ಗುಜರಾತ್‌ನಲ್ಲಿನ ಪಟೇಲ್ ಮಾದರಿ ಗಾಂಧೀಜಿ ಪ್ರತಿಮೆ ಸ್ಥಾಪಿಸಿ

| Published : Oct 03 2025, 01:07 AM IST

ಗುಜರಾತ್‌ನಲ್ಲಿನ ಪಟೇಲ್ ಮಾದರಿ ಗಾಂಧೀಜಿ ಪ್ರತಿಮೆ ಸ್ಥಾಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿ ಅವರ ಎತ್ತರದ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ರಾಮನಗರ: ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿ ಅವರ ಎತ್ತರದ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಾತ್ಮ ಗಾಂಧೀ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಲ್ಲಾದರು ಒಂದು ಭಾಗದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಸ್ಥಾಪನೆ ಮಾಡುವುದರಿಂದ ಸತ್ಯ, ತ್ಯಾಗ, ಪ್ರಾಮಾಣಿಕತೆ ಹಾಗೂ ಅಹಿಂಸೆಗೆ ಅರ್ಥ ಬರುತ್ತದೆ. ಮಹಾತ್ಮ ಗಾಂಧೀಜಿ ತತ್ವ ಸಿದ್ಧಾಂತಗಳೇ ದೇಶಕ್ಕೆ ಶ್ರೀರಕ್ಷೆಯಾಗಿದೆ. ಅವುಗಳನ್ನು ಅನುಸರಿಸುವುದು ಆದ್ಯ ಕರ್ತವ್ಯ ಆಗಬೇಕು. ಪ್ರತಿಯೊಬ್ಬ ಪ್ರಜೆಗೂ ಆಹಾರ, ನೀರು, ಶೌಚಾಲಯ, ಶಿಕ್ಷಣ, ಉಚಿತ ಆರೋಗ್ಯ ಕಲ್ಪಿಸಬೇಕಾಗಿದೆ ಎಂದು ಹೇಳಿದರು.

ಇಂದು ಮಹಾತ್ಮ ಗಾಂಧೀಜಿ ಜಯಂತಿ ಅಲ್ಲ, ನಮ್ಮ ದೇಶಕ್ಕೆ ದೇವರ ಜಯಂತಿ. ಈ ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಇಡೀ ಜೀವನವನ್ನು ಸಮರ್ಪಣೆ ಮಾಡಿದ ಗಾಂಧೀಜಿ ಮಹಾನ್ ತ್ಯಾಗಿ. ಅವರನ್ನು ನಾವು ದೇವರ ಸ್ಥಾನಕ್ಕೆ ಹೋಲಿಸುವ ಪರಿಸ್ಥಿತಿ ಬಂದಿದೆ. ಗಾಂಧೀಜಿರವರ ತತ್ವ ಸಿದ್ಧಾಂತಗಳು ನಮಗೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ದಾರಿ ದೀಪವಾಗಿದೆ ಎದು ತಿಳಿಸಿದರು.

ಉಕ್ರೇನ್-ರಷ್ಯಾ ದೇಶಗಳು ಮಾತ್ರವಲ್ಲದೆ ಹಲವೆಡೆ ನಡೆಯುತ್ತಿರುವ ಯುದ್ಧಗಳನ್ನು ನೋಡಿದರೆ ಶಾಂತಿ ಬಹಳ ಪ್ರಮುಖವಾದದ್ದು. ಅದನ್ನು ಗಾಂಧೀಜಿ ಇಡೀ ಪ್ರಂಪಚಕ್ಕೆ ಸಾರಿದ್ದಾರೆ. ಆದರೆ, ಅಂತಹ ಮಹಾ ನಾಯಕನ ಬಗ್ಗೆ ಆರ್‌ಎಸ್‌ಎಸ್‌ ಟೀಕೆ ಮಾಡುತ್ತಿರುವುದು ಸರಿಯಲ್ಲ. ಗಾಂಧೀಜಿ ದೇಶಕ್ಕೆ ಕೊಟ್ಟಂತಹ ಕೊಡುಗೆ ಅಪಾರವಾದದ್ದು. ಅವರ ಯಾವ ತತ್ವ ಸಿದ್ಧಾಂತಗಳನ್ನು ಪಾಲಿಸದಿರುವುದು ನೋವಿನ ಸಂಗತಿ ಎಂದು ಹೇಳಿದರು.

ಗಾಂಧೀಜಿ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುತ್ತಿಲ್ಲ. ಬಸವಣ್ಣ ಚಿಂತನೆಗಳು ಪಾಲಿಸುತ್ತಿಲ್ಲ. ಅಂಬೇಡ್ಕರ್ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ. ಇದು ಒಳ್ಳೆಯ ಬೆಳ‍ವಣಿಗೆ ಅಲ್ಲ. ಅವುಗಳನ್ನು ಅನುಸರಿಸಬೇಕಾದ ಪರಿಸ್ಥಿತಿ ಬಂದಿದೆ. ಗಾಂಧೀಜಿರವರ ಕಲ್ಪನೆಯಂತೆ ಮದ್ಯಪಾನ ನಿಷೇಧಿಸಬೇಕು. ಮದ್ಯಪಾನ ಮಾರಿ ಅದರಿಂದ ಬಂದ ಹಣದಿಂದ ಯಾವುದೇ ಯೋಜನೆ ರೂಪಿಸಬಾರದು ಎಂದು ಹೇಳಿದರು.

ಶಿಕ್ಷಣ ಮತ್ತು ವ್ಯಾಪಾರೀಕರಣಗೊಂಡಿವೆ. ವಿದ್ಯಾರ್ಥಿಗಳಿಗೆ ಉದ್ಯೋಗ ನಿರ್ಮಾಣ ಮಾಡಬೇಕು. ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಉದ್ಯೋಗ ಸೃಷ್ಟಿ ಆಗಲೇ ಬೇಕು. ಯುವಕರಲ್ಲಿ ದೈರ್ಯ ಮತ್ತು ಸ್ಥೈರ್ಯ ಬರಲಿದೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ನಿರುದ್ಯೋಗಿಗಳಿಗೆ ಗ್ಯಾರಂಟಿಯಲ್ಲಿ 2 ಸಾವಿರ ಕೊಡುತ್ತಿರುವುದು ಸಾಲದು. ನಿರುದ್ಯೋಗ ಭತ್ಯೆ 10 ಸಾವಿರ ನೀಡಬೇಕು. ಇದರಿಂದ ಅವರಿಗೆ ಗೌರವ ಬರುವ ಜೊತೆಗೆ ಹೊಸ ಚಿಂತನೆಗಳು ಮೂಡಲು ಸಾಧ್ಯವಾಗಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಈ ವೇಳೆ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ಜಿಲ್ಲಾದ್ಯಕ್ಷ ಸಿ.ಎಸ್. ಜಯಕುಮಾರ್ , ತಾಲೂಕುಅಧ್ಯಕ್ಷ ವಿ.ಎನ್ .ಗಂಗಾಧರ್ , ತಾಲೂಕು ಮಹಿಳಾಧ್ಯಕ್ಷೆ ಭಾಗ್ಯ ಸುಧಾ, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ.ಜಯರಾಮು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಕಾರ್ಯದರ್ಶಿ ಎಸ್.ಶಿವಮೂರ್ತಿ, ನಗರ ಘಟಕ ಅಧ್ಯಕ್ಷ ಪ್ರಸನ್ನ, ತಾಲೂಕು ಉಪಾಧ್ಯಕ್ಷ ಕೆಂಪರಾಜು, ಬಿಡದಿ ಘಟಕದ ಕಾರ್ಯದರ್ಶಿ ವಿಜಯ್, ಕುಮಾರ್ ವಾಟಾಳ್ ಪಕ್ಷದ ಅಧ್ಯಕ್ಷರಾದ ನಾರಾಯಣಸ್ವಾಮಿ, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ, ವಾಟಾಳ್ ಪಕ್ಷದ ಮಹದೇವ್ ಮತ್ತಿತರರು ಹಾಜರಿದ್ದರು.

2ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ವಾಟಾಳ್ ನಾಗರಾಜ್ ಪುಷ್ಪನಮನ ಸಲ್ಲಿಸಿದರು.