಮಠ ಆಗಮನದಿಂದಾಗಿ ಅದು ಗದ್ದಲ, ಗೊಂದಲದ ಗೂಡಾಗಿ ಮಾರ್ಪಟ್ಟಿತು.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಅಭಿಮಾನಿಗಳ ಸಭೆಗೆ ಆಹ್ವಾನವಿಲ್ಲದಿದ್ದರೂ ಹಾಜರಾಗಿದ್ದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರನ್ನು ತರಾಟೆಗೆ ತೆಗೆದುಕೊಂಡು, ವೇದಿಕೆಯಿಂದ ಹೊರಗೆ ಕಳುಹಿಸಿದ ಘಟನೆ ಸೋಮವಾರ ತಾಲೂಕಿನ ತಾರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಲೋಕಸಮರ ದಿನೇ ದಿನೇ ಕಾವೇರಿತ್ತಿದ್ದು, ಅದರಲ್ಲೂ ಶಿರಹಟ್ಟಿ ಮೀಸಲು ಕ್ಷೇತ್ರ ಹಾವೇರಿ-ಗದಗ ಕ್ಷೇತ್ರದ ಕೇಂದ್ರ ಬಿಂದುವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ತಮ್ಮ ಮುಂದಿನ ನಡೆಯ ಕುರಿತು ಚರ್ಚಿಸಲು ಸಂಜೆ ಅಭಿಮಾನಿಗಳ ಸಭೆ ಕರೆದಿದ್ದರು. ಗಡ್ಡದೇವರಮಠ ಆಗಮನದಿಂದಾಗಿ ಅದು ಗದ್ದಲ, ಗೊಂದಲದ ಗೂಡಾಗಿ ಮಾರ್ಪಟ್ಟಿತು.

ತಮ್ಮ ಬೆಂಬಲಿಗರ ಸಭೆ ನಡೆಸಿ, ನಾನು ಮರಳಿ ಕಾಂಗ್ರೆಸ್ ಸೇರ್ಪಡೆಗೆ ಬೆಂಗಳೂರಿನ ಹಿರಿಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಗದಗ ಜಿಲ್ಲಾ ನಾಯಕರು ಹಾಗೂ ಇನ್ನೂ ಕೆಲವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾನು ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇನೆ. ನೀವು ಏನು ಹೇಳುತ್ತೀರಿ ಅದನ್ನು ಮಾಡುತ್ತೇನೆ ಎಂದು ತಮ್ಮ‌ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆಯಲ್ಲಿ ಅಲ್ಲಿಗೆ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರ ತಂದೆ ಜಿ.ಎಸ್. ಗಡ್ಡದೇವರಮಠ ಆಗಮಿಸಿದರು.

ಇದರಿಂದ ಕುಪಿತರಾದ ದೊಡ್ಡಮನಿ ಅವರ ಅಭಿಮಾನಿಗಳು, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ? ನಿಮ್ಮನ್ನು ಯಾರು ಕರೆದಿದ್ದಾರೆ? ರಾಮಕೃಷ್ಣ ದೊಡ್ಡಮನಿ ಅವರನ್ನು ಪಕ್ಷದಿಂದ ಹೊರಹಾಕಿದಾಗ ಎಲ್ಲಿ ಹೋಗಿದ್ದೀರಿ? ನಿಮ್ಮ ಮಗ ಇಲೆಕ್ಷನ್ ನಿಂತಿದ್ದಾರೆ. ಅದಕ್ಕಾಗಿ ಈಗ ಬಂದಿರಿ ಎಂದು ಗಡ್ಡದೇವರಮಠ ಹಾಗೂ ರಾಮಣ್ಣ ಲಮಾಣಿ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಅವರು ವೇದಿಕೆ ಹತ್ತಲು ಪ್ರಯತ್ನಿಸುತ್ತಿದ್ದಂತೆ ತೀವ್ರ ನೂಕಾಟ, ತಳ್ಳಾಟ ಉಂಟಾಯಿತು. ಸಭೆಯಲ್ಲಿದ್ದ ಕೆಲ ಕಾರ್ಯಕರ್ತರು ಇಬ್ಬರೂ ನಾಯಕರನ್ನು ಏಕ ವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು. ನಂತರ ಕಡ್ಡಾಯವಾಗಿ ಅವರು ವೇದಿಕೆ ಹತ್ತುವುದು ಬೇಡವೇ ಬೇಡ ಎಂದು ಪಟ್ಟು ಹಿಡಿದರು. ಪರಿಸ್ಥಿತಿ ಅರಿತ ಅಲ್ಲಿದ್ದ ಕೆಲವರು ಇಬ್ಬರನ್ನು ಕಾರ್ಯಕ್ರಮ ನಡೆಯುವ ಸ್ಥಳದ ಪಕ್ಕದಲ್ಲಿಯೇ ಕೂಡಿಸಿ ಸಮಾಧಾನ ಪಡಿಸಿದರು.