ಸಾರಾಂಶ
ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತು. ಅಲ್ಲಿಂದ ಶುರುವಾದ ಬಿಜೆಪಿಯ ಗೆಲುವಿನ ನಾಗಾಲೋಟವನ್ನು ತಡೆಯಲು ಇದುವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನಡೆದ ಲೋಕಸಭೆಯ ಎಲ್ಲ ಚುನಾವಣೆಗಳಲ್ಲಿ ಬಹುಪಾಲು ಗೆಲುವು ಕಾಂಗ್ರೆಸ್‌ನದ್ದೆ ಆಗಿತ್ತು. ಆದರೆ, 2004ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆಯಿತು. ಕೇಸರಿ ಪಕ್ಷದ ಪಿ.ಸಿ.ಗದ್ದಿಗೌಡರ 1 ಲಕ್ಷ ಮತಗಳ ಅಂತದಿಂದ ಗೆದ್ದು ದೆಹಲಿಯತ್ತ ಮುಖಮಾಡಿದ್ದರು. ಲೋಕಸಭೆ ಅಸ್ತಿತ್ವಕ್ಕೆ ಬಂದಾಗಿನಿಂದ ಜನಸಂಘ, ಮತ್ತೆ ಕೆಲವು ಸಂದರ್ಭದಲ್ಲಿ ಜನತಾಪಕ್ಷ ಬೆಂಬಲಿಸುತ್ತ ಬಂದಿದ್ದ ಬಿಜೆಪಿ 2004ರಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸಿತು. ಕಾಂಗ್ರೆಸ್ ಪಕ್ಷವನ್ನು ಬಾಗಲಕೋಟೆಯಲ್ಲಿ ಸೋಲಿಸುವ ಮೂಲಕ ಪಕ್ಷಕ್ಕೆ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾಯಿತು.ರಾಜ್ಯದಲ್ಲಿ 3 ದಶಕಗಳ ಕಾಲ ಪಕ್ಷ ಸಂಘಟನೆ ಮತ್ತು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಿಜೆಪಿ ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವ ಗುರಿ ಹೊಂದಿತ್ತು. ಆ ದೃಷ್ಟಿಯಿಂದ ಹೊರಟ ಪಕ್ಷದ ನಾಯಕರಿಗೆ ಕಂಡಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಜನತಾ ಪರಿವಾರ. ಅದರಲ್ಲೂ ಲಿಂಗಾಯತ ಸಮುದಾಯದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, 2004ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಎದುರಿಸಲು ನಿರ್ಧರಿಸಿತು. ಆಗ ಬಾಗಲಕೋಟೆಯಲ್ಲಿ ಲೋಕಸಭೆಗೆ ಸಮರ್ಥ ಅಭ್ಯರ್ಥಿಯಾಗಿ ಕಂಡಿದ್ದು ಪಿ.ಸಿ.ಗದ್ದಿಗೌಡರ.
ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ದಿ.ಅನಂತಕುಮಾರ ಅವರು ರಾಮಕೃಷ್ಣ ಹೆಗಡೆ ಬೆಂಬಲಿಗರಾದ ಪಿ.ಸಿ.ಗದ್ದಿಗೌಡರ, ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಕೆ.ಬಿ.ಶಾಣಪ್ಪ ಸೇರಿದಂತೆ 40ಕ್ಕೂ ಹೆಚ್ಚು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಜಾತಿ ಮತ್ತು ಜನ ಬೆಂಬಲದ ಮೂಲಕ ಪಕ್ಷವು ಚುನಾವಣೆಗೆ ದುಮುಕಿದಾಗ ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಗೆಲವು ಕಂಡಿದ್ದು ಪಿ.ಸಿ.ಗದ್ದಿಗೌಡರ.1999ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಗೆಲವು ಕಂಡ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಶಾಸಕರು ವೈಫಲ್ಯ ಕಂಡಿದ್ದರು. ಹಿಂದು ಸಂಘಟನೆಯ ಅಂದಿನ ಮುಂಚೂಣಿ ನಾಯಕ ಪ್ರಮೋದ ಮುತಾಲಿಕ ಜಿಲ್ಲೆಯಲ್ಲಿ ಭಜರಂಗದಳದ ಹೆಸರಿನಲ್ಲಿ ತಳಮಟ್ಟದ ಸಂಘಟನೆ ನಡೆಸಿದ್ದರು.
ಸಿಎಂ ಎಸ್.ಎಂ.ಕೃಷ್ಣಾ ಅವಧಿಯಲ್ಲಿ ರಾಜ್ಯ ಸತತ 4 ವರ್ಷ ಕಂಡ ಭೀಕರ ಬರಗಾಲದಿಂದ ಜನರು ಕಂಗೆಟ್ಟಿದ್ದರು. ಬಹುಸಂಖ್ಯಾತ ಲಿಂಗಾಯತ ಸಮುದಾಯ ಬಿಜೆಪಿ ಜೊತೆ ಗುರುತಿಸಿಕೊಂಡಿತ್ತು. ಈ ಎಲ್ಲ ಕಾರಣಗಳಿಂದಾಗಿ 2004 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗದ್ದಿಗೌಡರ ಅವರು ಕಾಂಗ್ರೆಸ್‌ನ ಆರ್.ಎಸ್.ಪಾಟೀಲರನ್ನು ಸೋಲಿಸಲು ಸಾಧ್ಯವಾಯಿತು.ಪಿ.ಸಿ.ಗದ್ದಿಗೌಡರ ಗೆಲವು:
2004ರ ಲೋಕಸಭೆಯ ಚುನಾವಣೆಯ ಫಲಿತಾಂಶದ ಆರಂಭದಿಂದಲೂ ಬಿಜೆಪಿಯ ಪಿ.ಸಿ.ಗದ್ದಿಗೌಡರ ಮುಂದಿದ್ದರು. 99ರಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಸಂಸದ ಆರ್.ಎಸ್.ಪಾಟೀಲ ವಿರುದ್ಧ ಬಿಜೆಪಿಯ ಪಿ.ಸಿ.ಗದ್ದಿಗೌಡರ ನಿರಾಯಾಸವಾಗಿ ಗೆಲವು ಕಂಡರು. ಗದ್ದಿಗೌಡರಿಗೆ ಅಂದು 4,59,451 ಮತಗಳು ಬಿದ್ದರೆ, ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಪಾಟೀಲರಿಗೆ 2,92,068 ಮತಗಳು ಮಾತ್ರ ಬಿದ್ದಿದ್ದವು. ಅಂದಿನ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಧರೆಪ್ಪ ಸಾಂಗ್ಲೀಕರ ಅವರು ಕೇವಲ 64,075 ಮತಗಳು ಮಾತ್ರ ಪಡೆಯಲು ಸಾಧ್ಯವಾಗಿತ್ತು. ಈವರೆಗೆ ನಡೆದ ಎಲ್ಲಾ ಚುನಾವಣೆಯ ದಾಖಲೆಗಳನ್ನು ಮುರಿದು ಪಿ.ಸಿ.ಗದ್ದಿಗೌಡರ 1,67,383 ಮತಗಳ ಅಂತರದಿಂದ ಗೆಲವು ತಮ್ಮದಾಗಿಸಿಕೊಂಡಿದ್ದರು. ಒಟ್ಟು ಮತದಾನ 868472 (ಶೇ.65.20) ಆಗಿತ್ತು.-------
ಬಾಕ್ಸ್..ಕೋಟೆ ನಾಡು ಈಗ ಬಿಜೆಪಿ ಭದ್ರಕೋಟೆ
ಜನತಾ ಪರಿವಾರದ ರಾಮಕೃಷ್ಣ ಹೆಗಡೆಯವರ ಜೊತೆಯಲ್ಲಿದ್ದ ಪಿ.ಸಿ.ಗದ್ದಿಗೌಡರ 2004ರಲ್ಲಿ ಬಿಜೆಪಿ ಸೇರಿದರು. ಬಿಜೆಪಿಯಿಂದ ಅಭ್ಯರ್ಥಿಯಾದಾಗ ಆರಂಭದಲ್ಲಿ ಎಲ್ಲರೂ ಇವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರಣ ಅಂದಿನ ಸಂಸದ ಆರ್.ಎಸ್.ಪಾಟೀಲರ ಜನಪ್ರಿಯತೆ. ಆದರೆ, ಗದ್ದಿಗೌಡರ ಬಗ್ಗೆ ಇದ್ದ ಜನತೆಯಲ್ಲಿನ ಗೌರವ, ಅವರು ಎಲ್ಲರ ಜೊತೆ ಬೆರೆಯುವ ಸ್ವಭಾವ, ಅದೇ ತಾನೆ ಜಿಲ್ಲೆಯಲ್ಲಿನ ಎಲ್ಲಾ ಭಾಗದಲ್ಲಿ ಸಂಘಟನೆಗೊಂಡಿದ್ದ ಬಿಜೆಪಿಯ ಕಾರ್ಯಕರ್ತರ ಪಡೆಯ ನೆರವಿನಿಂದ ಜಿಲ್ಲೆಯ ಎಲ್ಲಾ ವಿಧಾನಸಭೆಯ ಮತಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಲು ಸಾಧ್ಯವಾಯಿತು. 2004ರ ನಂತರ ಬಾಗಲಕೋಟೆಯಲ್ಲಿ ಬಿಜೆಪಿಯ ಬೇರುಗಳು ಗಟ್ಟಿಯಾಗಿವೆ.