ಸಾರಾಂಶ
ಉಲುಕ್ ಉಪ್ಪಿನಂಗಡಿ
ಉಪ್ಪಿನಂಗಡಿ : ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳು ಸಂಗಮಿಸುವ ಉಪ್ಪಿನಂಗಡಿ ಧಾರ್ಮಿಕ ದೃಷ್ಟಿ ಕೋನದಲ್ಲಿ ದಕ್ಷಿಣಕಾಶಿ ಎಂದೇ ಹೆಗ್ಗಳಿಕೆ ಪಡೆದಿದ್ದರೆ, ವ್ಯವಸ್ಥೆಯ ಲೋಪದಿಂದಾಗಿ ನದಿ ಒಡಲು ತ್ಯಾಜ್ಯದಿಂದಲೇ ತುಂಬುತ್ತಿದೆ.
ವಸತಿ ಸಂಕೀರ್ಣಗಳಿಂದ ಹೊರ ಬರುವ ಶೌಚಾಲಯ ಸಹಿತ ನೀರನ್ನು ನದಿಗೆ ಬಿಡುವುದು, ತ್ಯಾಜ್ಯಗಳನ್ನೂ ನದಿಗೆ ಎಸೆಯುವ ಮೂಲಕ ಜೀವಜಲವನ್ನು ಮಲಿನಗೊಳಿಸುವ ಕಾರ್ಯ ನಿರಂತರ ನಡೆಯುತ್ತಿದೆ.
ಘನ ತ್ಯಾಜ್ಯ ನಿರ್ವಹಣೆಯ ಕಾರ್ಯವನ್ನು ಸ್ಥಳೀಯ ಪಂಚಾಯಿತಿ ಆಡಳಿತ ವ್ಯವಸ್ಥಿತವಾಗಿ ನಡೆಸುತ್ತಿದ್ದರೂ, ನಾಗರಿಕರು ಅನಾಗರಿಕ ವರ್ತನೆ ತೋರುತ್ತಿದ್ದಾರೆ. ಮನೆಯಿಂದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಕೆಲವರು ಎಸೆಯುವುದು ನದಿಯ ಒಡಲಿಗೆ.
ಈ ರೀತಿ ತ್ಯಾಜ್ಯವನ್ನು ಎಸೆಯಲು ಅವರು ಬಳಸಲು ಸ್ಥಳವೆಂದರೆ ಸೇತುವೆಗಳು, ಕೂಟೇಲು ಬಳಿ ಹಾಗೂ ಕುಮಾರಧಾರ ನದಿಯ ಸೇತುವೆ, ನೇತ್ರಾವತಿ ನದಿಯ ಸೇತುವೆಯನ್ನೇ ತಮ್ಮ ತ್ಯಾಜ್ಯ ಎಸೆಯುವ ತಾಣವಾಗಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕೆಲ ಸಮಯದ ಹಿಂದೆ ನದಿಗೆ ತ್ಯಾಜ್ಯ ಎಸೆಯುವ ಮಂದಿಯನ್ನು ಮದ್ಯ ರಾತ್ರಿಯ ವೇಳೆ, ನಸುಕಿನ ವೇಳೆಯ ಕಾರ್ಯಾಚರಣೆಯ ಮೂಲಕ ಹಿಡಿದು ದಂಡಿಸಿದ್ದರೂ, ಜನರ ಮನಸ್ಥಿತಿ ಬದಲಾಗಿಲ್ಲ.
ನದಿ ಸೇರುವ ದ್ರವ ತ್ಯಾಜ್ಯ: ಎರಡು ನದಿಗಳ ದಂಡೆಯಲ್ಲಿರುವ ಉಪ್ಪಿನಂಗಡಿ ಪೇಟೆಯಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ಪಂಚಾಯಿತಿ ಆಡಳಿತ ನಿರ್ದೇಶನ ನೀಡಿದೆ. ಅಂತರ್ಜಲ ವೃದ್ಧಿಯ ನಿಟ್ಟಿನಲ್ಲಿ ಇದು ಪರಿಣಾಮಕಾರಿಯಾದರೂ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿ ವಿಫಲತೆಯಾಗಿದೆ. ನದಿಯ ಜಲಮಟ್ಟ ವೃದ್ಧಿಯಾದಂತೆ ಇಂಗು ಗುಂಡಿಗಳಲ್ಲಿ ನೀರು ತುಂಬಿ ಸಮಸ್ಯೆಗಳೇ ಕಾಣಿಸುತ್ತಿದೆ. ಆದಾಗ್ಯೂ ಇಲ್ಲಿನ ಹೆಚ್ಚಿನ ಹೊಟೇಲ್, ವಸತಿ ಸಂಕೀರ್ಣ, ವಾಣಿಜ್ಯ ಮಳಿಗೆಗಳಿಗೆ ಇಂಗು ಗುಂಡಿಗಳೇ ಇಲ್ಲವಾಗಿದ್ದು. ಅದರ ದ್ರವ ತ್ಯಾಜ್ಯವೆಲ್ಲಾ ಚರಂಡಿ ಮೂಲಕ ಹರಿದು ನದಿಯನ್ನು ಸೇರುತ್ತಿರುವುದು ವಾಸ್ತವ ವಿಚಾರವಾಗಿದೆ. ದ್ರವ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸುವುದೇ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗವಾಗಿದೆ.
ಸ್ವಚ್ಛ ಗ್ರಾಮ ಪ್ರಶಸ್ತಿಗೆ ಶೋಭೆಯೇ?: ಇಲ್ಲಿನ ನೇತ್ರಾವತಿ ನದಿಯ ಸಮೀಪವಿರುವ ಸಮುದಾಯ ಆರೋಗ್ಯ ಕೇಂದ್ರದ ಆವರಣದ ಹೊರಗೆ ಪ್ಲಾಸ್ಟಿಕ್, ತ್ಯಾಜ್ಯಗಳ ರಾಶಿಯೇ ಇದ್ದು, ಸಾಂಕ್ರಾಮಿಕ ರೋಗ ಉತ್ಪಾದನೆಗೆ ಅವಕಾಶ ನೀಡುತ್ತಿದೆ. ಆದರೂ ಇದನ್ನು ತೆಗೆಸುವ ಗೋಜಿಗೆ ಉಪ್ಪಿನಂಗಡಿ ಗ್ರಾ.ಪಂ. ಮುಂದಾಗಿಲ್ಲ. ಇನ್ನು ಗ್ರಾ.ಪಂ.ನ ತ್ಯಾಜ್ಯ ಘಟಕದ ಬಳಿ ನದಿ ದಂಡೆಯ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದ್ದು, ನದಿಯು ಮೈದುಂಬಿ ಹರಿದಾಗ ಇವುಗಳು ನದಿ ನೀರನ್ನು ಸೇರಿಕೊಳ್ಳುವ ಸಂಭವವಿದೆ. ಉಪ್ಪಿನಂಗಡಿ ಸ್ವಚ್ಛ ಗ್ರಾಮ ಪ್ರಶಸ್ತಿ ಪುರಸ್ಕೃತ ಗ್ರಾಮವಾಗಿದ್ದು, ಇಂತಹ ದೃಶ್ಯಗಳು ಪ್ರಶಸ್ತಿಯನ್ನು ಅಣಕಿಸುವಂತಿದೆ.ನದಿಗೆ ಮಲಿನ ನೀರು ಬಿಡುವ ಹೊಟೇಲ್, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳ ಮಾಲಕರ ಸಭೆ ಕರೆದು ಈಗಾಗಲೇ ಚರ್ಚಿಸಲಾಗಿದ್ದು, ಎಸ್‌ಡಿಪಿ ನಿರ್ಮಿಸುವ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ಇದರ ಕಾಮಗಾರಿ ನಡೆಸಲಾಗುವುದು. ಪಂಚಾಯಿತಿ ಆಡಳಿತದ ಪರಿಶ್ರಮದ ಹೊರತಾಗಿಯೂ ಜನರಲ್ಲಿ ನಾಗರಿಕ ಪ್ರಜ್ಞೆ ಜಾಗೃತವಾಗದಿದ್ದರೆ ಇಂತಹ ಸಮಸ್ಯೆ ಸಹಜವಾಗಿ ಕಾಡುತ್ತಿರುತ್ತದೆ
- ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ
ನದಿಯ ಪಾವಿತ್ರ್ಯತೆ ಕಾಪಾಡಿಕೊಳ್ಳುವಲ್ಲಿ ನಾಗರಿಕ ಸಮಾಜದ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಹಿಂದೆ ನದಿಯಿಂದ ನೇರವಾಗಿ ಕುಡಿಯಲು ನೀರನ್ನು ಬಳಸುತ್ತಿದ್ದರೆ, ಇಂದು ನದಿಯ ನೀರು ಮಲಿನಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಸ್ವಚ್ಛ ಪರಿಸರದ ಬಗ್ಗೆ ನಮ್ಮ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಬೇಕು
- ಶರತ್ ಕೋಟೆ, ಉಪ್ಪಿನಂಗಡಿ ಕಾಳಿಕಾಂಬಾ ಭಜನಾ ಮಂಡಳಿ ಅಧ್ಯಕ್ಷ