ಸಾರಾಂಶ
ಹುಬ್ಬಳ್ಳಿ: ಇಲ್ಲಿಯ ಈದ್ಗಾ (ರಾಣಿ ಚೆನ್ನಮ್ಮ) ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಹು-ಧಾ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ, ಅಗತ್ಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಕಳೆದ 2 ವರ್ಷದಿಂದ ಗಣೇಶೋತ್ಸವ ಆಚರಿಸಿದ್ದ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಗೆ ಈ ಸಲವೂ ಅನುಮತಿ ದೊರೆತಿದೆ. ಸೆ. 7ರಿಂದ 9ರ ವರೆಗೆ (3 ದಿನ) ಗಣೇಶೋತ್ಸವ ಆಚರಿಸಬೇಕು. ಮಧ್ಯಾಹ್ನ 12ರೊಳಗೆ ವಿಸರ್ಜನೆ ಮಾಡುವುದು ಸೇರಿದಂತೆ 19 ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.ಕಳೆದೆರಡು ವರ್ಷ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಕುರಿತಂತೆ ಸಾಕಷ್ಟು ಹೋರಾಟಗಳು ಆಗಿದ್ದವು. ಈ ವಿಷಯ ಕೋರ್ಟ್ ಮೆಟ್ಟಿಲು ಕೂಡಾ ಏರಿತ್ತು. ಕೊನೆಯ ಗಳಿಗೆಯಲ್ಲಿ ಅನುಮತಿ ಸಿಗುತ್ತಿತ್ತು. ದೇಶಾದ್ಯಂತ ಈದ್ಗಾ ಮೈದಾನ ಗಣೇಶೋತ್ಸವ ಭಾರೀ ಸದ್ದು ಮಾಡಿತ್ತು. ಈ ವರ್ಷ ಮುಂಚಿತವಾಗಿಯೇ ಅನುಮತಿ ದೊರಕಿದೆ.
ಬುಧವಾರ ಬೆಳಗ್ಗೆ ಇಡೀ ಮೈದಾನವನ್ನು ಪೌರಕಾರ್ಮಿಕರು ಕಸ ಗೂಡಿಸಿ, ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಮೈದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಹೆಚ್ವುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೆ. 6ರಂದು ಗಜಾನನ ಉತ್ಸವ ಮಹಾಮಂಡಳಿಯು ಗಣೇಶ ಪ್ರತಿಷ್ಠಾಪನೆ ಪೂರ್ವದಲ್ಲಿ ಹಾಲುಗಂಬದ ಪೂಜೆ ಹಮ್ಮಿಕೊಳ್ಳಲು ಪಾಲಿಕೆಗೆ ಮನವಿ ಮಾಡಿದ್ದು, ಪೊಲೀಸ್ ಆಯುಕ್ತರಿಂದ ಒಪ್ಪಿಗೆ ಪತ್ರ ಪಡೆದಲ್ಲಿ ಪೂಜೆಗೆ ಅವಕಾಶ ನೀಡುವುದಾಗಿ ಪಾಲಿಕೆ ಆಯುಕ್ತರು ಮಂಡಳಿಯವರಿಗೆ ಸೂಚನೆ ನೀಡಿದ್ದಾರೆ.ಬಿಗಿ ಭದ್ರತೆಚೆನ್ನಮ್ಮ ವೃತ್ತ ಹಾಗೂ ಮೈದಾನದ ಸುತ್ತ ಬಿಗಿ ಪೊಲೀಸ್ ಪಹರೆ ಹಾಕಲಾಗಿದ್ದು, ಆ ಮೂಲಕ ಸಾರ್ವಜನಿಕರ ಅನಗತ್ಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಮೈದಾನದ ಒಳಗೆ ಮತ್ತು ಸುತ್ತ ಭದ್ರತೆಗೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಮೈದಾನದ ಸುತ್ತಲೂ ಪಾಲಿಕೆ ಹಾಗೂ ಪೊಲೀಸರಿಂದ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೇ ಮೈದಾನದಲ್ಲಿ ಪೊಲೀಸರಿಗೆ ಕಣ್ಗಾವಲಿಗಾಗಿ ಸಿಸಿ ಕ್ಯಾಮೆರಾದ ಮಾನಿಟರ್ ವ್ಯವಸ್ಥೆ ಮಾಡಲಾಗುತ್ತಿದೆ. ವಿಸರ್ಜನೆಯ ದಿನದಂದು ಡ್ರೋಣ್ ಮೂಲಕ ಹದ್ದಿನ ಕಣ್ಣಿಡಲು ಸಿದ್ಧತೆ ನಡೆಸಲಾಗುತ್ತಿದೆ. ಅಲ್ಲದೇ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲು ಪೊಲೀಸರೊಂದಿಗೆ ಪಾಲಿಕೆಯಿಂದಲೇ ವಿಶೇಷ ಅಧಿಕಾರಿಗಳನ್ನು ನೇಮಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಾರ್ಕಿಂಗ್ ನಿಷೇಧಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿ ನೀಡಿದ ಹಿನ್ನೆಲೆಯಲ್ಲಿಯೇ ಮಂಗಳವಾರ ಸಂಜೆಯಿಂದಲೇ ಮೈದಾನದಲ್ಲಿ ಪಾರ್ಕಿಂಗ್‌ನಲ್ಲಿ ಇದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಅಲ್ಲದೇ, ಗಣೇಶೋತ್ಸವ ಮುಗಿಯುವ ವರೆಗೆ ಕಾರುಗಳ ಪಾರ್ಕಿಂಗ್ ನಿಷೇಧಿಸಿ ಪೊಲೀಸ್ ಪಹರೆ ಹಾಕುವ ಮೂಲಕ ಬಂದೋಬಸ್ತ್ ಕೈಗೊಳ್ಳಲಾಗಿದೆ.ಭದ್ರತೆರಾಣಿ ಚೆನ್ನಮ್ಮ(ಈದ್ಗಾ) ಮೈದಾನದಲ್ಲಿ ಈ ಬಾರಿಯೂ ಮೂರು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶರತ್ತುಬದ್ಧ ಅನುಮತಿ ನೀಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಭದ್ರತೆ ಒದಗಿಸಲಾಗುತ್ತಿದೆ.
ಡಾ. ಈಶ್ವರ ಉಳ್ಳಾಗಡ್ಡಿ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ