ಕೆಂಪು ಕಲ್ಲಿನ ಗಣೇಶನ ರಥೋತ್ಸವದಲ್ಲಿ ವಿರಾಜಮಾನನಾದ ಪಂಚಲೋಹದ ಗಣಪ

| Published : Sep 09 2024, 01:37 AM IST / Updated: Sep 09 2024, 01:38 AM IST

ಕೆಂಪು ಕಲ್ಲಿನ ಗಣೇಶನ ರಥೋತ್ಸವದಲ್ಲಿ ವಿರಾಜಮಾನನಾದ ಪಂಚಲೋಹದ ಗಣಪ
Share this Article
  • FB
  • TW
  • Linkdin
  • Email

ಸಾರಾಂಶ

ನವಲಗುಂದ ಪಟ್ಟಣದ ವಿನಾಯಕಪೇಟನಲ್ಲಿನ ಕೆಂಪು ಕಲ್ಲಿನ ಗಣಪ ಎಂದರೆ ಭಕ್ತರಿಗೆ ಭಕ್ತಿ ಭಾವ ಉಕ್ಕುತ್ತದೆ. ಸೆ. 7ರಂದು ಪ್ರತಿಷ್ಠಾಪನೆಗೊಂಡಿರುವ ಹಾಗೂ ಸೆ. 15ರಂದು ಸಂಜೆ ಅದ್ಧೂರಿ ರಥೋತ್ಸವದೊಂದಿಗೆ ವಿಸರ್ಜನೆ ನೆರವೇರಲಿದೆ.

ನವಲಗುಂದ: ಪಟ್ಟಣದ ವಿನಾಯಕಪೇಟನಲ್ಲಿನ ಕೆಂಪು ಕಲ್ಲಿನ ಗಣಪ ಎಂದರೆ ಭಕ್ತರಿಗೆ ಭಕ್ತಿ ಭಾವ ಉಕ್ಕುತ್ತದೆ. ಸೆ. 7ರಂದು ಪ್ರತಿಷ್ಠಾಪನೆಗೊಂಡಿರುವ ಹಾಗೂ ಸೆ. 15ರಂದು ಸಂಜೆ ಅದ್ಧೂರಿ ರಥೋತ್ಸವದೊಂದಿಗೆ ವಿಸರ್ಜನೆ ನೆರವೇರಲಿದೆ.

ಪೇಶ್ವೆ ಮಹಾರಾಜರ ಕಾಲದ ಈ ಗಣಪತಿ ಬೇಡಿದ ವರ ನೀಡುವ ಇಷ್ಟಾರ್ಥ ಸಿದ್ಧಿವಿನಾಯಕನಾಗಿ ಹೆಸರು ಪಡೆದಿದೆ. ಉತ್ತರ ಕನ್ನಡದ ಇಡಗುಂಜಿಯಲ್ಲಿ ನಡೆಯುವ ಗಣಪತಿ ಜಾತ್ರಾ ಮಹೋತ್ಸವದಂತೆ ಇಲ್ಲಿ 8 ದಿನಗಳ ಕಾಲ ವಿವಿಧ ವಾಹನಗಳ ಮೇಲೆ ಗಣಪತಿ ಮೆರವಣಿಗೆ ನಡೆಯುತ್ತದೆ. 9ನೇ ದಿನ ಗಣೇಶನ ರಥೋತ್ಸವ ಸಂಭ್ರಮದಿಂದ ಜರಗುತ್ತದೆ. ಇದು ರಾಜ್ಯದಲ್ಲಿಯೇ ಗಣಪತಿಯ 2ನೇ ರಥೋತ್ಸವ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ಜತೆಗೆ ಚತುರ್ಥಿ ಸಂದರ್ಭದಲ್ಲಿ ಪೂಜೆಗೊಳ್ಳುವ ಪಂಚಲೋಹದ ಗಣಪತಿ ಮೂರ್ತಿ ವೈಶಿಷ್ಟಮಯವಾಗಿದೆ.

ಇತಿಹಾಸ:

ಪುಣೆಯ ಪೇಶ್ವೆ ಅವರ ಆಡಳಿತಾವಧಿಯಲ್ಲಿ ನವಲಗುಂದದ ಶಿರಸಂಗಿ ದೇಸಾಯಿ ಸಂಸ್ಥಾನ ಜಾಯಗೊಂಡ ದೊರೆಯ ಉಸ್ತುವಾರಿಯಲ್ಲಿತ್ತು. ಆ ಕಾಲದಲ್ಲಿ ಪೇಶ್ವೆ ಮಹಾರಾಜರು ನವಲಗುಂದಕ್ಕೆ ಭೇಟಿ ನೀಡಿದ್ದರು. 2 ದಿನ ಇಲ್ಲಿಯೇ ತಂಗಿದ್ದ ಅವರು ಗಣೇಶನ ಆರಾಧಕರಾಗಿದ್ದರು. ಮರುದಿನವೇ ಗಣೇಶ ಚತುರ್ಥಿ ಇದ್ದುದರಿಂದ ಪೇಶ್ವೆ ಮಹಾರಾಜರು ನಾವು ಗಣಪತಿ ಪೂಜಿಸಿಯೇ ತೆರಳುತ್ತೇವೆ ಎಂದರು. ಆದರೆ, ಆಗ ಇಲ್ಲಿ ಗಣೇಶ ದೇವಸ್ಥಾನ ಇರಲಿಲ್ಲ. ತಕ್ಷಣ ಜಾಗೃತಗೊಂಡ ಜಾಯಗೊಂಡ ದೊರೆ ಗಣಪತಿ ಮೂರ್ತಿ ತಯಾರಕರನ್ನು ಹುಡುಕಿ ಒಂದೇ ದಿನದಲ್ಲಿ ಗಣಪತಿ ಮೂರ್ತಿ ತಯಾರಿಸುವಂತೆ ಕೋರುತ್ತಾರೆ. ಅದರಂತೆ ಕಲಾವಿದ ಒಂದೇ ಕೆಂಪು ಕಲ್ಲಿನಲ್ಲಿ ಕಮಲ ಆಸನದ ಗಣೇಶನನ್ನು ನಿರ್ಮಿಸಿ ಪೂಜೆಗೆ ಸಿದ್ಧಗೊಳಿಸುತ್ತಾನೆ. ಸಂತುಷ್ಟಗೊಂಡ ಪೇಶ್ವೆ ಮಹಾರಾಜರಂತೂ ಗಣೇಶ ಚತುರ್ಥಿಯನ್ನು ನವಲಗುಂದದಲ್ಲಿಯೇ ಆಚರಿಸುತ್ತಾರೆ. ಗಣೇಶನಿಗೆ ದೇವಸ್ಥಾನ ನಿರ್ಮಾಣ ಮಾಡುವಂತೆ ಹಾಗೂ ಬಂಗಾರದ ಉತ್ಸವ ಮೂರ್ತಿಯನ್ನು ನಿರ್ಮಿಸುವಂತೆ ಜಾಯಗೊಂಡ ದೊರೆಗಳಿಗೆ ಸೂಚಿಸಿ ಪುಣೆಗೆ ತೆರಳುತ್ತಾರೆ ಎಂಬ ಇತಿಹಾಸವಿದೆ.

8 ದಿನ ಮೆರವಣಿಗೆ 9ನೇ ದಿನ ರಥೋತ್ಸವ:

ಗಣೇಶ ಚತುರ್ಥಿಯ ಸಂದರ್ಭದಲ್ಲಿ 1ನೇ ದಿನ ಮಯೂರ, 2ನೇ ದಿನ ಮೂಷಿಕ, 3ನೇ ದಿನ ಅಶ್ವ, 4ನೇ ದಿನ ನಂದಿ, 5ನೇ ದಿನ ಗಂಡ ಭೇರುಂಡ, 6ನೇ ದಿನ ಗಜ, 7ನೇ ದಿನ ಉಘ್ರ ನರಸಿಂಹ, 8ನೇ ದಿನ ಕಮಲ ವಾಹನಗಳ ಮೇಲೆ ಮೆರವಣಿಗೆ ನಡೆಯುತ್ತದೆ. ಕೊನೆಯ 9ನೇ ದಿನದಂದು ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತದೆ. ಪ್ರಸಾದದ ದಿನದಂದು ಗಣಪತಿ ದೇವಸ್ಥಾನದಲ್ಲಿ ಎಲ್ಲ ಮನೆಗಳಿಂದ ಸ್ವ-ಇಚ್ಛೆಯಿಂದ ಕಡುಬು ತಂದು ಭಕ್ತರು ನೀಡುತ್ತಾರೆ. ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಇದೇ ಕಡಬನ್ನು ನೀಡಲಾಗುತ್ತದೆ ಎಂದು ಕಮಿಟಿಯ ಸದಸ್ಯ ಈರಣ್ಣ ಚವಡಿ ಕನ್ನಡಪ್ರಭಕ್ಕೆ ತಿಳಿಸಿದರು.

ದರ್ಶನ

ಈಗಾಗಲೇ ಎರಡು ದಿನಗಳಿಂದ ಗಣಪತಿ ವಾಹನ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.

ವಿಜಯಮಾಂತೇಶ ಜಿನಗಾ, ಆರ್.ಎಂ.ಡಿ. ಮೋಟರ್ಸ್ ಡೀಲರ್, ಸತೀಶ ಜಿನಗಾ, ಟಿವಿಎಸ್‌ ಮೋಟರ್ಸ್‌ ಡೀಲರ್