ಸಾರಾಂಶ
ಮೂಕನ ಕೈಯಲ್ಲಿ ಅರಳಿದ ಗಜಮುಖ
ರುದ್ರೇಶ್ ಹೊನ್ನೇನಹಳ್ಳಿ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆಸಾಧಿಸುವ ಛಲ ಮತ್ತು ಅದಕ್ಕೆ ಸರಿಯಾದ ಪ್ರತಿಭೆ ಇದ್ದರೆ ಎಲ್ಲ ನ್ಯೂನತೆಯನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಕಂಬಾಳು ಗ್ರಾಮದ ಗಣೇಶ ತಯಾರಿಸುವ ರೇಣುಕಪ್ಪ ಸಾಕ್ಷಿಯಾಗಿದ್ದಾರೆ. ಕಿವಿ ಕೇಳಿಸದೇ, ಮಾತು ಬಾರದಿರುವ ಇವರು ಹುಟ್ಟು ಕೊರತೆಯನ್ನು ಮೀರಿ ಸುಂದರ ಗಣಪತಿ ಮೂರ್ತಿಗಳನ್ನು ಸೃಷ್ಟಿಸಿದ್ದಾರೆ.
ಸೋಂಪುರ ಹೋಬಳಿಯ ಕಂಬಾಳು ಗ್ರಾಮದ ನಿವಾಸಿಯಾಗಿರುವ ರೇಣುಕಪ್ಪ ಅವರು ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಈ ಮಣ್ಣಿನ ಕಾಯಕವನ್ನು ಮುಂದುವರಿಸಿದ್ದಾರೆ. 40 ವರ್ಷಗಳಿಂದ ಶ್ರದ್ಧೆ , ಬದ್ಧತೆಯಿಂದ ಗಣೇಶನ ಮೂರ್ತಿಗಳನ್ನು ಮಾಡುತ್ತಾ ಬಂದಿದ್ದಾರೆ. ಇವರು ಅಕ್ಕಪಕ್ಕದ ಗ್ರಾಮಗಳ ಕೆರೆಯಿಂದ ಯೋಗ್ಯವಾದ ಮಣ್ಣು ಸಂಗ್ರಹಿಸಿ ತಂದು, ಗುಡ್ಡೆ ಹಾಕಿ ನಿತ್ಯ ಮೂರ್ತಿಗಳ ನಿರ್ಮಾಣಕ್ಕೆ ಹದಗೊಳಿಸಿ ಕಲೆಯ ಕಾಯಕ ಮುಂದುವರಿಸಿದ್ದಾರೆ.ಸರಳ ಗಣಪನ ಮೂರ್ತಿಗೆ ಒತ್ತು: ಮಣ್ಣಿನಿಂದ ಮಾಡುವ ಗಣಪನಿಗೆ ಜೀವ ತುಂಬುವ ಕಲೆ ರೇಣುಕಪ್ಪನವರಿಗೆ ಕರಗತವಾಗಿದೆ. ಒಂದು, ಎರಡು, ಮೂರು ಅಡಿ ಗಣಪನ ಮೂರ್ತಿಯ ಜೊತೆಗೆ 5-6 ಅಡಿ ಎತ್ತರದ ಮೂರ್ತಿಗಳವರೆಗೆ ವಿಭಿನ್ನವಾದ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ತಯಾರಿಸುತ್ತಾರೆ. ಗಣೇಶ ಚತುರ್ಥಿಗೆ ಮೂರು ತಿಂಗಳ ಮುಂಚಿತವಾಗಿ ಈ ಕೆಲಸಕ್ಕೆ ತೊಡಗಿಸಿಕೊಳ್ಳುತ್ತಾರೆ.ಗಾರ್ಮೆಂಟ್ಸ್‌ನಲ್ಲಿ ಕಾಯಕ
ವರ್ಷದಲ್ಲಿ 3 ತಿಂಗಳು ಗಣೇಶ ಮೂರ್ತಿಗಳ ಸಿದ್ಧಪಡಿಸುವ ಕೆಲಸ ಮಾಡುವ ರೇಣುಕಪ್ಪ ಅವರು ಉಳಿದ ಸಮಯದಲ್ಲಿ ಗಾರ್ಮೆಂಟ್ಸ್ ನಲ್ಲಿ ಟೈಲರ್ ಕಾಯಕದಲ್ಲಿ ನಿರತರಾಗಿರುತ್ತಾರೆ. ನಡುವೆ ಬೇರೆ ವಿಗ್ರಹಗಳು ಬೇಕು ಎಂದು ಬೇಡಿಕೆ ಬಂದರೆ ಅವುಗಳನ್ನು ಸಿದ್ಧಪಡಿಸಿ ಕೊಡುತ್ತಾರೆ.ಸಿದ್ಧಗಂಗಾ ಮಠಕ್ಕೂ ಗಣಪನ ಕೊಡುಗೆ
ಪ್ರತಿಷ್ಟಿತ ಶ್ರೀ ಸಿದ್ಧಗಂಗಾ ಮಠದಲ್ಲಿಯೂ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ಆಚರಿಸುವುದು ವಾಡಿಕೆ. ಅದರಂತೆ ರೇಣುಕಪ್ಪನವರು ಸುಮಾರು ವರ್ಷಗಳಿಂದ ಸಿದ್ಧಗಂಗಾ ಮಠಕ್ಕೆಂದೇ ಒಂದು ಗಣಪನ ಮೂರ್ತಿಯನ್ನು ತಯಾರಿಸಿ ಉಚಿತವಾಗಿ ನೀಡುವ ಪ್ರತೀತಿ ರೂಢಿಸಿಕೊಂಡಿದ್ದಾರೆ.