ಕಾವೇರಿ ನದಿ ದಡದಲ್ಲಿ ಕಸ ಸುರಿದ ಗ್ರಾ.ಪಂ.: ಗ್ರಾಮಸ್ಥರ ಆಕ್ರೋಶ

| Published : Oct 17 2023, 12:45 AM IST

ಕಾವೇರಿ ನದಿ ದಡದಲ್ಲಿ ಕಸ ಸುರಿದ ಗ್ರಾ.ಪಂ.: ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನದಿ ದಡದಲ್ಲಿ ತ್ಯಾಜ ಸುರಿದ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ ಕಾವೇರಿ ನದಿ ದಡದಲ್ಲಿ ತ್ಯಾಜ ಸುರಿದ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಲ್ಯಹುದಿಕೇರಿ ಗ್ರಾಮವನ್ನು ಶುಚಿಗೊಳಿಸಿದ ಕಸವನ್ನು ತಂದು ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾವೇರಿ ನದಿ ದಡದಲ್ಲಿ ಭಾನುವಾರ ಸುರಿದಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತ್ಯಾಜದಿಂದ ಕಾವೇರಿ ನದಿ ನೀರು ಕಲುಷಿತಗೊಳ್ಳುತದೆ ಮತ್ತು ಸಮೀಪದಲ್ಲೇ ಕುಡಿಯುವ ನೀರಿನ ಘಟಕ ಕೂಡ ಇದೆ. ಕಸ ಪೂರ್ತಿ ಪ್ಯಾಂಪರ್ಸ್, ಪ್ಲಾಸ್ಟಿಕ್ ಮುಂತಾದ ಪದಾರ್ಥಗಳಿದ್ದು, ಪರಿಸರ ಗಬ್ಬೆದ್ದು ನಾರುತಿದೆ. ಗ್ರಾಮದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಮಂದಿ ಡೆಂಘೀ ರೋಗಕ್ಕೆ ತುತ್ತಾಗಿದ್ದಾರೆ. ಗ್ರಾಮ ಪಂಚಾಯಿತಿ ನಿರ್ಧಾರದಿಂದ ಮತ್ತೆ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಸವನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ವಿರುದ್ಧ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಿ ಸಂಗ್ರಹಿಸಿ ದೂರು ನೀಡಲಾಗುತ್ತದೆ. ಹಾಗೆಯೇ ಕಸವನ್ನು ಪಂಚಾಯಿತಿ ಮುಂದೆ ತಂದು ಸುರಿಯುವುದಾಗಿ ಗ್ರಾಮಸ್ಥ ಆಜೇಶ್ ಹೇಳಿದ್ದಾರೆ. ಈ‌ ಸಂದರ್ಭ ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ನಿವಾಸಿಗಳು ತರಾಟಗೆ ತೆಗೆದುಕೊಂಡರು. ನಂತರ ಅಧ್ಯಕ್ಷರು ಕಸವನ್ನು ಅಲ್ಲಿಂದ ತೆರವುಗೊಳಿಸುವುದಾಗಿ ತಿಳಿಸಿದರು. ಗ್ರಾಮಸ್ಥರಾದ ಅಜೇಶ್, ಅನಿಶ್, ಫ್ರಾನ್ಸಿಸ್ ನೊರೋನ್ಹ, ಪಂಚಾಯಿತಿ ಸದಸ್ಯ ಮುಸ್ತಫಾ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು‌.