ಎಲ್ಲೆಂದರಲ್ಲಿ ಕಸದ ತ್ಯಾಜ್ಯ, ದನಗಳಿಗೆ ಕಂಟಕವಾದ ಪ್ಲಾಸ್ಟಿಕ್‌

| Published : Feb 02 2025, 11:45 PM IST

ಎಲ್ಲೆಂದರಲ್ಲಿ ಕಸದ ತ್ಯಾಜ್ಯ, ದನಗಳಿಗೆ ಕಂಟಕವಾದ ಪ್ಲಾಸ್ಟಿಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಬಹುತೇಕ ಕಡೆ ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ಜಾನುವಾರುಗಳ ಹೊಟ್ಟೆ ಸೇರುವ ಮೂಲಕ ಅವುಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಕುಷ್ಟಗಿ ಪಟ್ಟಣದಲ್ಲಿ ಸಮರ್ಪಕವಾಗಿ ನಡೆಯದ ಕಸ ವಿಲೇವಾರಿ

ಪ್ಲಾಸ್ಟಿಕ್ ಬಳಕೆಗೂ ಇಲ್ಲ ನಿಯಂತ್ರಣ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ಬಹುತೇಕ ಕಡೆ ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ಜಾನುವಾರುಗಳ ಹೊಟ್ಟೆ ಸೇರುವ ಮೂಲಕ ಅವುಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸಾರ್ವಜನಿಕರೂ ಮನೆಬಾಗಿಲಿಗೆ ಬರುವ ಕಸ ವಿಲೇವಾರಿಯ ವಾಹನಗಳಿಗೆ ಕಸ ಹಾಕದೆ ಮರ, ವಿದ್ಯುತ್ ಕಂಬದ ಬುಡ, ಚರಂಡಿ ಮುಂತಾದೆಡೆ ಬಿಸಾಡುತ್ತಿದ್ದಾರೆ. ಅಲ್ಲದೆ ಕೊಳೆತ ತರಕಾರಿ, ಮಿಕ್ಕುಳಿದ ಅಡುಗೆ ಮುಂತಾದ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ ರಸ್ತೆ ಬದಿ ಎಸೆಯುತ್ತಿದ್ದು, ಇದರ ಪರಿಣಾಮವಾಗಿ ಅವುಗಳನ್ನು ತಿನ್ನಲು ಜಾನುವಾರು ಮತ್ತು ನಾಯಿ, ಹಂದಿಗಳು ಕಸದ ರಾಶಿ ಮೇಲೆ ಮುಗಿಬೀಳುತ್ತವೆ.

ಕಸದ ರಾಶಿಯಲ್ಲಿನ ತಿನಿಸುಗಳ ಜತೆಯಲ್ಲಿ ದನಗಳು ಪ್ಲಾಸ್ಟಿಕ್, ಕಾಗದದಂತಹ ವಸ್ತುಗಳನ್ನೂ ತಿನ್ನುತ್ತಿವೆ. ಇದರಿಂದ ಅವು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಪುರಸಭೆಯವರು ಮನವಿ ಮಾಡಿದ್ದರೂ, ಕೆಲ ಜನರು ಅದನ್ನು ಪಾಲಿಸುತ್ತಿಲ್ಲ. ಇದರಿಂದ ಅನೈರ್ಮಲ್ಯ ಹೆಚ್ಚಾಗಿ ಕಸದ ರಾಶಿಗಳು ನಾಯಿ, ಬಿಡಾಡಿ ದನಗಳು, ಹಂದಿಗಳ ತಾಣವಾಗುತ್ತಿವೆ.

ಪ್ಲಾಸ್ಟಿಕ್ ನಿಯಂತ್ರಣ ಇಲ್ಲ: ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟುವ ಪ್ರಯತ್ನಗಳು ಕೆಲವೆಡೆ ನಡೆಯುತ್ತಿವೆ. ಆದರೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಅವುಗಳ ಮಾರಾಟ ಹಾಗೂ ಬಳಕೆ ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಅತಿ ಹೆಚ್ಚು ಪ್ಲಾಸ್ಟಿಕ್‌ ಮಾರಾಟ ನಡೆಯುತ್ತಿದ್ದು, ಇಂತಹವುಗಳನ್ನು ಗುರುತಿಸಿ ದಾಳಿ ಮಾಡುವ ಮೂಲಕ ನಿಯಂತ್ರಣಕ್ಕೆ ತರುವ ಕೆಲಸವನ್ನು ಪುರಸಭೆಯ ಅಧಿಕಾರಿಗಳು ಮಾಡಬೇಕಿದೆ.

ಪ್ಲಾಸ್ಟಿಕ್ ಬದಲು ಬಟ್ಟೆ ಅಥವಾ ಪೇಪರ್ ಚೀಲಗಳನ್ನು ಬಳಸುವಂತೆ ನಡೆಸಿದ ಜಾಗೃತಿ ಕಾರ್ಯಕ್ರಮಗಳಿಂದ ಪ್ರಯೋಜನವಾಗಿಲ್ಲ. ತರಕಾರಿ ಮತ್ತಿತರ ಉತ್ಪನ್ನಗಳನ್ನು ಕೊಳ್ಳಲು ಬರುವ ಜನರು ಪ್ಲಾಸ್ಟಿಕ್ ಕವರ್ ಕೇಳುತ್ತಾರೆ ಎನ್ನುತ್ತಾರೆ ಕೆಲ ವ್ಯಾಪಾರಿಗಳು.

ಬಿಡಾಡಿ ದನಗಳಿಗೆ ಕಡಿವಾಣವಿಲ್ಲ:

ಬಿಡಾಡಿ ದನಗಳು ಪಟ್ಟಣದ ರಸ್ತೆಯ ಮಧ್ಯದಲ್ಲಿಯೇ ಮಲಗಿಕೊಳ್ಳುವುದು, ತಿರುಗಾಡುವುದು ಮಾಡುತ್ತಿದ್ದು, ಇದರಿಂದ ರಸ್ತೆಯಲ್ಲಿ ಸಂಚಾರ ಮಾಡುವಂತಹ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಪಟ್ಟಣದಲ್ಲಿ ದನಗಳ ಹಾವಳಿ ಮಿತಿಮೀರಿದ್ದು, ಪುರಸಭೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

ನಿಯಮಿತವಾಗಿ ಕಸ ವಿಲೇವಾರಿ ವಾಹನವೂ ಬರುತ್ತಿಲ್ಲ. ಹಸಿ ತ್ಯಾಜ್ಯಗಳನ್ನು ಮನೆಯಲ್ಲಿ ಎರಡು ಮೂರು ದಿನ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನು ಜನವಸತಿಯಿಂದ ದೂರವಿರುವ ಸ್ಥಳದಲ್ಲಿ ಎಸೆಯುವುದು ಅನಿವಾರ್ಯ ಎನ್ನುತ್ತಾರೆ ನಾಗರಿಕರು.ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್‌ ದನಗಳ ಹೊಟ್ಟೆ ಸೇರುತ್ತಿದ್ದು, ಪ್ಲಾಸ್ಟಿಕ್ ಜೀರ್ಣವಾಗುವುದಿಲ್ಲ. ಅದು ರಾಸಾಯನಿಕ ಬಿಡುಗಡೆ ಮಾಡುತ್ತದೆ. ಹಾಲು ಮತ್ತು ಮಾಂಸದ ಮೂಲಕ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಪ್ಲಾಸ್ಟಿಕ್ ತೆಗೆದುಹಾಕಿದ ಉದಾಹರಣೆಗಳಿವೆ ಎನ್ನುತ್ತಾರೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಆನಂದ ದೇವರನಾವದಗಿ.