ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಮಾಲೂರು ಪಟ್ಟಣದಲ್ಲಿ ಕಸ ವಿಲೇವಾರಿಯಾಗದೆ ರಸ್ತೆ ರಸ್ತೆಯಲ್ಲಿ ಕಾಣ ಸಿಗುವ ಕಸದ ರಾಶಿಗಳ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭಾ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಸ್ವಚ್ಛತೆ ಕಡೆಗಣಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪ್ರತಿನಿತ್ಯ ಹತ್ತು ಟನ್‌ಗಿಂತ ಹೆಚ್ಚು ಕಸ ಪಟ್ಟಣದಲ್ಲಿ ಸಂಗ್ರಹವಾಗುತ್ತಿದ್ದು ,ಅವುಗಳನ್ನು ವಿಲೇವಾರಿ ಮಾಡಲು ಜಾಗ ಇಲ್ಲದ ಕಾರಣ ಇಲ್ಲಿನ ಪುರಸಭೆಯು ನಿತ್ಯ ಕಸ ವಿಲೇವಾರಿ ಮಾಡದೆ ಸುಮ್ಮನಾಗಿತ್ತು. ಈ ಬಗ್ಗೆ ಹಲವು ಬಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಲೋಕಯುಕ್ತರಿಗೆ ದೂರು ನೀಡಿದ್ದರು.
ನಗರಸಭೆಗೆ ದಿಢೀರ್ ಭೇಟಿಈ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಯಶವಂತ್ ನೇತೃತ್ವದಲ್ಲಿ ಪಟ್ಟಣದ ಪುರಸಭೆಗೆ ದಿಢೀರ್ ಭೇಟಿ ನೀಡಿ ಪಟ್ಟಣದ ಸ್ವಚ್ಛತೆಗೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದರ ಸಂಬಂಧ ದಾಖಲೆಗಳನ್ನು ಪರಿಶಿಲಿಸಿ ಮಾಹಿತಿ ಪಡೆದ ಲೋಕಾ ಇನ್ಸ್‌ಪೆಕ್ಟ್, ಪಟ್ಟಣದ ಹಲವು ರಸ್ತೆಗಳು ಮತ್ತು ಬಡಾವಣೆಗಳಲ್ಲಿ ಪುರಸಭಾ ಆರೋಗ್ಯಾಧಿಕಾರಿಗಳೋಂದಿಗೆ ಭೇಟಿ ನೀಡಿ ವೀಕ್ಷಿಸಿದರು.
ಅಧಿಕಾರಿಗಳಿಗೆ ತರಾಟೆಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳನ್ನು ಪ್ರತ್ಯಕ್ಷವಾಗಿ ನೋಡಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಯಶವಂತ್ ಪುರಸಭಾ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಭೇಟಿ ವೇಳೆ ಕಸ ವಿಲೇವಾರಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಜತೆಯಲ್ಲಿ ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಚೇರಿಯ ನಾಗಭೂಷಣ್, ವಾಸುದೇವ್ ಪುರಸಭಾ ಆರೋಗ್ಯಾಧಿಕಾರಿ ಶಾಲಿನಿ, ಶ್ರೀನಿವಾಸ್, ಮಂಜುನಾಥ್ ಹಾಜರಿದ್ದರು.