ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ನುಡಿದಂತೆ ನಡೆದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಅಪ್ರತಿಮ ದೇಶಪ್ರೇಮ, ನಿಷ್ಠೆ ಮತ್ತು ಪ್ರಾಮಾಣಿಕತೆ ಈ ದೇಶದ ಭವ್ಯ ಪರಂಪರೆಯ ಜೀವ- ಜೀವಾಳವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ 156ನೇ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹಾತ್ಮ ಗಾಂಧಿ ಜಗತ್ತು ಕಂಡ ಶ್ರೇಷ್ಠ ಪುರುಷ. ಜಗತ್ತಿನ ಎಲ್ಲಾ ದೇಶಗಳಿಗೆ ಮಾದರಿ ಎನಿಸಿದ ಮಹಾನ್ ವ್ಯಕ್ತಿ ಮಹಾತ್ಮಗಾಂಧಿ. ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ನಂತರ ಜಗತ್ತೇ ಮೆಚ್ಚುವಂತಹ ನಾಯಕನಾಗಿ ಬೆಳೆದರು ಎಂದರು.
ಮಹಾತ್ಮ ಗಾಂಧಿ ಬದುಕಿನುದ್ದಕ್ಕೂ ಸತ್ಯ, ಧರ್ಮವನ್ನು ಸಾರುತ್ತಾ ಬಂದಿದ್ದಲ್ಲದೆ ರಾಮರಾಜ್ಯದ ಸುಂದರ ಕನಸನ್ನು ಕಂಡವರು. ಗಾಂಧಿ ನನ್ನ ದೇಶ ಯಾವಾಗಲು ಏಕತೆಯಿಂದ, ಸಮಗ್ರತೆಯಿಂದ ಒಗ್ಗಟ್ಟಿನಿಂದ ಕೂಡಿರಬೇಕೆಂದು ಆಶಿಸಿದವರು ಎಂದು ಸ್ಮರಿಸಿದರು.ಗಾಂಧಿ ಸತ್ಯ ಪ್ರತಿಪಾದಿಸಿದರೆ ಈ ದೇಶದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ಪ್ರಮಾಣಿಕತೆಯಿಂದ ಬದುಕನ್ನು ನಡೆಸಿದರು. ರೈತರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಆ ಮೂಲಕ ಜೈ ಜವಾನ್ ಜೈ ಕಿಸಾನ್ ಎನ್ನುವ ಘೋಷಣೆಯನ್ನು ಮೊಳಗಿಸುತ್ತಾ ಈ ದೇಶದ ರೈತರ ಪರವಾಗಿ ನಿಂತಿದ್ದರು ಎಂದರು.
ಈ ಇಬ್ಬರು ಮಹನೀಯರ ಆಶಯಗಳು ಬೇರೆ ಆದರೂ ಉದ್ದೇಶ ಮಾತ್ರ ಈ ದೇಶದ ಹಿತಾಕ್ಕಾಗಿಯೇ ಆಗಿತ್ತು, ಎಂಬುದು ವಿಶೇಷ. ಜೀವನದ ಅನೇಕ ನೋವಿನ ತೊಳಲಾಟದಿಂದ ಮೇಲೆದ್ದು ಬಂದು ದೇಶಕ್ಕಾಗಿ ದುಡಿದರು ಹಾಗಾಗಿ ನಾವೆಲ್ಲಾ ಇವರಿಬ್ಬರನ್ನೂ ಸಮಾನವಾಗಿ ಕಾಣಬೇಕು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ ಮಂಜುನಾಥ್ ಮಾತನಾಡಿ, ಮಹಾತ್ಮ ಗಾಂಧಿ ಹೆಜ್ಜೆ ಹೆಜ್ಜೆಗೂ ನೋವನ್ನು ಅನುಭವಿಸುತ್ತಾ ಬಾಳಿದವರು. ದಕ್ಷಿಣ ಆಫ್ರಿಕಾಕ್ಕೆ ತೆರಳುವಾಗ ರೈಲಿನಲ್ಲಿ ಆದ ಅವಮಾನ ಅವರ ಬದುಕಲ್ಲಿ ದೊಡ್ಡ ಬದಲಾವಣೆ ತಂದಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಹಿಂಸಾತ್ಮಕ ಹೋರಾಟವನ್ನು ರೂಪಿಸುವ ಮೂಲಕ ಹೋರಾಟಗಾರರಿಗೆ ಮಾದರಿಯಾದರು ಎಂದರು. ಗಾಂಧಿಯ ಬಗ್ಗೆ ಇಂದಿನ ಯುವಪೀಳಿಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ಡಿ.ಎಸ್.ನಾಗಭೂಷಣ್ ಅವರ ಬರೆದಿರುವ ಗಾಂಧಿಕಥನ 10 ಬಾರಿ ಮುದ್ರಣವನ್ನು ಕಂಡಿದೆ. ಈ ದೇಶದಲ್ಲಿ ಯಾವುದಾರೂ ವ್ಯಕ್ತಿಯ ಬಗ್ಗೆ ಅತೀ ಹೆಚ್ಚು ಪುಸ್ತಕ ಪ್ರಕಟಗೊಂಡಿದೆ ಎಂದರೆ ಅದು ಗಾಂಧಿ ಬಗ್ಗೆ ಮಾತ್ರ. ವಿಶ್ವದ ಎಲ್ಲಾ ರಾಷ್ಟಗಳು ಗಾಂಧಿಯನ್ನು ನೆನಪು ಮಾಡಿಕೊಳ್ಳುತ್ತವೆ ಎಂದರು.
ಮಹಾತ್ಮ ಗಾಂಧಿಯ ಆಶಯಗಳನ್ನು ಕಾರ್ಯ ರೂಪಕ್ಕೆ ತರುವ ಕೆಲಸ ಮಾಡಬೇಕು. ಅವರು ಕಂಡಿದ್ದ ರಾಮರಾಜ್ಯದ ಕನಸು ನನಸು ಮಾಡಬೇಕು. ಸ್ವಾತಂತ್ರ್ಯ ನಂತರ ಹಲವು ದಶಕಗಳು ಉರುಳಿದರೂ ಈ ದೇಶದಲ್ಲಿ ಅಸಮಾನತೆ, ಅಸ್ಪೃಶ್ಯತೆ ತೊಲಗಿಲ್ಲ. ಗಾಂಧಿಯ ಚಿಂತನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳುವ ಮೂಲಕ ಇದನ್ನು ಹೋಗಲಾಡಿಸಲು ಮುಂದಾಗಬೇಕು ಎಂದರು.ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಇಂತಹ ಮಹನೀಯರ ಜಯಂತಿಯಿಂದ ನಮ್ಮ ಜ್ಞಾನ ವೃದ್ದಿಯಾಗುತ್ತದೆ. ಇತಿಹಾಸದ ಅರಿವು ಮೂಡುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರೀ ಹಾಗೂ ಗಾಂಧಿಯ ಚಿಂತನೆಗಳು ಯುವ ಪೀಳಿಗೆ ಅವಳಡಿಸಿಕೊಳ್ಳಬೇಕು. ಆ ಮೂಲಕ ನಾವೆಲ್ಲರೂ ಒಗ್ಗೂಡಿಕೊಂಡು ದೇಶವನ್ನು ಕಟ್ಟಬೇಕು ಎಂದರು.
ಈ ವೇಳೆ ಸರ್ವಧರ್ಮದ ಧರ್ಮ ಗುರುಗಳು ಧರ್ಮ ಬೋಧನೆ ಮಾಡಿದರು. ಗಾಂಧಿ ಜಯಂತಿಯ ಅಂಗವಾಗಿ ಜಿಲ್ಲಾಡಳಿತ ಪ್ರೌಢ, ಪದವಿಪೂರ್ವ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕರ್ನಾಟಕ ರಾಜ್ಯ ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಮೋಹನ್, ಜಿ.ಪಂ ಸಿಇಒ ಹೇಮಂತ್, ಎಡಿಸಿ ವಿ.ಅಭಿಷೇಕ್, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ವಾರ್ತಾಧಿಕಾರಿ ಆರ್.ಮಾರುತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.