ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಕರ್ಷಿಸಿದ ಕಾಂತಾರ ಚಿತ್ರದ ಪಂಜುರ್ಲಿ ದೈವ, ವರ್ಣರಂಜಿತ ವಿಶೇಷ ರಥದಲ್ಲಿ ರಾರಾಜಿಸಿದ ನಾಡದೇವತೆ, ಬೆಳ್ಳಿ ರಥದಲ್ಲಿ ಮಹಾರಾಜನ ದರ್ಬಾರ್, ಅಪರೂಪವಾಗಿ ಕಂಡುಬಂದ ನಾಗರಹೊಳೆ ಕಾಡು ಜನರು ಜೊತೆಗೆ ವಿಭಿನ್ನ, ವೈಶಿಷ್ಟ್ಯಪೂರ್ಣ ಜಾನಪದ ಕಲಾತಂಡಗಳೊಂದಿಗೆ ನಡೆದ ಮಂಡ್ಯ ದಸರಾ ಮೆರವಣಿಗೆ ವಿಜಯದಶಮಿಗೆ ಮೆರುಗು ನೀಡಿತ್ತು.ಕಳೆದ ಏಳು ವರ್ಷಗಳಿಂದ ಮಂಡ್ಯ ಯೂತ್ ಗ್ರೂಪ್ ಹಾಗೂ ಅನಿಲ್ ಆನಂದ್ ಡ್ರೀಮ್ ವರ್ಕ್ ಸಹಯೋಗದೊಂದಿಗೆ ಸಾಂಪ್ರದಾಯಿಕ ಮಂಡ್ಯ ದಸರಾ ಮುನ್ನಡೆದುಕೊಂಡು ಬಂದಿದೆ. ಅದೇ ರೀತಿ ಈ ಬಾರಿಯೂ ನಗರದ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿರುವ ಗಜೇಂದ್ರಮೋಕ್ಷ ಕೊಳದ ಬಳಿ ಮಧ್ಯಾಹ್ನ 3.50ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಬನ್ನಿಮರಕ್ಕೆ ಪೂಜೆ ನೆರವೇರಿಸಿದರು.
ಪ್ರತಿ ವರ್ಷವೂ ಉತ್ತಮ ಮಳೆಯಾಗಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿ ರೈತರ ಬಾಳು ಹಸನಾಗಲಿ. ಜಿಲ್ಲೆ ಸದಾಕಾಲ ಹಸಿರಿನಿಂದ ಕಂಗೊಳಿಸುತ್ತಾ, ನೆಮ್ಮದಿಯ ಬದುಕು ಜನರಿಗೆ ಸಿಗಲಿ. ಅಭಿವೃದ್ಧಿಪಥದಲ್ಲಿ ಮುನ್ನಡೆಯಲಿ ಎಂದು ಡಾ.ಅನಿಲ್ ಆನಂದ್ ದೇವರಲ್ಲಿ ಪ್ರಾರ್ಥಿಸಿದರು.ಬಳಿಕ ವಿಶೇಷ ರಥದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಗೂ ಮುನ್ನ ವರುಣನ ಆಗಮನ ಮಂಡ್ಯ ದಸರಾಗೆ ಶುಭ ಕೋರುವಂತಿತ್ತು.
ಮಂಡ್ಯ ದಸರಾ ಮೆರವಣಿಗೆಯ ಆಕರ್ಷಣೆಯೇ ಜಾನಪದ ಕಲಾತಂಡಗಳು. ವೈವಿಧ್ಯಮಯ, ವೈಶಿಷ್ಟ್ಯಪೂರ್ಣ ಕಲಾತಂಡಗಳು ಮೆರವಣಿಗೆ ವೇಳೆ ಜನರ ಗಮನಸೆಳೆದವು. ಕಾಂತಾರಾ ಚಿತ್ರದ ಮೂಲಕ ಜನಪ್ರಿಯಗೊಂಡಿರುವ ಪಂಜುರ್ಲಿ ದೈವದ ಕಲಾ ಪ್ರಾಕಾರ ವಿಶೇಷವಾಗಿ ಕಂಡುಬಂದಿತು. ಅಂತಹದೊಂದು ಕಲಾಪ್ರಾಕಾರ ಇದೇ ಮೊದಲ ಬಾರಿಗೆ ಮಂಡ್ಯ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರನ್ನು ಸೆಳೆಯಿತು. ನಾಗರಹೊಳೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯವರು ಪ್ರದರ್ಶಿಸಿದ ನಾಣೆತ್ತಿ ಹಾಡಿ ಕುಣಿತ ರೋಚಕತೆಯಿಂದ ಕೂಡಿತ್ತು. ಕಾಡುಜನರ ಉಡುಗೆ-ತೊಡುಗೆಗಳು ಗಮನಸೆಳೆದವು.ಕೇರಳದ ಚಂಡೆ ಸದ್ದು ಎಲ್ಲರನ್ನೂ ತನ್ನತ್ತ ಸೆಳೆಯುವಂತಿತ್ತು. ಸಾಂಪ್ರದಾಯಿಕ ಧಿರಿಸಿನಲ್ಲಿ ಚಂಡೆ ನುಡಿಸುತ್ತಾ ಸಾಗುತ್ತಿದ್ದವರು ಮೆರವಣಿಗೆಗೆ ಕಳೆ ತುಂಬಿದರು. ಪೊನ್ನಂಪೇಟೆಯ ಎರವರ ಕುಣಿತ ಕಲಾವಿದರು ಉತ್ತಮ ಪ್ರದರ್ಶನ ನೀಡಿದರು. ಲಗಾನ್ ಬ್ಯಾಂಡ್ ಸದ್ದು ಬಹುದೂರದವರೆಗೆ ಕೇಳಿಸುತ್ತಾ ಮಂಡ್ಯ ದಸರಾ ಮೆರವಣಿಗೆ ಆಗಮಿಸುತ್ತಿರುವ ಮುನ್ಸೂಚನೆ ನೀಡುತ್ತಿತ್ತು.
ಅಸ್ಥಿಪಂಜರಗಳನ್ನು ಮೈಮೇಲೆ ಧರಿಸಿಕೊಂಡಿದ್ದ ಭದ್ರಕಾಳಿ ವೇಷಧಾರಿ, ಅಘೋರಿಯ ವೀರಗಾಸೆ, ಮಹಿಷಿ ವೇಷಧಾರಿಗಳು ತಮ್ಮ ಉಗ್ರ ರೂಪದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರಿಗೆ ರಂಜನೆ ನೀಡಿದರು.ಬೆಂಕಿ ಭರಾಟೆ ಪ್ರದರ್ಶನ ಕಲಾವಿದರು ಮೈನವಿರೇಳಿಸುವ ರೀತಿಯಲ್ಲಿ ಪ್ರದರ್ಶನ ನೀಡಿದರು. ಬಾಯಲ್ಲಿ ಬೆಂಕಿಯುಗುಳುತ್ತಾ, ಬೆಂಕಿಯನ್ನು ಮೈಗೆ ಸವರಿಕೊಳ್ಳುತ್ತಾ ನೋಡುಗರಿಗೆ ರೋಚಕತೆಯನ್ನು ತಂದುಕೊಟ್ಟರು. ಪುಟಾಣಿ ಬಂಡೂರು ಕುರಿಗಳು ಮೆರವಣಿಗೆಯ ಮತ್ತೊಂದು ಆಕರ್ಷಣೆಯಾಗಿದ್ದವು. ಹತ್ತು-ಹದಿನೈದು ಮರಿಗಳು ಮೆರವಣಿಗೆಯಲ್ಲಿ ಒಟ್ಟೊಟ್ಟಿಗೆ ಸಾಗುತ್ತಾ ವಿಶೇಷ ಅತಿಥಿಗಳಾಗಿ ಕಂಡುಬಂದರು. ಡೊಳ್ಳು ಕುಣಿತ ಕಲಾವಿದರ ಸದ್ದಿಗೆ ಜನರೂ ಮಾರುಹೋಗಿದ್ದರು.
ಬೆಳ್ಳಿ ರಥದಲ್ಲಿ ಮಹಾರಾಜನ ಪೋಷಾಕಿನಲ್ಲಿ ಕುಳಿತಿದ್ದ ಸಾತನೂರು ಪ್ರಕಾಶ್ ಜನರತ್ತ ಕೈಬೀಸುತ್ತಾ ಸಾಗಿದರು. ಇನ್ನುಳಿದಂತೆ ಪೂಜಾ ಕುಣಿತ, ಚಿಲಿಪಿಲಿ ಬೊಂಬೆ, ಪಟ ಕುಣಿತ, ಸೋಮನ ಕುಣಿತ, ಮಹಿಳೆಯರ ಕೋಲಾಟ ಮೆರವಣಿಗೆಗೆ ಸಾಥ್ ನೀಡಿದ್ದವು.ನಗರದ ಶ್ರೀ ಕಾಳಿಕಾಂಬ ದೇವಾಲಯದಿಂದ ಆರಂಭವಾದ ಮೆರವಣಿಗೆ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ವಾಣಿವಿಲಾಸ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆ ಮಾರ್ಗವಾಗಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮೆರವಣಿಗೆ ಅಂತ್ಯಗೊಂಡಿತು.
ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಜನರು ನಿಂತು ಮಂಡ್ಯ ದಸರಾ ವೀಕ್ಷಿಸಿದರು. ಜಾನಪದ ಕಲಾತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಕೆಲವರು ಮೊಬೈಲ್‌ಗಳ ಮೂಲಕ ದೃಶ್ಯಾವಳಿಗಳನ್ನು ಸೆರೆಹಿಡಿದು ಸಂತಸಪಟ್ಟರು.ಮಂಡ್ಯ ಯೂತ್ ಗ್ರೂಪ್ ಪದಾಧಿಕಾರಿಗಳು ಮೆರವಣಿಗೆಯುದ್ದಕ್ಕೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರೊಂದಿಗೆ ಸಹಕರಿಸಿದರು. ಡಾ.ಅನಿಲ್ ಆನಂದ್, ಡಾ.ಯಾಶಿಕಾ ಅನಿಲ್, ದರ್ಶನ್, ವಿನಯ್, ಮೈಸೂರು ಮಂಜು, ರಾಜಣ್ಣ, ಬಿ.ಎಂ.ಅಪ್ಪಾಜಪ್ಪ, ದೇವಿ, ಪ್ರತಾಪ್, ನಂಜುಂಡ, ಮಲ್ಲೇಶ್, ಯೋಗಿ, ಪ್ರಶಾಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.