ಸಾರಾಂಶ
ಕಾರಟಗಿ:
ತುಂಗಭದ್ರಾ ನೀರಾವರಿ ಯೋಜನೆಯಡಿ ಕೆಲಸ ಮಾಡುವ ಗ್ಯಾಂಗ್‌ಮನ್‌ಗಳಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸದೇ ಇರುವುದನ್ನು ಖಂಡಿಸಿ ಪಟ್ಟಣದ ನೀರಾವರಿ ಯೋಜನೆ ಕಚೇರಿ ಎದುರು 70 ಕಾರ್ಮಿಕರು ಶುಕ್ರವಾರ ಧರಣಿ ನಡೆಸಿದರು.ಎಡದಂಡೆ ನಾಲೆಯ ೩೨ನೇ ಕಾಲುವೆ ಮೇಲೆ ದುಡಿಯುತ್ತಿರುವ ಗ್ಯಾಂಗ್‌ಮನ್‌ಗಳಿಗೆ (ಟಾಸ್ಕ್‌ವರ್ಕ್) ೪ ತಿಂಗಳಿಂದ ವೇತನವೇ ಸಿಕ್ಕಿಲ್ಲ, ಕೂಡಲೇ ವೇತನ ಪಾವತಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ನಂ-೨ ಕಾಲುವೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆಯುವ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ನಮಗೆ ವೇತನ ನೀಡಿಲ್ಲ. ಹೀಗಾಗಿ ಬದುಕಿನ ನಿರ್ವಹಣೆಗಾಗಿ ಇನ್ನೊಬ್ಬರ ಬಳಿ ಸಾಲಕ್ಕೆ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಾನಿರತ ಹನುಮಂತರಾವ್ ಕುಲಕರ್ಣಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ೨೦೨೪ರ ನವೆಂಬರ್, ಡಿಸೆಂಬರ್ ಸೇರಿದಂತೆ ಈ ವರ್ಷದ ಜನವರಿ ಹಾಗೂ ಫೆಬ್ರವರಿ ತಿಂಗಳ ವೇತನ ನೀಡಿಲ್ಲ ಎಂದು ದೂರಿದರು.ಪ್ರಭುಸ್ವಾಮಿ, ಶೇಖರ್ ಮಾತನಾಡಿ, ೩೨ನೇ ಕಾಲುವೆ ಮೇಲೆ ಒಟ್ಟು೭೭ ಜನ ಗ್ಯಾಂಗ್‌ಮನ್‌ಗಳಿದ್ದು ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದೇವೆ. ಕಾರಟಗಿ ತಾಲೂಕಿನವರು ಮಾತ್ರವಲ್ಲದೇ ಸಿಂಧನೂರು ತಾಲೂಕಿನ ಗ್ಯಾಂಗ್‌ಮನ್‌ಗಳು ಇದ್ದು, ಏಜೆನ್ಸಿ ಅಡಿ ಪ್ರತಿಯೊರ್ವರಿಗೆ ಮಾಸಿಕ ₹ ೧೪ ಸಾವಿರ ವೇತನ ನಿಗದಿಯಾಗಿದೆ. ಆದರೆ, 4 ತಿಂಗಳಿಂದ ವೇತನಕ್ಕಾಗಿ ಮೇಲಾಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ಹೇಳಿದರು.
ಫೆ. ೧೭ರಂದು ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ಗೋಡೆಕಾರ ಅವರಿಗೆ ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಅವರ ಗಮನಕ್ಕೂ ತರಲಾಗಿದೆ. ಅವರು ಕೂಡಾ ನಿಮ್ಮ ಮೇಲಾಧಿಕಾರಿಗಳಿಗೆ ವೇತನ ಪಾವತಿಸುವಂತೆ ಸೂಚಿಸುತ್ತೇನೆಂದು ತಿಳಿಸಿದ್ದರು. ಆದರೂ ಮೇಲಾಧಿಕಾರಿಗಳು ಮಾತ್ರ ಆಗ ಕೊಡುತ್ತೇವೆ, ಈಗ ಕೊಡುತ್ತೇವೆ ಎಂದು ನಮ್ಮನ್ನು ಸಾಗ ಹಾಕುತ್ತಿದ್ದಾರೆ. ಇತ್ತ ಇನ್ನು ೨೦ ದಿನದೊಳಗೆ ನಮ್ಮ ಗುತ್ತಿಗೆ ಅವಧಿ ಮುಗಿಯುತ್ತದೆ. ಹಾಗಾದರೆ ನಮ್ಮ ವೇತನ ಕೊಡುವುದಾದರೂ ಯಾವಾಗ ಎಂದು ಆಕ್ರೋಶ ಹೊರಹಾಕಿದರು. ನೀವು ಹೀಗೆ ವಿಳಂಬ ಮಾಡಿದರೆ ಕಚೇರಿಯ ಮುಂದೆಯೇ ಹೆಂಡತಿ-ಮಕ್ಕಳೊಂದಿಗೆ ಬಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ಸಹಾಯಕ ಅಭಿಯಂತರ ವಿರೂಪಾಕ್ಷಪ್ಪ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಗ್ಯಾಂಗ್‌ಮನ್‌ಗಳಾದ ಮಹಿಬೂಬ್ ಮ್ಯಾಗಳಮನಿ, ಶಿವಕುಮಾರ, ಬಸವರಾಜ ಅಡವಿಬಾವಿ, ಚೌಡಪ್ಪ, ಶ್ರೀಧರಗೌಡ, ದುರುಗಪ್ಪ ಭೋವಿ, ಶಿವು ಕುಂಬಾರ, ರಮೇಶ ಹರಿಜನ, ಯಮನೂರಪ್ಪ ಚಲುವಾದಿ, ರಮೇಶ ಚಲುವಾದಿ, ಶಬ್ಬೀರ್, ದರಿಯಪ್ಪ, ಪಾಮಯ್ಯ ಇದ್ದರು.