ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭವಾಗಿದ್ದು, ಗಣೇಶನ ಮೂರ್ತಿಗಳು ಕಲಾವಿದರ ಕೈಯಲ್ಲಿ ನಾನಾ ರೂಪ ಪಡೆದು ಮನೆಗಳಲ್ಲಿ ಪ್ರತಿಷ್ಠಾಪನೆಗೆ ಸಿದ್ಧಗೊಂಡಿವೆ. ಹಬ್ಬದ ಸಡಗರ, ಪಟಾಕಿ ಸದ್ದು ಮೊಳಗಲು ಆರಂಭವಾಗಿದೆ.

ಹಾವೇರಿ: ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭವಾಗಿದ್ದು, ಗಣೇಶನ ಮೂರ್ತಿಗಳು ಕಲಾವಿದರ ಕೈಯಲ್ಲಿ ನಾನಾ ರೂಪ ಪಡೆದು ಮನೆಗಳಲ್ಲಿ ಪ್ರತಿಷ್ಠಾಪನೆಗೆ ಸಿದ್ಧಗೊಂಡಿವೆ. ಹಬ್ಬದ ಸಡಗರ, ಪಟಾಕಿ ಸದ್ದು ಮೊಳಗಲು ಆರಂಭವಾಗಿದೆ.

ಕಳೆದ ಎರಡ್ಮೂರು ತಿಂಗಳಿನಿಂದ ನಿರಂತರ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದ ಕಲಾವಿದರು ಈಗ ಎಲ್ಲ ಮೂರ್ತಿಗಳಿಗೆ ಅಂತಿಮ ಟಚ್‌ಅಫ್ ನೀಡುವ ಮೂಲಕ ಪ್ರತಿಷ್ಠಾಪನೆಗೆ ಸಿದ್ಧಗೊಳಿಸಿದ್ದಾರೆ. ಸೆ.14ರಂದು ಗಣೇಶ ಚತುರ್ಥಿ ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಪಿಓಪಿ ಗಣೇಶ ಮೂರ್ತಿಗಳ ಹಾವಳಿಯಲ್ಲಿಯೂ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಈಗಾಗಲೇ ನಗರದ ವಿವಿಧ ದೇವಸ್ಥಾನ ಸೇರಿದಂತೆ ಗಣೇಶ ಮೂರ್ತಿ ತಯಾರಿಸುವ ಸ್ಥಳಕ್ಕೆ ಸಾರ್ವಜನಿಕರು ತೆರಳಿ ತಮಗೆ ಬೇಕಾದ ಆಕೃತಿಯ ಗಣೇಶ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ಪಾವತಿಸಿ ಬುಕ್ ಮಾಡಿದ್ದು, ಗಣೇಶ ಚತುರ್ಥಿ ದಿನ ಮೂರ್ತಿಗಳನ್ನು ಮನೆಗೆ ತಂದು ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ.

ಕಣ್ಮನ ಸೆಳೆಯುವ ಮೂರ್ತಿಗಳು: ಗಣೇಶ ಮೂರ್ತಿ ತಯಾರಕರ ಕೈಯಲ್ಲಿ ಈಗಾಗಲೇ ಗಣೇಶ ಮೂರ್ತಿಗಳು ಅಂತಿಮ ರೂಪ ಪಡೆದಿದ್ದು, ಜನರನ್ನು ಆಕರ್ಷಿಸುತ್ತಿವೆ. ಸಿಂಹಾರೂಢ ಗಣಪ, ಪದ್ಮಾಸನ ರೂಪಿ ಗಣೇಶ, ನಂದಿ ಮೇಲೆ ಕುಳಿತಿರುವ ಗಣೇಶ, ಸೂರ್ಯನಾರಾಯಾಣ ರೂಪಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಣೇಶ, ಸನಾತನ ಗಣೇಶ, ಕೃಷ್ಣರೂಪಿ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ಪಂಚಮುಖಿ ಗಣೇಶ, ವಿಷ್ಣುರೂಪಿ ವಕ್ರತುಂಡ, ಇಡಗುಂಜಿ ಗಣೇಶ, ವೆಂಕಟೇಶ ರೂಪಿ ಗಣೇಶ, ಶ್ರೀರಾಮ ರೂಪಿ ಗಣೇಶ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ವಿವಿಧ ಭಂಗಿಯ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೆ ರೂಪುಗೊಂಡಿವೆ.

ಬೆಲೆ ಏರಿಕೆ ಬಿಸಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಣೇಶ ಮೂರ್ತಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದ್ದು, ಗಣೇಶನ ಮೂರ್ತಿಗಳ ಆಕಾರ, ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿಗೊಳಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು 500 ರು.ಗಳಿಂದ ಪ್ರಾರಂಭಗೊಂಡು ಐದಾರು ಸಾವಿರ ರು.ಗಳ ವರೆಗೆ ಗಣೇಶ ಮೂರ್ತಿಗಳು ಮಾರಾಟವಾಗುತ್ತಿವೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ 5ರಿಂದ 10 ಅಡಿ ಗಣೇಶ ಮೂರ್ತಿಗಳು ₹ 10ರಿಂದ 25 ಸಾವಿರದವರೆಗೆ ಮಾರಾಟವಾಗುತ್ತಿವೆ.

ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ: ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದ್ದರೂ, ಜಿಲ್ಲೆಯಲ್ಲಿ ಎಗ್ಗಿಲ್ಲದೇ ಪಿಒಪಿ ಗಣೇಶ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಮಣ್ಣಿನ ಮೂರ್ತಿ ತಯಾರಕರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಆಕರ್ಷಿತರಾಗುತ್ತಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನೂ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಪ್ರತಿಷ್ಠಾಪಿಸುವ ಎತ್ತರದ ಮೂರ್ತಿಗಳು ಪಿಓಪಿ ಆವರಿಸುತ್ತಿದ್ದು, ಪರಿಸರಕ್ಕೆ ಉಂಟಾಗುವ ಹಾನಿ ತಡೆಗಟ್ಟಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಒಂದೂವರೆ ದಶಕದ ಹಿಂದೆ ಜಿಲ್ಲೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ವೃತ್ತಿಯಲ್ಲಿದ್ದರು. ಇದೀಗ ಈ ಸಂಖ್ಯೆ ಬೆರಳೆಣಿಕೆಗೆ ಇಳಿಕೆಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಾಂಪ್ರದಾಯಿಕ ಕಲೆಯ ಉಳಿವಿಗಾಗಿ ಪಿಒಪಿ ಮೂರ್ತಿಗಳ ಮೇಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಜತೆಗೆ ಮಣ್ಣಿನ ಗಣೇಶ ತಯಾರಿಸುವ ಸ್ಥಳೀಯ ಕಲಾವಿದರಿಗೆ ಆರ್ಥಿಕ ನೆರವು, ತರಬೇತಿ ಹಾಗೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು ಎಂದು ಮಣ್ಣಿನ ಗಣಪತಿ ಕಲಾವಿದರ ಸಂಘದ ಮುಖಂಡ ಚಂದ್ರಶೇಖರ ಬಡಿಗೇರ ಹೇಳಿದರು.