ಸಾರಾಂಶ
- ಡಿಎಸ್‌ಎಸ್ ಪ್ರತಿಭಟನೆಯಲ್ಲಿ ಒತ್ತಾಯ । ಸರ್ಕಾರಿ ಕಚೇರಿಗಳಲ್ಲಿ ಫೋಟೋಗಳಿಗೆ ಅವಮಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿದ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಮನಬಂದಂತೆ ಅಳವಡಿಸಿ, ಫೋಟೋಗೆ ಅವಮಾನಿಸಿದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಅಹೋರಾತ್ರಿ ಧರಣಿ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನ ಬಳಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ನೇತೃತ್ವದಲ್ಲಿ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.ಕುಂದುವಾಡ ಮಂಜುನಾಥ ಈ ಸಂದರ್ಭ ಮಾತನಾಡಿ, ದೇಶಕ್ಕಾಗಿ, ದೇಶದ ಜನರಿಗಾಗಿ ತಮ್ಮ ಜೀವಿತ ಅವಧಿಯುದ್ದಕ್ಕೂ ಹೋರಾಡಿದ ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿರುವುದು ಖಂಡನೀಯ. ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಹೀಗೆಲ್ಲಾ ಅವಮಾನಿಸಿರುವುದು ಅಕ್ಷಮ್ಯ ಅಪರಾಧ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಯಾರೇ ಆಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಹಿತಿಗಳು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು, ಭಾರತ ರತ್ನ ಅಂಬೇಡ್ಕರ್ ಎಲ್ಲರಿಗೂ ಒಂದೇ ಕಾನೂನೆಂದು, ಸರ್ಕಾರದ ಸುತ್ತೋಲೆಯಲ್ಲಿ ಗೋಡೆ ಕಡೆ ಮುಖ ಮಾಡಿ ಮತ್ತು ಟೇಬಲ್ ಮೇಲೆ, ಸಜ್ಜೆಯ ಮೇಲೆ ಮಹನೀಯರ ಭಾವಚಿತ್ರವನ್ನು ಕೆಳಮುಖವಾಗಿ ಹಾಕಬೇಕೆಂದು ಚುನಾವಣಾ ಆಯೋಗದ ಸುತ್ತೋಲೆಯಲ್ಲಿದೆ. ಅದಕ್ಕೆ ನಮ್ಮ ಸಹಮತವೂ ಇದೆ. ಆದರೆ, ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿ ಹೋಬಳಿ ಸರ್ಕಲ್ ಹಾಗೂ ಸಾಸ್ವೇಹಳ್ಳಿ-2ನೇ ಹೋಬಳಿಯ ಕುಂದೂರು ವೃತ್ತದ ಕೆಲವು ಗ್ರಾ.ಪಂ.ಗಳಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನೀತಿ ಸಂಹಿತೆ ಅವಧಿಯಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್ ಫೋಟೋಗಳನ್ನು ಮನಬಂದಂತೆ ತೆಗೆದಿಟ್ಟು, ಫೋಟೋಗಳಿಗೆ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಹರಿಹರ ತಾಲೂಕು ಗುತ್ತೂರು ಗ್ರಾಪಂ ಕಚೇರಿಯಲ್ಲಿ 2022ರ ಜ.26ರಂದು ಅಂಬೇಡ್ಕರ್ ಭಾವಚಿತ್ರ ಇಡದೇ, ಗಣರಾಜ್ಯೋತ್ಸವ ಆಚರಿಸಿದ್ದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ಮಾಡಿ, ಯಶಸ್ವಿಯಾಗಿದ್ದೇವೆ. ಈಗ ಹೊನ್ನಾಳಿ ತಾಲೂಕಿನ ಕೆಲವು ಗ್ರಾ.ಪಂ.ಗಳಲ್ಲಿ ಮತ್ತೆ ಅದೇ ರೀತಿ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಗಳಿಗೆ ಅವಮಾನಿಸಿದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಕೆಲವು ಪಿಡಿಒಗಳು ಗಾಂಧೀಜಿ, ಅಂಬೇಡ್ಕರ್ ಫೋಟೋ ಗೋಡೆ ಕಡೆ ಮುಖ ಮಾಡಿ ಹಾಕಿದ್ದಾರೆ. ಮತ್ತೊಬ್ಬ ಪಿಡಿಒ ಉಭಯ ಮಹಾನ್ ನಾಯಕರ ಫೋಟೋ ಮಕಾಡೆ ಹಾಕಿದ್ದಾರೆ. ಮತ್ತೋರ್ವ ಪಿಡಿಒ ಅಂಬೇಡ್ಕರ್ ಫೋಟೋವನ್ನು ಗ್ರಾಪಂ ಕಚೇರಿ ಶೌಚಾಲಯಕ್ಕೆ ಹೋಗುವ ಕೋಣೆ ಸಜ್ಜಾದ ಮೇಲೆ ಕಸದಂತೆ ಬಿಸಾಕಿದ್ದಾರೆ. ಮಗದೊಬ್ಬ ಪಿಡಿಒ ಕಚೇರಿಯಲ್ಲಿ ಗಾಂಧೀಜಿ, ಅಂಬೇಡ್ಕರ್ ಫೋಟೋವನ್ನೇ ಹಾಕಿಲ್ಲ. ಇನ್ನೊಬ್ಬ ಪಿಡಿಒ ವಾಜಪೇಯಿ, ರಾಜೀವ ಗಾಂಧಿ ಫೋಟೋಗಳ ಜೊತೆಗೆ ಡಾ.ಅಂಬೇಡ್ಕರ್ ಫೋಟೋ ಹಾಕಿದ್ದಾರೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಪ್ರದೀಪ ಕೆಟಿಜೆ ನಗರ, ಆರ್.ಮಂಜುನಾಥ, ದೊಡ್ಡಪ್ಪ ಆವರಗೊಳ್ಳ, ಹನುಮಂತಪ್ಪ ಅಣಜಿ, ಪಿ.ಜೆ.ಮಹಾಂತೇಶ ಹರಿಹರ, ಚನ್ನಗಿರಿ ಚಿತ್ರಲಿಂಗಪ್ಪ ಗಾಂಧಿ ನಗರ, ಪರಮೇಶ ಬೆನಕನಹಳ್ಳಿ, ಕುಬೇಂದ್ರಪ್ಪ ಸೂರಗೊಂಡನಹಳ್ಳಿ, ವಿಜಯಲಕ್ಷ್ಮೀ, ಮಹಾಂತೇಶ ಹಾಲುವರ್ತಿ, ಹನುಮಂತಪ್ಪ ಗುಮ್ಮನೂರು, ಖಾಲಿದ್ ಅಲಿ, ಬೇತೂರು ಹನುಮಂತ, ಮಂಜುನಾಥ ನೀರ್ಥಡಿ, ಕುಬೇಂದ್ರಪ್ಪ ಸೂರಗೊಂಡನಹಳ್ಳಿ, ಚಂದ್ರಪ್ಪ, ಬೇತೂರು ಹನುಮಂತ, ಎಸ್.ಎಂ.ಶಿವಶಂಕರ, ನಾಗರಾಜ ತುರ್ಚಘಟ್ಟ ಸೇರಿದಂತೆ ಅನೇಕರು ಹಾಜರಿದ್ದರು.
- - -ಕೋಟ್ ಮಹಾನ್ ಮಾನವತಾವಾದಿ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಅವಮಾನಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು. ಇಂತಹ ಮಹನೀಯರಿಗೆ ಅವಮಾನಿಸಿದವರನ್ನು ಸೇವೆಯಿಂದ ವಜಾಗೊಳಿಸಬೇಕು. ಸಾಸ್ವೇಹಳ್ಳಿ ಗ್ರಾಪಂ ಪಿಡಿಒ, ಕುಳಗಟ್ಟೆ ಗ್ರಾಪಂ, ಹುಣಸಘಟ್ಟ ಗ್ರಾಪಂ, ಬನ್ನಿಕೋಡು ಗ್ರಾಪಂ, ಯಕ್ಕನಹಳ್ಳಿ ಗ್ರಾಪಂ, ತಿಮ್ಲಾಪುರ ಗ್ರಾಪಂ, ಅರಕೆರೆ ಗ್ರಾಪಂ, ಕಡದಕಟ್ಟೆ ಗ್ರಾಪಂ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕು
- ಕುಂದುವಾಡ ಮಂಜುನಾಥ, ಮುಖಂಡ- - - -22ಕೆಡಿವಿಜಿ3:
ದಾವಣಗೆರೆಯ ವಿವಿಧ ಕಚೇರಿಗಳಲ್ಲಿ ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಡಿಸಿ ಕಚೇರಿ ಬಳಿ ಡಿಎಸ್‌ಎಸ್ ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಮನವಿ ಅರ್ಪಿಸಿತು.