ಸಾರಾಂಶ
ಕಳೆದ ವರ್ಷ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ಮನೆ ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದರು. ಮಳೆಯ ರೌದ್ರಾವತಾರ ಕ್ಷೀಣಿಸಿದ ಬಳಿಕ ಮರಳಿ ಮನೆಗೆ ಬಂದಿದ್ದರು. ಈ ವರ್ಷ ಮತ್ತೆ ಮಳೆಗಾಲ ಆರಂಭವಾಗುತ್ತಿದ್ದರೂ ಶಾಸಕರು, ಜಿಲ್ಲಾಧಿಕಾರಿಗಳು ನೀಡಿದ ಭರವಸೆ ಈ ವರೆಗೂ ಈಡೇರಿಲ್ಲ.
ಸೋಮರಡ್ಡಿ ಅಳವಂಡಿ
ಕೊಪ್ಪಳ:ಮಳೆಗಾಲ ಶುರುವಾಗುತ್ತಿದ್ದಂತೆ ಇಲ್ಲಿಯ ಜನರು ಬೆಚ್ಚಿ ಬೀಳುತ್ತಾರೆ. ಅತ್ತ, ಗುಡುಗು-ಸಿಡಿಲಿನೊಂದಿಗೆ ಮಳೆ ಆರಂಭವಾದರೆ ಸಾಕು ಇಲ್ಲಿ ಜನತೆ ರಾತ್ರಿಯಿಡಿ ಕಣ್ಣು ಮುಚ್ಚುವುದಿಲ್ಲ.
ಹೌದು.. ಇಲ್ಲಿನ ಗಣೇಶ ನಗರ ನಿವಾಸಿಗಳ ಸ್ಥಿತಿ. ಪ್ರತಿ ಮಳೆಗಾಲದಲ್ಲಿ ಈ ನಗರಕ್ಕೇ ಭೇಟಿ ನೀಡುವ ಶಾಸಕರು, ಜಿಲ್ಲಾಧಿಕಾರಿ, ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ. ಯಾರೂ ಚಿಂತಿತರಾಗಬೇಡಿ ಎಂದು ಧೈರ್ಯ ತುಂಬಿ ಹೋಗುತ್ತಾರೆ. ಅದನ್ನೇ ನಂಬಿದ್ದ ಜನತೆಗೆ ಮತ್ತೆ ಮುಂದಿನ ವರ್ಷ ಮಳೆ ಬಂದಾಗ ಅದೇ ಗೋಳು.ಮನೆ ತೊರೆದಿದ್ದ ಜನ:
ಕಳೆದ ವರ್ಷ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ಮನೆ ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದರು. ಮಳೆಯ ರೌದ್ರಾವತಾರ ಕ್ಷೀಣಿಸಿದ ಬಳಿಕ ಮರಳಿ ಮನೆಗೆ ಬಂದಿದ್ದರು. ಈ ವರ್ಷ ಮತ್ತೆ ಮಳೆಗಾಲ ಆರಂಭವಾಗುತ್ತಿದ್ದರೂ ಶಾಸಕರು, ಜಿಲ್ಲಾಧಿಕಾರಿಗಳು ನೀಡಿದ ಭರವಸೆ ಈ ವರೆಗೂ ಈಡೇರಿಲ್ಲ. ಹೀಗಾಗಿ ಈ ವರ್ಷವೂ ನಾವು ಮನೆ ತೋರೆಯಬೇಕಲ್ಲ ಎಂಬ ಚಿಂತೆಯಲ್ಲಿ ಆಕಾಶದತ್ತ ಮುಖ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಒತ್ತುವರಿ ತೆರವಿಲ್ಲ:
ಕಳೆದ ವರ್ಷ ನಗರಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಶಾಸಕರು, ಗಣೇಶ ನಗರಕ್ಕೆ ನೀರು ನುಗ್ಗುವುದನ್ನು ತಡೆಯುವುದಾಗಿ ಹೇಳಿದ್ದರು. ಜತೆಗೆ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಸ್ಥಳದಲ್ಲಿದ್ದ ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಅವರಿದ್ದಾಗಲೇ ಜೆಸಿಬಿ ಸಹ ಬಂದಿತ್ತು. ಅತಿಕ್ರಮಣ ಮುಲಾಜಿಲ್ಲದೆ ತೆರವು ಮಾಡಬೇಕೆಂದು ಆದೇಶಿಸುವ ಜತೆಗೆ ಮುಖ್ಯಾಧಿಕಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ತರಾಟೆಗೆ ತೆಗೆದುಕೊಂಡು, ವಾರದೊಳಗೆ ಕಾರ್ಯಾಚರಣೆ ಮುಗಿಸುವಂತೆ ತಾಕೀತು ಮಾಡಿದ್ದರು. ಸ್ಥಳೀಯ ನಿವಾಸಿಗಳು ಸಹ ಶಾಸಕರ ಮಾತಿಗೆ ನಂಬಿಕೆ ಇಷ್ಟು ನಮ್ಮ ಸಮಸ್ಯೆ ಇಂದೇ ಕೊನೆಯಾಗುತ್ತದೆ ಎಂದು ಸಂತಸ ಪಟ್ಟಿದ್ದರು. ಆದರೆ, ಇಲ್ಲಿಯ ವರೆಗೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.ಹೀಗಾಗಿ ಸಿಡಿಲು-ಗುಡುಗು ಆರಂಭವಾಗುತ್ತಿದ್ದಂತೆ ಈ ನಗರದ ನಿವಾಸಿಗಳು ಭಯಭೀತರಾಗುತ್ತಾರೆ. ತಕ್ಷಣವೇ ನಮ್ಮ ಸಮಸ್ಯೆ ನಿವಾರಣೆಗೆ ಕ್ರಮಕೈಗೊಂಡು ಈ ವರ್ಷವೂ ಮನೆ ತೊರೆಯದಂತೆ ನೋಡಿಕೊಳ್ಳಬೇಕು ಎಂದು ಕೈ ಮುಗಿಯುತ್ತಿದ್ದಾರೆ.ಶಾಸಕರೇ ಭೇಟಿ ನೀಡಿ...
ಶಾಸಕ ರಾಘವೇಂದ್ರ ಹಿಟ್ನಾಳ ಸಾಹೇಬ್ರ... ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನ ಗಣೇಶ ನಗರಕ್ಕೆ ಭೇಟಿ ನೀಡಿ ಮಳೆ ನೀರು ನುಗ್ಗದಂತೆ ಕ್ರಮಕೈಗೊಳ್ಳಿ. ನೀವು ಕಳೆದ ವರ್ಷ ಅಧಿಕಾರಿಗಳಿಗೆ ರಾಜಕಾಲುವೆ ತೆರವು ಮಾಡುವಂತೆ ಹೇಳಿದ್ದು ಈ ವರೆಗೂ ಮಾಡಿಲ್ಲ. ಈಗಲಾದರೂ ಬಂದು ಸಮಸ್ಯೆ ಬಗೆಹರಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಮಳೆ ಬಂದ ಮೇಲೆ ಆಗಿರುವ ಹಾನಿ ನೋಡಲು ಬರುವವರು ಮಳೆ ಬರುವ ಮುನ್ನವೇ ಬಂದು ಸಮಸ್ಯೆ ಇತ್ಯರ್ಥಪಡಿಸುವುದಿಲ್ಲ. ಈ ವರ್ಷವೂ ಮಳೆಗಾಲ ಬರುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.ಬಸವರಾಜ, ಗಣೇಶ ನಗರ ನಿವಾಸಿ ಸಮಸ್ಯೆ ಗಂಭೀರವಾಗಿದ್ದು, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕಿದೆ. ಈ ವರ್ಷ ಮಳೆ ಬರುವ ಮುನ್ನ ನೀರು ಹರಿದು ಹೋಗಲು ದಾರಿ ಮಾಡಬೇಕಿದೆ.
ದೇವರಾಜ, ಗಣೇಶ ನಗರ ನಿವಾಸಿ