ಗಣೇಶೋತ್ಸವ, ಈದ್‌: ಪೊಲೀಸ್‌ ಪಥಸಂಚಲನ

| Published : Sep 15 2024, 01:45 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ 9ನೇ ಹಾಗೂ 11ನೇ ದಿನದ ಗಣೇಶೋತ್ಸವ ಹಾಗೂ ಸೋಮವಾರ ಈದ್‌ ಮಿಲಾದ್‌ ಇರುವುದರಿಂದ ನಗರದಲ್ಲಿ ಪೊಲೀಸರು ಪಥಸಂಚಲನ ಮೂಡಿಸಿದರು. ಹಬ್ಬದ ಮೆರವಣಿಗೆಯಲ್ಲಿ ಕಾನೂನು ನಿಯಮ ಮೀರಿದರೆ ಕ್ರಮದ ಎಚ್ಚರಿಕೆಯನ್ನೂ ನೀಡಿದರು.

ಹುಬ್ಬಳ್ಳಿ:

ಗಣೇಶೋತ್ಸವ ಹಾಗೂ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ನಗರದಲ್ಲಿ ಹು-ಧಾ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಪೊಲೀಸ್‌ ಪಥ ಸಂಚಲನ ನಡೆಯಿತು.

ಇಲ್ಲಿಯ ಶಹರ ಠಾಣೆಯಿಂದ ಆರಂಭಗೊಂಡ ಪಥ ಸಂಚಲನಕ್ಕೆ ಪೊಲೀಸ್‌ ಕಮಿಷ್ನರ್‌ ಎನ್‌. ಶಶಿಕುಮಾರ ಚಾಲನೆ ನೀಡಿದರು. ಪಥ ಸಂಚಲನದಲ್ಲಿ ಹೊರ ಜಿಲ್ಲೆಯಿಂದ ಬಂದ ಪೊಲೀಸ್‌ ಅಧಿಕಾರಿಗಳು, ಆರ್‌ಎಎಫ್‌, ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿಗಳು, ಗೃಹರಕ್ಷಕ ದಳ, ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಸೇರಿ 1000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್‌ ಕಮಿಷನರ್‌ ಶಶಿಕುಮಾರ, ಪಥ ಸಂಚಲನ ಮೂಲಕ ಹು-ಧಾ ಪೊಲೀಸ್‌ ಕಮಿಷನರೇಟ್‌ ಸರ್ವ ಸನ್ನದ್ಧವಾಗಿದೆ ಎಂಬ ಆತ್ಮವಿಶ್ವಾಸವನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ಆದ್ದರಿಂದ 9 ಮತ್ತು 11 ದಿನ ಗಣೇಶ ವಿಸರ್ಜನಾ ಮೆರವಣಿಗೆ ಮತ್ತು ಈದ್‌ ಮಿಲಾದ್‌ ಹಬ್ಬದ ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಶಾಂತಿಯುತವಾಗಿ ನೆರವೇರಿಸಬೇಕು. ಮೆರವಣಿಗೆಯಲ್ಲಿ ಮದ್ಯಪಾನ, ಮಾದಕವಸ್ತು ಸೇವಿಸಿ ಅನಗತ್ಯ ಕಿರಿಕಿರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಹರ ಠಾಣೆಯಿಂದ ಆರಂಭಗೊಂಡ ಪಥ ಸಂಚಲನ ಶಿವಾಜಿ ಚೌಕ್‌, ತುಳಜಾಭವಾನಿ ಸರ್ಕಲ್‌, ದಾಜಿಬಾನ್‌ಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ತಾಡಪತ್ರಿ ಗಲ್ಲಿ, ಮೂರುಸಾವಿರ ಮಠ, ಮಹಾವೀರ ಗಲ್ಲಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್‌, ಕೌಲಪೇಟೆ, ಓಲ್ಡ್‌ ಕೆಇಬಿ ಆಫೀಸ್‌, ಚನ್ನಮ್ಮ ವೃತ್ತ, ಲ್ಯಾಮ್ಮಿಂಗ್ಟನ್‌ ರಸ್ತೆ, ಕೊಪ್ಪಿಕರ ರಸ್ತೆ ಮಾರ್ಗವಾಗಿ ವಿಕ್ಟೋರಿಯಾ ರಸ್ತೆಗೆ ಬಂದು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ ಸಿ.ಆರ್‌., ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ಉಮೇಶ ಚಿಕ್ಕಮಠ, ವಿನೋಧ ಮುಕ್ತೇದಾರ, ಹೊರ ಜಿಲ್ಲೆ ಎಸ್ಪಿಗಳಾದ ಮಲ್ಲಿಕ, ಗೋಪಾಲ, ಡಿಎಸ್ಪಿ ಗೌತಮ, ಸಿಎಆರ್‌ ಡಿಸಿಪಿ ಕಾಶಪ್ಪನವರ ಸೇರಿದಂತೆ ಪಿಐಗಳಾದ ಎಂ.ಎಂ. ತಹಸೀಲ್ದಾರ ಸೇರಿದಂತೆ ಇತರರು ಇದ್ದರು.

200 ಸಿಸಿ ಕ್ಯಾಮೆರಾ ಕಣ್ಗಾವಲು:

ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ 40-50 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ, ಕೃತ್ಯ ಎಸಗುವ ವಿಚಾರದಲ್ಲಿ ಪಾಲ್ಗೊಳ್ಳುವವರ ಮೇಲೂ ವಿಶೇಷ ನಿಗಾವಹಿಸಲು ಕ್ರಮವಹಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಹೇಳಿದರು.

ಪಥ ಸಂಚಲನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಹಾಗೂ ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಅವಳಿನಗರದಲ್ಲಿ ಹೆಚ್ಚುವರಿಯಾಗಿ 200 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಫ್ತಿಯಲ್ಲಿರುವ ಪೊಲೀಸರು ಫೋಟೋ, ವೀಡಿಯೋ ಸೆರೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ದಿವ್ಯದೃಷ್ಠಿ ವಾಹನಗಳಲ್ಲಿ ನಿರಂತರ ಸಿಸಿ ಟಿವಿ, ಡ್ರೋನ್‌ ಕ್ಯಾಮೆರಾ ಮೇಲ್ವಿಚಾರಣೆ ಕಾರ್ಯವೂ ನಡೆಯುತ್ತದೆ. ಹಾಗಾಗಿ ಗುಂಪಿನಲ್ಲಿ ಮಹಿಳೆಯರು, ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವುದು, ಅಪರಾಧಿಕ ಕೃತ್ಯ ಎಸಗುವ ತಕ್ಕ ಶಾಸ್ತಿಯಾಗಲಿದೆ ಎಂದು ಎಚ್ಚರಿಸಿದರು.

ಮೆರವಣಿಗೆ ವೇಳೆ ಆಯಾಸ, ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವವರಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಮಹಾನಗರ ವ್ಯಾಪ್ತಿಯಲ್ಲಿ 8 ಸುರಕ್ಷತಾ ಐಲ್ಯಾಂಡ್‌ ಸ್ಥಾಪಿಸಲಾಗಿದ್ದು, ಇಲ್ಲಿ ವೈದ್ಯರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಇದರೊಟ್ಟಿಗೆ ಸಾರ್ವಜನಿಕರಿಗೆ ಸಹಾಯಕ್ಕಾಗಿ 112 ವಾಹನ, ಗಜಾನನ ಮಂಡಳಿಯ 100ಕ್ಕೂ ಹೆಚ್ಚು ಸ್ವಯಂ ಸೇವಕರು ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ಈಗಾಗಲೇ ಅವರಿಗೆ ಐಡಿಕಾರ್ಡ್‌ ಸಹ ನೀಡಲಾಗಿದೆ. ಆದ್ದರಿಂದ ಶಾಂತಿಯುತ ಆಚರಣೆಗೆ ಸಾರ್ವಜನಿಕರು ಒತ್ತು ನೀಡಬೇಕು ಎಂದು ತಿಳಿಸಿದರು.ಹಬ್ಬದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಧಾರ್ಮಿಕ ಗುರುಗಳು, ಆಯಾ ಸಮುದಾಯದ ಮುಖಂಡರು ಹಾಗೂ ಬಂಧುಗಳು ಪೊಲೀಸ್‌ ಇಲಾಖೆ ಸೇರಿ ಎಲ್ಲ ಇಲಾಖೆಗೂ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

ಈ ಮಧ್ಯೆಯೂ ಆರ್‌ಎಎಫ್‌, ಕೆಎಸ್‌ಆರ್‌ಪಿ, ಹೊರ ಜಿಲ್ಲೆಯಿಂದ ಆಗಮಿಸಿದ ಪೊಲೀಸರು ಭದ್ರತೆ ಜತೆಗೆ ವಾಹನಗಳ ಸುಗಮ ಸಂಚಾರಕ್ಕೆ ಪೂರಕ ಮಾರ್ಗಬದಲಾವಣೆಗೆ ಕ್ರಮವಹಿಸಲಾಗುತ್ತಿದೆ ಎಂದರು.