ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗರ್ಭಾ ನೃತ್ಯಕ್ಕೆ ಬಳಸುವ ಚನಿಯಾಚೋಲಿ ವಸ್ತ್ರಗಳ ಪ್ರದರ್ಶನ, ರೇಷ್ಮೆ, ಚರ್ಮದ ಉತ್ಪನ್ನಗಳು, ಬೆಡ್ಶೀಟ್, ಬೆಡ್ ಕವರ್ ಗಳು, ಚಳಿಯ ಸಂದರ್ಭದಲ್ಲಿ ನೆರವಾಗುವ ಮೇಲು ಹೊದಿಕೆಗಳು, ಗುಜರಾತ್ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಪ್ಯಾಚ್ ವರ್ಕ್ಆಲಂಕಾರಿಕ ವಸ್ತ್ರಗಳು.ಇವೆಲ್ಲವನ್ನು ಕಣ್ತುಂಬಿಸಿಕೊಳ್ಳಲು ಗುಜರಾತ್, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಿಗೆ ತೆರಳಬೇಕಿಲ್ಲ. ಮೈಸೂರಿನ ಹೊರವಲಯದಲ್ಲಿರುವ ಹೆಬ್ಬಾಳ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ, ಹೊಸ ಆಕರ್ಷಣೆಗಳೊಂದಿಗೆ ಮೆರುಗು ಪಡೆದಿರುವ ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ನಡೆಯುತ್ತಿರುವ ಗರ್ವಿ ಗುರ್ಜರಿ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಕಂಡು ಖರೀದಿಸಬಹುದು.
ಇಂಥ ವಿಶಿಷ್ಟ ಪ್ರದರ್ಶನ, ಮಾರಾಟ ಮೇಳವು ಸೆ. 29ರವರೆಗೆ ಗುಜರಾತ್ ರಾಜ್ಯ ಕೈಮಗ್ಗ ಮತ್ತು ಕರಕುಶಲ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಗರ್ವಿ ಗುರ್ಜರಿ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮೈಸೂರಿಗರ ನಿರೀಕ್ಷೆಯಲ್ಲಿವೆ. ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ಕಲಾಕುಸುಮಗಳನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಿದ್ದಾರೆ.ಗರ್ವಿ ಗುರ್ಜರಿ ಹಸ್ತ ಕಲಾ ಮೇಳ:
ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಸೆ. 29ರವರೆಗೆ ಪ್ರಥಮ ಬಾರಿಗೆ ಗರ್ವಿ ಗುರ್ಜರಿ ಹಸ್ತ ಕಲಾ ಮೇಳ ಆಯೋಜನೆಗೊಂಡಿದೆ.ಗುಜರಾತ್ ರಾಜ್ಯದ ಅಂಗ ಸಂಸ್ಥೆಯಾಗಿರುವ ‘ಗುಜರಾತ್ ರಾಜ್ಯ ಕೈಮಗ್ಗ ಮತ್ತು ಕರಕುಶಲ ಅಭಿವೃದ್ಧಿ ನಿಗಮ’ದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪ್ರಾಂತೀಯ ಮೇಳವಾದ ಗರ್ವಿ ಗುರ್ಜರಿ ಹಸ್ತ ಕಲಾ ಮೇಳ 2024 ಹಲವು ವಿಶೇಷತೆಗಳನ್ನು ಹೊಂದಿದೆ.
ಮೇಳದ ವಿಶೇಷತೆಗಳು:ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ ಸುಮಾರು 30 ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ ಗಳು, ಟವಲ್ ಗಳು, ಕುಶನ್ ಕವರ್ ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದಾರೆ.ತಯಾರಕರಿಂದ ನೇರವಾಗಿ ಗ್ರಾಹಕರಿಗೆ ಅದೂ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಆಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ, ಕಡಿಮೆ ಬೆಲೆಗೆ ಸಿಗುತ್ತಿವೆ.
ಈ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಮೈಸೂರು ನಗರ ಬಸ್ ನಿಲ್ದಾಣದಿಂದ ಪ್ರತಿ ದಿನ ರೂಟ್ ನಂ. 117/1ರ ಬಸ್ ಗಳ ಅರ್ಬನ್ ಹಾತ್ ಗೆ ಸಂಚರಿಸುತ್ತವೆ. ಮೇಳವು ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 9ರವರೆಗೆ ನಡೆಯುತ್ತಿದೆ.