ಅಕ್ಷರ ದಾಸೋಹ ನಡೆಸುತ್ತಿರುವ ಲಿಂಗಾಯತ ಮಠಗಳ ಮೂಲ ಗಂಗೋತ್ರಿ ಬಸವಣ್ಣ: ಸದಾಶಿವಾನಂದ ಭಾರತಿ ಶ್ರೀ

| Published : May 27 2024, 01:10 AM IST

ಅಕ್ಷರ ದಾಸೋಹ ನಡೆಸುತ್ತಿರುವ ಲಿಂಗಾಯತ ಮಠಗಳ ಮೂಲ ಗಂಗೋತ್ರಿ ಬಸವಣ್ಣ: ಸದಾಶಿವಾನಂದ ಭಾರತಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಎಂಜಿನಿಯರಿಂಗ್ ಓದಿದ್ದರೂ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಆಪ್ಷನಲ್ ವಿಷಯವಾಗಿ ತೆಗೆದುಕೊಂಡು ಉತ್ತೀರ್ಣನಾದೆ.

ಸಂಡೂರು: ಲಿಂಗಾಯತ ಮಠಗಳು ರಾಜ್ಯದಲ್ಲಿ ಮಾಡಿದ ಅಕ್ಷರ ಹಾಗೂ ಜ್ಞಾನ ಕ್ರಾಂತಿಯು ರಾಜ್ಯದ ಪ್ರಗತಿಗೆ ಪ್ರಮುಖ ಕಾರಣವಾಗಿದೆ. ಈ ಕ್ರಾಂತಿಯ ಮೂಲ ಗಂಗೋತ್ರಿ ಬಸವಣ್ಣನವರು ಎಂದು ಗದಗ ಶ್ರೀ ಶಿವಾನಂದ ಬೃಹನ್ಮಠದ ಸದಾಶಿವಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಂಘದಿಂದ ಹಮ್ಮಿಕೊಂಡಿದ್ದ ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ೯೫೩ನೇ ರ‍್ಯಾಂಕ್ ಪಡೆದು ಕೇಂದ್ರ ಸರ್ಕಾರಿ ಸೇವೆಗೆ ಆಯ್ಕೆಯಾಗಿರುವ ಹಾಗೂ ಪ್ರಸ್ತುತ ಕೊಪ್ಪಳ ಕಾರಾಗೃಹದ ಅಧೀಕ್ಷಕರಾಗಿರುವ ಟಿ. ವಿಜಯಕುಮಾರ್ ಮಾತನಾಡಿ, ಹಲವು ವಿಫಲತೆಗಳ ನಂತರ ನಿರಂತರ ಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು. ಎಂಜಿನಿಯರಿಂಗ್ ಓದಿದ್ದರೂ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಆಪ್ಷನಲ್ ವಿಷಯವಾಗಿ ತೆಗೆದುಕೊಂಡು ಉತ್ತೀರ್ಣನಾದೆ. ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾಗಲು ಈಗ ಬಹಳ ಅವಕಾಶಗಳಿವೆ. ಆನ್‌ಲೈನ್ ಕ್ಲಾಸ್‌ಗಳು ಸಹ ಲಭ್ಯವಿವೆ. ವಿದ್ಯಾರ್ಥಿಗಳು ಗುರಿಗೆ ತಕ್ಕ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು. ಯುಪಿಎಸ್‌ಸಿ ಪರೀಕ್ಷೆಯಲ್ಲಿನ ಪ್ರಶ್ನೆಗಳನ್ನು ಉತ್ತರಿಸಲು ಜೀವನಾನುಭವವೂ ಅಗತ್ಯವಾಗಿದೆ. ಯುಪಿಎಸ್‌ಇ ಪರೀಕ್ಷೆಯಲ್ಲಿ ನಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಂಡು, ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿ ಅಭ್ಯಾಸಿಸಿದರೆ, ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಕೆಜಿ ಕಂಪನಿಯ ಮಾಲೀಕ ಬಿ.ನಾಗನಗೌಡ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಭ್ಯಾಸದಿಂದ ಮುಂದೆ ಬರಲು ಸಾಧ್ಯ. ಸಾಮಾಜಿಕ ಜಾಲತಾಣಗಳು ಯುವಜನರ ಮನಸ್ಸುಗಳನ್ನು ಹದಗೆಡಿಸುತ್ತಿವೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿಯವರು ಆಶೀರ್ವಚನ ನೀಡಿದರು. ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಚಿತ್ರಿಕಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರತಿಭಾ ಪುರಸ್ಕಾರ:

ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.೮೫ಕ್ಕೂ ಹೆಚ್ಚು ಅಂಕ ಪಡೆದ ೩೨ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ ೮೦ಕ್ಕೂ ಹೆಚ್ಚು ಅಂಕಗಳಿಸಿದ ೬೦ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಪಿ.ರವಿಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ವೀರೇಶ್ ಕಾರ್ಯಕ್ರಮ ನಿರೂಪಿಸಿದರೆ, ಯು.ಕಿನ್ನೂರೇಶ್ವರ ವಂದಿಸಿದರು. ಟಿ.ವೆಂಕಟೇಶ್, ಕೆ.ಉಮೇಶ್ ಸಂಗೀತ ಸೇವೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಎಚ್.ಷಡಾಕ್ಷರಯ್ಯ, ವೀರಶೈವ ಲಿಂಗಾಯತ ಸಂಘದ ಖಜಾಂಚಿ ಕೆ.ಶಿವಪ್ಪ, ಮುಖಂಡರಾದ ಬಪ್ಪಕಾನ್ ಕುಮಾರಸ್ವಾಮಿ, ಬಿ.ಕೆ. ಬಸವರಾಜ, ಕೆ.ಎಸ್. ಚನ್ನಬಸಪ್ಪ, ಮೇಲುಸೀಮೆ ಶಂಕ್ರಪ್ಪ, ಬಿ.ಜಿ. ಸಿದ್ದೇಶ್, ಎಸ್.ಟಿ.ಡಿ ರುದ್ರಗೌಡ, ಕೆ. ಯರಿಸ್ವಾಮಿ, ಸುರೇಶ್‌ಗೌಡ, ಎಸ್.ವಿ. ಹಿರೇಮಠ್, ಬಿ.ಎಂ.ಉಜ್ಜಿನಯ್ಯ, ಜಿ.ಟಿ. ಪಂಪಾಪತಿ, ಜೆ.ಎಂ. ಶಿವಪ್ರಸಾದ್, ಗುಡೆಕೋಟೆ ನಾಗರಾಜ, ಭುವನೇಶ್ ಮೇಟಿ, ಚಿನ್ನಾಪುರಗೌಡ, ಡಾ. ತಿಪ್ಪೇರುದ್ರ, ಹೆಚ್.ಎಂ. ಮಂಜುನಾಥ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.