ಕೂತಗೋಡು ಪಂಚಾಯ್ತಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ

| Published : Oct 16 2023, 01:45 AM IST

ಸಾರಾಂಶ

ಕೂತಗೋಡು ಪಂಚಾಯ್ತಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ
ಪಾರದರ್ಶಕ ಆಡಳಿತ ವ್ಯವಸ್ಥೆ । ಅಭಿವೃದ್ದಿಯ ಪಥದಲ್ಲಿ ಪಂಚಾಯ್ತಿ ನೆಮ್ಮಾರ್‌ ಅಬೂಬಕರ್‌ ಕನ್ನಡಪ್ರಭ ವಾರ್ತೆ, ಶೃಂಗೇರಿ ಪಶ್ಚಿಮ ಘಟ್ಟಗಳ ತಪ್ಪಲು, ಸಹ್ಯಾದ್ರಿ ಪರ್ವತಗಳ ಶ್ರೇಣಿಯ ನಿಸರ್ಗದತ್ತ ಕಾನನಗಳ ನಡುವಿರುವ ತಾಲೂಕಿನ ಕೂತಗೋಡು ಪಂಚಾಯಿತಿ ಅನೇಕ ವರ್ಷಗಳಿಂದ ಉತ್ತಮ ಪಾರದರ್ಶಕ ಆಡಳಿತ, ಅಭಿವೃದ್ಧಿ ಸಾಧನೆಗಳ ಮೂಲಕ ಮಾದರಿ ಗ್ರಾಮ ಎನಿಸಿದೆ. ಆಡಳಿತ, ಅಭಿವೃದ್ಧಿ ಸಾಧನೆಗಾಗಿ 2ನೇ ಬಾರಿಗೆ 2023-24 ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿ ಸರ್ಕಾರದಿಂದ ವಿಶೇಷ 5 ಲಕ್ಷ ಅನುದಾನ ಪಡೆದುಕೊಂಡಿದೆ. ತಾಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿ ಕೂತಗೋಡು ಪಂಚಾಯಿತಿಯೂ ಒಂದು. ಪಾರದರ್ಶಕ ಆಡಳಿತದ ಜೊತೆಗೆ ಅಭಿವೃದ್ಧಿ ಕಾಮಗಾರಿಗಳು , ಪರಿಸರ ನೈರ್ಮಲ್ಯ, ತೆರಿಗೆ ಸಂಗ್ರಹ, ಗ್ರಾಮಸಭೆಗಳು, ನೀರು ನಿರ್ವಹಣೆ, ಕಸ ಸಂಗ್ರಹ, ಗ್ರಾಮದ ಸ್ವಚ್ಛತೆ ಸೇರಿದಂತೆ ಜನರಿಗೆ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ ಎಲ್ಲದರಲ್ಲೂ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಪಂಚಾಯಿತಿಗೆ ಬರುವ ತೆರಿಗೆ, ಆದಾಯವನ್ನು ಅಭಿವೃದ್ದಿಗೆ ಬಳಸಿದೆ. ಬಯಲು ಶೌಚ ವ್ಯವಸ್ಥೆ ವಿರುದ್ಧ ಜನಜಾಗೃತಿ ಮೂಡಿಸಲು ಬಯಲು ಮಲವಿಸರ್ಜನೆ ಅನಾಗರೀಕತೆಯ ಲಕ್ಷಣ, ಶೌಚಾಲಯ ನಿರ್ಮಿಸುವುದೇ ನಾಗರಿಕತೆ ಲಕ್ಷಣ ಎಂಬ ಗೋಡೆಬರಹಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಪ್ರತಿಯೊಂದು ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಹೊಂದುವಲ್ಲಿ ಯಶಸ್ವಿಯಾಗಿದೆ. ವೈಜ್ಞಾನಿಕ ಕಸ ನಿರ್ವಹಿಸಿ, ಅಪಾರ ಪ್ರಯೋಜನ ಗಳಿಸಿ ಎಂಬ ನಾಮಫಲಕ ಅಳವಡಿಸಿ ಕಸ ಸಂಗ್ರಹಣೆ, ಪರಿಣಾಮಕಾರಿ ವಿಲೇವಾರಿಯಲ್ಲೂ ಯಶಸ್ವಿಯಾಗಿ, ತಾಲೂಕಿಗೆ ಮಾದರಿ ಪಂಚಾಯಿತಿ ಎನಿಸಿಕೊಂಡಿದೆ. ಸರ್ಕಾರದ ಅನುದಾನ, ಪಂಚಾಯಿತಿ ಆದಾಯ ಬಳಸಿಕೊಂಡು ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿದೆ. ಬೆಟಗೆರೆ, ವೈಕುಂಠಪುರ, ಕೊಚ್ಚವಳ್ಳಿ, ಕೂತಗೋಡು, ಗುಂಡ್ರೆ ಸೇರಿಂದ 5 ಗ್ರಾಮಗಳನ್ನೊಳಗೊಂಡ ಈ ಪಂಚಾಯಿತಿ ಜನಸಂಖ್ಯೆ 2,400. ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಗಳಿಗೆ 21.58 ಲಕ್ಷ ಅನುದಾನದಲ್ಲಿ ಇಂಗುಗುಂಡಿ, ಕಾಂಕ್ರಿಟ್‌ ರಸ್ತೆ, ಎರೆಹುಳತೊಟ್ಟಿ, ಬಾವಿ, ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಕೊಟ್ಟಿಗೆ, ನೀರಿನ ಕಾಲುವೆ ನಿರ್ಮಾಣ, ಶಾಲಾ ಕಾಂಪೌಂಡ್‌, ಆಟದ ಮೈದಾನ ಸೇರಿದಂತೆ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ. 2022-23 ರಲ್ಲಿ ಅಮೃತ ಗ್ರಾಮಯೋಜನೆಯಡಿ 24. 75 ಲಕ್ಷ ಅನುದಾನದಲ್ಲಿ ಸೋಲಾರ್ ಬೀದಿ ದೀಪ , ಅಂಗನವಾಡಿ ಹಾಗೂ ಶಾಲೆಗಳಿಗೆ ಕ್ರೀಡಾ ಸಾಮಗ್ರಿ, ವೈಕುಂಠಪುರ ಪ್ರೌಢಶಾಲೆ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಕರ, ಗ್ರಂಥಾಲಯ ಡಿಜಿಟೀಲಿಕರಣ ವೆಚ್ಚ ಮೊದಲಾದವುಗಳು ಪಂಚಾಯಿತಿ ಸಾಧನೆಗೆ ನಿದರ್ಶನ. ಈ ಪಂಚಾಯಿತಿ ಎರಡನೆ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆಯುತ್ತಿರುವ ಹೆಗ್ಗಳಿಕೆ ಪಡೆದಿದೆ. ಗ್ರಾಮದ ಅಭಿವೃದ್ದಿಯೇ ಪ್ರಮುಖ ಗುರಿಯಾಗಿಸಿಕೊಂಡ ಈ ಪಂಚಾಯಿತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಒಂದೇ ಕುಟುಂಬದ ಸದಸ್ಯರಂತೆ ಪರಸ್ಪರ ಅನ್ಯೋನ್ಯತೆಯಿಂದ ಕೆಲಸ ಮಾಡುತ್ತಿದ್ದಾರೆ. --ಕೋಟ್ಸ್‌- ಪಂಚಾಯಿತಿ ಅನೇಕ ವರ್ಷಗಳಿಂದ ಉತ್ತಮ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. 2 ನೇ ಬಾರಿ ಈ ಪ್ರಶಸ್ತಿಯ ಗೌರವ ನಮಗೆ ಸಿಗುತ್ತಿದೆ. ಜನರಿಗೆ ಉತ್ತಮ ಆಡಳಿತ, ಮೂಲಭೂತ ಸೌಲಭ್ಯ ನೀಡುವ ಮೂಲಕ ಪಂಚಾಯಿತಿ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿಯಾಗಿದೆ. ಪಂಚಾಯಿತಿ ಸಾಧನೆ, ಪ್ರಶಸ್ತಿಗಳಿಕೆಗೆ ಪಿಡಿಒ, ಕಾರ್ಯದರ್ಶಿ, ಪಂಚಾಯಿತಿ ಸದಸ್ಯರು, ಶಾಸಕರು, ಸಿಬ್ಬಂದಿ, ತಾಪಂ ಇಒ, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು, ಅಧಿಕಾರಿಗಳು, ಪ್ರತಿಯೊಬ್ಬರೂ ಕಾರಣೀ ಣಿಕರ್ತರಾಗಿದ್ದಾರೆ. ಎಲ್ಲರ ಸಲಹೆ, ಸಹಕಾರ, ಶ್ರಮ ನಮಗೆ ನೆರವಾಗಿದೆ. -ಕೆ.ಬಿ.ನಾಗೇಶ್‌. ಕೂತಗೋಡು ಗ್ರಾಪಂ ಅಧ್ಯಕ್ಷರು. --- ಅಧಿಕಾರವೊಂದೇ ಅಭಿವೃದ್ದಿಗೆ ಮಾನದಂಡವಲ್ಲ.ಉತ್ತಮ ಮನಸ್ಸು ಬೇಕು. ಅಭಿವೃದ್ದಿ, ಉತ್ತಮ ಆಡಳಿತ ನಡೆಸುವ ಮನಸ್ಸಿದ್ದಲ್ಲಿ ಜನರ ಸಹಕಾರ ಸಿಗುತ್ತದೆ .ಇಲ್ಲಿ ಆಡಳಿತ ನಿರ್ವಹಿಸಲು ಜನರ, ಜನಪ್ರತಿನಿಧಿಗಳ ಸಹಕಾರ ಸಿಗುತ್ತಿದೆ. ಪಾರದರ್ಶಕ ಆಡಳಿತ ನಮ್ಮ ಮುಖ್ಯ ಧ್ಯೇಯವಾಗಿದೆ. ಇನ್ನಷ್ಟು ಉತ್ತಮ ಜನಪರ ಯೋಜನೆಗಳ ಮೂಲಕ ಅಭಿವೃದ್ದಿ ಪಥದತ್ತ ಕೊಂಡೊಯ್ಯಬೇಕು -ಪರಮೇಶ್ವರ್‌, ಪಂಚಾಯತ್‌ ಅಭಿವೃದ್ದಿ ಅಧಿಕಾರಿ. 15 ಶ್ರೀ ಚಿತ್ರ 1- ಶೃಂಗೇರಿ ತಾಲೂಕಿನ ಕೂತಗೋಡು ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಸಿಬ್ಬಂದಿ ಳು ಗಾಂಧಿ ಗ್ರಾಮ ಪುರಸ್ಕಾರದ ಜೊತೆಗಿರುವುದು. 15 ಶ್ರೀ ಚಿತ್ರ 2- ಕೆ.ಬಿ.ನಾಗೇಶ್‌.ಗ್ರಾಪಂ ಅಧ್ಯಕ್ಷರು. 15 ಶ್ರೀ ಚಿತ್ರ 3- ಪರಮೇಶ್ವರ್‌.ಪಿಡಿಓ