ಸಾರಾಂಶ
ಕನ್ನಡಪ್ರಭ ವಾರ್ತೆ ಬೈಂದೂರು
ಗಂಗೊಳ್ಳಿ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಸಂಭವಿಸಿದ ದೋಣಿ ದುರಂತದಲ್ಲಿ ನೀರು ಪಾಲಾದ ಮೂರನೇ ವ್ಯಕ್ತಿಯ ಮೃತದೇಹ ಗುರುವಾರ ಪತ್ತೆಯಾಗಿದೆ. ಸುರೇಶ್ ಖಾರ್ವಿ ಮೃತರು. ಮುಂಜಾನೆ ಕುಂದಾಪುರ ಕೋಡಿ ಸಿವಾಕ್ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು,ಇದರೊಂದಿಗೆ ದುರ್ಘಟನೆಯಲ್ಲಿ ಕಾಣೆಯಾದ ಮೂರೂ ಮಂದಿಯ ಮೃತದೇಹ ಸಿಕ್ಕಿದಂತಾಗಿದೆ. ಲೋಹಿತ್ ಖಾರ್ವಿ, ಸಂಜೆ ಜಗನ್ನಾಥ ಖಾರ್ವಿ ಮೃತದೇಹ ಬುಧವಾರವೇ ಪತ್ತೆಯಾಗಿತ್ತುದುರಂತ ಸಂಭವಿಸಿದ ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯ ಮೀನುಗಾರರೊಂದಿಗೆ ಶಾಸಕರು ಸಮಾಲೋಚನೆ ನಡೆಸಿದರು.
ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೀನುಗಾರರು ದಯವಿಟ್ಟು ಬೋಟು, ದೋಣಿ ಹತ್ತುವಾಗ ಲೈಫ್ ಜಾಕೆಟ್ ಹಾಕಿಕೊಂಡು ಕಡಲಿಗೆ ಇಳಿಯಬೇಕು. ಜೀವ ರಕ್ಷಕ ಸಾಧನವಾಗಿದೆ. ಮೀನುಗಾರರು ಕನಿಷ್ಠ ಅಳಿವೆ ಬಾಗಿಲಿಗೆ ಬರುವಾಗ ಹಾಗೂ ಹೋಗುವಾಗ ಆದರೂ ಲೈಫ್ ಜಾಕೆಟ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್ ಕೆ., ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯ್ಕ್, ಪಕ್ಷದ ಮುಖಂಡರು, ಮೀನುಗಾರ ಪ್ರಮುಖರು ಉಪಸ್ಥಿತರಿದ್ದರು.ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ: ಮೀನುಗಾರರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ.ಈ ಮೀನುಗಾರರ ಕುಟುಂಬಗಳಿಗೆ ಸರ್ಕಾರದಿಂದ ನಿಯಮಾನುಸಾರ ಪರಿಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ದುಃಖದ ಈ ಸಮಯದಲ್ಲಿ ಮೃತರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾದ್ದೇನೆ. ಅಗಲಿದ ಆತ್ಮಗಳಿಗೆ ಭಗವಂತ ಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ ದಯಪಾಲಿಸಲಿ ಪ್ರಾರ್ಥಿಸುತ್ತೇನೆ ಹಾಗೂ ಕುಟುಂಬಸ್ಥರು ಯಾವುದೇ ಕಾರಣಕ್ಕೆ ಧೈರ್ಯವನ್ನು ಕಳೆದುಕೊಳ್ಳಬೇಡಿ ಎಂದು ವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ. ಸಮುದ್ರಕ್ಕಿಳಿಯದಂತೆ ಮನವಿ:ಕರಾವಳಿಯಲ್ಲಿ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಯಲ್ಲೋ ಅಲರ್ಟ್ ಘೋಷಿಸಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವರು ಸೂಚಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.