ಭಾರತಕ್ಕೆ ಗಾಂಧೀಜಿ ಆದರ್ಶವೇ ಹೊರತು ಗೋಡ್ಸೆ ಅಲ್ಲ: ಆನಂದ್‌

| Published : Oct 03 2024, 01:21 AM IST

ಸಾರಾಂಶ

ಕಡೂರು, ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿಯವರೇ ಆದರ್ಶವೇ ಹೊರತು ಗೋಡ್ಸೆ ಅಲ್ಲ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಕೆಳಗೆ ಕುಳಿತು ಮಾತನಾಡಿದರು. ಇತ್ತೀಚಿನ ಪೀಳಿಗೆಗೆ ಗಾಂಧೀಜಿ ವಿಚಾರಗಳು ಮರೀಚಿಕೆಯಾಗುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

- ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಕನ್ನಡಪ್ರಭ ವಾರ್ತೆ, ಕಡೂರು

ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿಯವರೇ ಆದರ್ಶವೇ ಹೊರತು ಗೋಡ್ಸೆ ಅಲ್ಲ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಕೆಳಗೆ ಕುಳಿತು ಮಾತನಾಡಿದರು. ಇತ್ತೀಚಿನ ಪೀಳಿಗೆಗೆ ಗಾಂಧೀಜಿ ವಿಚಾರಗಳು ಮರೀಚಿಕೆಯಾಗುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಮೇಧಾವಿಗಳು. ದೇಶ ರಕ್ಷಣೆಗೆ ಮತ್ತು ಸಂವಿಧಾನ ರಚನೆಗೆ ಅವರ ಕೊಡುಗೆ ಅಪಾರ.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರೋಧಿಸಿ ಚಳುವಳಿ ನಡೆಸುವ ಮೂಲಕ ಇಡೀ ಪ್ರಪಂಚಕ್ಕೆ ಮಾದರಿಯಾದರು. 1915ರಲ್ಲಿ ಗಾಂಧೀಜಿ ಭಾರತಕ್ಕೆ ಬಂದಾಗ ಇಲ್ಲಿ ಹೋರಾಟ ನಡೆಸುತಿದ್ದ ಭಾರತೀಯರಿಗೆ ಗಾಂಧೀಜಿಯವರ ಸಮರ್ಥ ನಾಯಕತ್ವ ದೊರಕಿ 1915 ರಿಂದ 1947ರವರೆಗೆ ಅಹಿಂಸಾ ಮಾರ್ಗದ ಹೋರಾಟದ ಮೂಲಕ ಸ್ವಾತಂತ್ರ ತಂದುಕೊಟ್ಟ ಅವರ ಹೋರಾಟದ ನಡೆಯನ್ನು ಇಡೀ ವಿಶ್ವವೇ ಮೆಚ್ಚಿತು ಎಂದರು.

ಸ್ವಾತಂತ್ರದ ಬಳಿಕ ದೇಶದ ಸಂವಿಧಾನ ರಚನೆ, ಪ್ರಜಾಪ್ರಭುತ್ವ ವ್ಯವಸ್ಥೆ ಆಡಳಿತದ ಜಾತ್ಯಾತೀತ ಭಾರತ ನಿರ್ಮಾಣ ಮತ್ತು ಹೋರಾಟದಿಂದ ಗಾಂಧೀಜಿ ಮಹಾತ್ಮರಾದರು. ಆದರೆ ಯಾರಿಗೆ ಸ್ವಾತಂತ್ರ ತಂದುಕೊಟ್ಟರೋ ಅವರಿಂದಲೇ ಗಾಂಧೀಜಿ ಹತ್ಯೆಆಗಿದ್ದು ದುರಂತದ ಸಂಗತಿ, ಇದರ ಪರಿಣಾಮ ದೇಶದಲ್ಲಿ ಗಾಂಧಿ ಅನುಯಾಯಿಗಳು ಹಾಗು ಗೋಡ್ಸೆ ಅನುಯಾಯಿಗಳು ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ದೇಶ ಯಾವ ಸ್ಥಿತಿ ಯತ್ತ ಸಾಗುತ್ತಿದೆ ಎಂಬುದನ್ನು ತಿಳಿದು ದುಷ್ಟ ಶಕ್ತಿಯನ್ನು ದೂರವಿಡಬೇಕು. ಹಾಗಾಗಿ ಗಾಂಧೀಜಿ ಆದರ್ಶವಾಗಬೇಕೆಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ದೇಶ ಕಂಡ ಮತ್ತೊಬ್ಬ ಮೇಧಾವಿ. 1965 ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧದಲ್ಲಿ ಆಹಾರದ ಕೊರತೆಯಿದ್ದಾಗ ದೇಶದ ಸೈನಿಕರು ಮತ್ತು ರೈತರಿಗೆ ಧೈರ್ಯ ತುಂಬಿ ಹಸಿರು ಕ್ರಾಂತಿ ನಡೆಸಿದ ಅವರು ಸ್ಮರಣೀಯರು ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಬ್ರಿಟೀಷರ ಸಂಕೋಲೆಯಲ್ಲಿದ್ದ ಭಾರತಕ್ಕೆ ಅಹಿಂಸಾ ಹೋರಾಟದ ಮೂಲಕ ಸ್ವಾತಂತ್ರ್ಯದ ಸಂಕಲ್ಪ ಮಾಡಿದ ಗಾಂಧೀಜಿ ಯಶಸ್ಸು ಕಂಡು ದೇಶದ ರಾಷ್ಟ್ರಪಿತರಾದರು.

ನನ್ನ ದೇಶ ಮತ್ತು ಜನರು ಸ್ವತಂತ್ರವಾಗಬೇಕು ಎಂದು ವ್ಯಾಪಾರಕ್ಕಾಗಿ ಬಂದ ಬ್ರಿಟಿಷರನ್ನು ಯಾವುದೇ ರಕ್ತಪಾತವಿಲ್ಲದೆ ವಾಪಸ್ ಕಳಿಸಿ ಅಹಿಂಸೆ ಮೂಲಕ ಸ್ವಾತಂತ್ರ್ಯತಂದು ಕೊಟ್ಟರು. ಅಂತಹ ಗಾಂಧೀಜಿ ತತ್ವ ಮತ್ತು ಆದರ್ಶಗಳಲ್ಲಿ ಜನಪ್ರತಿನಿಧಿಗಳಾದ ನಾವುಗಳು ಕೆಲವ ನ್ನಾದರೂ ಪಾಲಿಸೋಣ ಎಂದರು.

ದೇಶದ ಎರಡನೇ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರೀ ಅಧಿಕಾರದಲ್ಲಿದ್ದಾಗ ಬರಗಾಲ ಆವರಿಸಿ ರೈತರು ಮತ್ತು ಸೇನಿಕರಿಗೆ ಧೈರ್ಯ ತುಂಬಿ ಹಸಿರು ಕ್ರಾಂತಿ ನಡೆಸಿದರು. ಈ ಇಬ್ಬರು ನಾಯಕರ ಕೊಡುಗೆ ದೇಶದಲ್ಲಿ ಅಜರಾಮರ ಎಂದರು.

ಉಪಾಧ್ಯಕ್ಷರಾದ ಮಂಜುಳಾ ಚಂದ್ರು, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಸದಸ್ಯರಾದ ಹಾಲಮ್ಮ, ಪುಷ್ಪಾ ಮಂಜುನಾಥ್ ,ಸೈ.ಯ್ಯದ್ ಯಾಸೀನ್, ಮನು ಮರುಗುದ್ದಿ, ಮಂಡಿ ಎಕ್ಬಾಲ್, ಮೋಹನ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆಸಂದಿ ಕಲ್ಲೇಶ್, ಅಧಿಕಾರಿ ನೌಕರರಾದ ರಮೇಶ್, ಶ್ರೀನಿವಾಸ್, ಶ್ರೇಯಸ್ ಕುಮಾರ್, ತಿಮ್ಮಯ್ಯ,ಲೋಕೇಶ್, ಕಾಂತರಾಜ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

--- ಬಾಕ್ಸ್ ---

ಕಡಲೆಕಾಯಿ ಹಂಚಿ ಜಯಂತಿ ಆಚರಣೆ

ಕಡೂರು ಪುರಸಭೆಯಿಂದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಪುರಸಭೆ ಮುಂಭಾಗದಲ್ಲಿ ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಮಹಾತ್ಮ ಗಾಂದೀಜಿಯವರ ಭಾವಚಿತ್ರಕ್ಕೆ ಗುಲಾಬಿ , ತಳಿರು ತೋರಣ ಅಲಂಕಾರ ಗಮನ ಸೆಳೆಯಿತು. ಗಾಂಧೀಜಿಗೆ ಪ್ರಿಯವಾದ ಕಡಲೆ ಕಾಯಿ ಹಂಚಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ವೇದಿಕೆ ಹಾಕದೆ ಕೆಳಗೆ ಕುಳಿತು ರಘುಪತಿ ರಾಘವ ರಾಜಾರಾಂ ಭಜನೆ ಮಾಡಿ ಗಾಂಧೀಜಿ ಹಾಗೂ ಶಾಸ್ತ್ರೀಜಿಗೆ ಗೌರವ ಸಲ್ಲಿಸಲು ಅನುವು ಮಾಡಿಕೊಟ್ಟಿರುವ ಪುರಸಭೆಗೆ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗಕ್ಕೆ ಅಭಿನಂದಿಸುತ್ತೇನೆ ಎಂದು ಶಾಸಕ ಕೆ.ಎಸ್‌. ಆನಂದ್ ಹೇಳಿದರು. 2ಕೆೆಕೆೆಡಿಯು1.

ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ನಡೆಯಿತು.

ಶಾಸಕ ಕೆ ಎಸ್ ಆನಂದ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸದಸ್ಯರು ಇದ್ದರು.