ಗಾಳಿಬೀಡು: ‘ಏಕ್‌ ಪೇಡ್‌ ಮಾ ಕೇ ನಾಂ’ ಅಭಿಯಾನ ಉದ್ಘಾಟನೆ

| Published : Aug 23 2024, 01:12 AM IST

ಗಾಳಿಬೀಡು: ‘ಏಕ್‌ ಪೇಡ್‌ ಮಾ ಕೇ ನಾಂ’ ಅಭಿಯಾನ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ತಾಲೂಕಿನ ಗಾಳೀಬೀಡು ಗ್ರಾ.ಪಂ.ನ ಚಪ್ಪಂಡ ಕೆರೆ ಅಮೃತ ಸರೋವರದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೇ ನಾಮ್) ಅಭಿಯಾನವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿ ದಿನಗಳಲ್ಲಿಯೇ ಪರಿಸರದ ಮಹತ್ವ ಮತ್ತು ಅದರ ರಕ್ಷಣೆ ಕುರಿತು ಅರಿವು ಬೆಳೆಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಗಾಳೀಬೀಡು ಗ್ರಾ.ಪಂ.ನ ಚಪ್ಪಂಡ ಕೆರೆ ಅಮೃತ ಸರೋವರದಲ್ಲಿ ನಡೆದ ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೇ ನಾಮ್) ಅಭಿಯಾನವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವ್ಯಕ್ತಿಗೂ ಇಬ್ಬರು ತಾಯಂದಿರು ಇರುತ್ತಾರೆ. ಒಬ್ಬರು ಜನ್ಮ ನೀಡಿದ ತಾಯಿ, ಮತ್ತೊಬ್ಬರು ಪ್ರಕೃತಿ ಮಾತೆ. ಈ ನಿಟ್ಟಿನಲ್ಲಿ ಗಿಡ ನೆಟ್ಟು ಅದನ್ನು ರಕ್ಷಣೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.

ವಿಶ್ವ ಪರಿಸರ ದಿನದ ಅಂಗವಾಗಿ ‘ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೇ ನಾಮ್)’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ 103 ಗ್ರಾ.ಪಂ.ಗಳಲ್ಲಿಯೂ ಗಿಡ ನೆಡುವ ಕಾರ್ಯಕ್ರಮವನ್ನು ಸಾರ್ವಜನಿಕರು ಮತ್ತು ಗ್ರಾ.ಪಂ.ಅಧಿಕಾರಿ, ಸಿಬ್ಬಂದಿಗಳು ಹಾಗೂ ಚುನಾಯಿತ ಸದಸ್ಯರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಬಿ.ಜಿ.ಉಷಾ, ಉಪಾಧ್ಯಕ್ಷ ಕನ್ನಿಕಂಡ ಪೆಮ್ಮಯ್ಯ, ಸದಸ್ಯರಾದ ಪ್ರದೀಪ್, ಸರೋಜ, ಪುಷ್ಪಾವತಿ ಮತ್ತು ಜಾನಕಿ ಗಿಡ ನೆಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.

ಜಿ.ಪಂ. ಉಪಕಾರ್ಯದರ್ಶಿ ಜಿ.ಧನರಾಜು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಶಿಕಿರಣ್, ಎಡಿಪಿಸಿ ಮಹೇಂದ್ರ, ಜಿಲ್ಲಾ ಎಂಐಎಸ್ ಸಂಯೋಜಕ ಗಣೇಶ್ ಕಾಮತ್, ಗ್ರಾ.ಪಂ.ಸಿಬ್ಬಂದಿ ಇದ್ದರು.