ಅಂಬಾರಿ ಹೊತ್ತು ''ಸಿಕ್ಸರ್'' '' ಬಾರಿಸಿದ ಅಭಿಮನ್ಯು...!

| Published : Oct 03 2025, 01:07 AM IST

ಅಂಬಾರಿ ಹೊತ್ತು ''ಸಿಕ್ಸರ್'' '' ಬಾರಿಸಿದ ಅಭಿಮನ್ಯು...!
Share this Article
  • FB
  • TW
  • Linkdin
  • Email

ಸಾರಾಂಶ

- ರಾಜಮಾರ್ಗದಲ್ಲಿ ಲಕ್ಷಾಂತರ ಜನಸ್ತೋಮ ಮಧ್ಯೆ ಜಂಬೂಸವಾರಿ

- ಸತತ 6ನೇ ಬಾರಿ ಅಂಬಾರಿ ಹೊತ್ತು ಗಾಂಭೀರ್ಯದ ಹೆಜ್ಜೆ ಹಾಕಿದ ಕ್ಯಾಪ್ಟನ್

- 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಜೈ ಜೈ ಎನಿಸಿಕೊಂಡ ಗಜರಾಜ

- ರಾಜಮಾರ್ಗದಲ್ಲಿ ಲಕ್ಷಾಂತರ ಜನಸ್ತೋಮ ಮಧ್ಯೆ ಜಂಬೂಸವಾರಿ

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಯು 2025ನೇ ಜಂಬೂಸವಾರಿಯಲ್ಲಿ 750 ಕೆ.ಜಿ. ಚಿನ್ನದ ಅಂಬಾರಿಯನ್ನು ಹೊರುವ ಮೂಲಕ ''''''''ಸಿಕ್ಸರ್'''''''' ಬಾರಿಸಿತು.

ಹೌದು, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆಯು ಸತತ 6ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ಗಾಂಭೀರ್ಯದ ಹೆಜ್ಜೆ ಹಾಕುವ ಮೂಲಕ ಜಂಬೂಸವಾರಿಯನ್ನು ಯಶಸ್ವಿಗೊಳಿಸಿತು.

ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ದೂರವನ್ನು 750 ಕೆ.ಜಿ. ಚಿನ್ನದ ಅಂಬಾರಿಯನ್ನು ನಿರಾಸದಾಯಕವಾಗಿ ಹೊತ್ತು ಸಾಗುವ ಮೂಲಕ ತನ್ನ ಭುಜಬಲದ ಪರಾಕ್ರಮವನ್ನು ಅಭಿಮನ್ಯು ಮತ್ತೊಮ್ಮೆ ಸಾಬೀತುಪಡಿಸಿತು.

ಕಳೆದ 26 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ 59 ವರ್ಷದ ಅಭಿಮನ್ಯು ಆನೆಗೆ 2020ನೇ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಲಭಿಸಿತು. ಕೊರೋನಾ ಕಾರಣಕ್ಕಾಗಿ 2020 ಮತ್ತು 2021ನೇ ಸಾಲಿನಲ್ಲಿ ಅರಮನೆ ಆವರಣದಲ್ಲಿ 500 ಮೀಟರ್ ಅಷ್ಟೇ ಅಂಬಾರಿ ಹೊತ್ತಿತ್ತು.

2022, 2023 ಮತ್ತು 2024ನೇ ದಸರೆಯಲ್ಲಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ತನ್ನ ಭುಜ ಬಲದ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಅಭಿಮನ್ಯು ಯಶಸ್ವಿ ಆಗಿದೆ.

ವಿಜಯದಶಮಿ ಮೆರವಣಿಗೆಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತಂದ ಅಭಿಮನ್ಯು ಆನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿತು. ನಂತರ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಜೊತೆಗೆ ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಾ, ಎಲ್ಲರಿಗೂ ವಂದಿಸುತ್ತಾ ಸಾಗುವ ಮೂಲಕ ದಸರಾ ಜಂಬೂಸವಾರಿಯನ್ನು ವಿಜೃಂಭಣೆಗೊಳಿಸಿತು.

ಚಾಮುಂಡೇಶ್ವರಿದೇವಿಯ ಉತ್ಸವ ಮೂರ್ತಿಯುಳ್ಳ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆಯು ಗಂಭೀರವಾಗಿ ಸಾಗುತ್ತಿದ್ದರು, ಅದರ ಮೇಲೆ ಸಾರಥಿ ಸ್ಥಾನದಲ್ಲಿದ್ದ ಮಾವುತ ವಸಂತ ಅವರು, ನಗುಮುಖದಿಂದಲೇ ಜನರತ್ತ ಕೈಬೀಸುತ್ತಾ ಸರಾಗಾವಾಗಿ ಅಭಿಮನ್ಯುನನ್ನು ಮುನ್ನಡೆಸುತ್ತಾ ಸಾಗುವ ಮೂಲಕ ನೆರೆದಿದ್ದ ಲಕ್ಷಾಂತರ ಜನರ ಮನಗೆದ್ದರು.

----

ಸಿಕ್ಸರ್ ಅಭಿಮನ್ಯು

ದಸರಾ ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು ಆನೆಯು ನಂತರ ನೌಫತ್ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ ದಸರೆಯಲ್ಲಿ ಮರದ ಅಂಬಾರಿಯನ್ನು 7- 8 ವರ್ಷ ಹೊತ್ತಿರುವ ಅನುಭವ ಹೊಂದಿತ್ತು. ಈಗ 6ನೇ ಬಾರಿ ಅಭಿಮನ್ಯು ಆನೆಯು ಅಂಬಾರಿ ಹೊರುವಲ್ಲಿ ಯಶಸ್ವಿಯಾಯಿತು.

ಅಭಿಮನ್ಯು ಆನೆಯನ್ನು ಮುನ್ನೆಡೆಸುವಲ್ಲಿ ಮಾವುತ ವಸಂತ ಮತ್ತು ಕಾವಾಡಿ ರಾಜು ಯಶಸ್ವಿಯಾದರು. ಇವರಿಗೆ ಅರಣ್ಯ ಇಲಾಖೆಯ ಸಿಬ್ಬಂದಿ, ಇತರೆ ಮಾವುತರು ಮತ್ತು ಕಾವಾಡಿಗಳು ಸಾಥ್ ನೀಡುವ ಮೂಲಕ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದರು.

----

ಇವೇ ಅಂಬಾರಿ ಆನೆಗಳು

ಮೈಸೂರು ದಸರಾ ಮೆರವಣಿಗೆಯಲ್ಲಿ ಮೊದಲು ದ್ರೋಣ ಆನೆಯು ಅಂಬಾರಿ ಹೊರುತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ವರ್ಷ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಯು 2012 ರಿಂದ 2019 ರವರೆಗೆ ಸತತವಾಗಿ 8 ಬಾರಿ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿ ಸೈ ಎನಿಸಿಕೊಂಡಿತು. ಅರ್ಜುನ ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ 2020 ರಿಂದ ಅಭಿಮನ್ಯು ಆನೆಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದೆ. ಆರು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿರವ ಅಭಿಮನ್ಯು ಆನೆಗೆ ಮುಂದಿನ ವರ್ಷ 60 ವರ್ಷ ಆಗಲಿದೆ. ಹೀಗಾಗಿ, 2026ನೇ ಸಾಲಿನಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಅಭಿಮನ್ಯು ಹಿಂದೆ ಸರಿಯಲಿದ್ದು, ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಬೇರೊಂದು ಆನೆಯು ಅಂಬಾರಿ ಹೊರುವ ನಿರೀಕ್ಷೆ ಇದೆ.