ಸಾರಾಂಶ
ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ.
ಹಗರಿಬೊಮ್ಮನಹಳ್ಳಿ: ಅತ್ಯಂತ ವೈಭವ ಶಾಸ್ತ್ರೋಕ್ತವಾಗಿ ಆಚರಿಸುವ ಗಣೇಶ ಹಬ್ಬವನ್ನು ತಂಬ್ರಹಳ್ಳಿ ಮುಸ್ಲಿಮರು ಗ್ರಾಮದ ಮಸೀದಿ, ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕೋಮು ಸೌಹಾರ್ದ ಮೆರೆದಿದ್ದಾರೆ.
ಕಳೆದ ಐದು ವರ್ಷಗಳಿಂದಲೂ ತಂಬ್ರಹಳ್ಳಿ ಗ್ರಾಮದ ಎರಡು ಕಡೆಗಳಲ್ಲೂ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಮಸೀದಿಯ ಪಕ್ಕದಲ್ಲಿ ಮುಸ್ಲಿಮರು ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪರಸ್ಪರ ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ. ಗ್ರಾಮದ ಅಬ್ದುಲ್ಲಾ, ಆಸಿಫ್, ಮುಜ್ಜು ಅತ್ಯಂತ ಕ್ರೀಯಾಶೀಲರಾಗಿ ಗಣೇಶ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮೆರಗು ತಂದಿದ್ದಾರೆ.ಉರ್ದು ಶಾಲೆ ವಿಶೇಷ:
ಗ್ರಾಮದ ಉರ್ದು ಶಾಲೆಯಲ್ಲಿ ಗಣೇಶ ಹಬ್ಬ, ಕೃಷ್ಣಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಸ್ಲಿಮರು ತಮ್ಮ ಚಿಣ್ಣರನ್ನು ಕೂಡ ಕೃಷ್ಣರಾಧೆಯರ ದಿರಿಸಿನಲ್ಲಿ ಅಲಂಕಾರಗೊಳಿಸುವುದು ಇಲ್ಲಿ ಸರ್ವೇ ಸಾಮಾನ್ಯ. ಜೊತೆಗೆ ರಕ್ಷಾಬಂಧನ ಕೂಡ ಉರ್ದು ಶಾಲೆಯಲ್ಲಿ ಪರಸ್ಪರ ಆಚರಿಸುವುದು ವಿಶೇಷವಾಗಿದೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಟಿ.ರಾಜಸಾಬ್, ಗ್ರಾಪಂ ಸದಸ್ಯ ಸಂಡೂರು ಮೆಹಬೂಬ್, ಕೊಪ್ಪಳ ಖಾಜಾಸಾಹೇಬ್, ರಫಿ, ಮಕ್ಕಳ ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸಿ ಗಣೇಶ ಹಬ್ಬದಲ್ಲಿ ಪಾಲ್ಗೊಂಡು ಗಮನಸೆಳೆದರು.ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಉರ್ದು ಶಾಲೆಯಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಂಬ್ರಹಳ್ಳಿಯ ಮಸೀದಿಯ ಆವರಣದಲ್ಲಿ ಮುಸ್ಲಿಂ ಹಿಂದೂ ಯುವಕರು ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದು.