ಸಾರಾಂಶ
- ಗಣೇಶ- ಈದ್ ಮೀಲಾದ್ ಹಿನ್ನಲೆಯಲ್ಲಿ 24 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ । ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿಯ ನಾಡಿನಲ್ಲಿ ಗೌರಿ - ಗಣೇಶ ಹಬ್ಬಆಚರಿಸಲು ನಡೆಯುತ್ತಿರುವ ಭರದ ಸಿದ್ಧತೆಗಳೊಂದಿಗೆ ಗೌರಿ ಗಣೇಶ ಮೂರ್ತಿ ತಳಿರು, ತೋರಣ ಸೇರಿದಂತೆ ಪೂಜಾ ಸಾಮಗ್ರಿ ಖರೀದಿಗೆ ಹಳ್ಳಿಯ ಜನರು ಪೇಟೆಗಳತ್ತಾ ಮಂಗಳವಾರ ತೆರಳುತ್ತಿದ್ದರು. ಹಲವೆಡೆ ಒಂದು ದಿನದ ಮೊದಲೇ ಗಣೇಶ ಮೂರ್ತಿ ಖರೀದಿಸಿದ್ದರೆ, ಇನ್ನೂ ಕೆಲವೆಡೆ ಹಬ್ಬದಂದೆ ಖರೀದಿಸಲಾಗುತ್ತದೆ. ಒಟ್ಟಾರೆ ಹಬ್ಬದ ಸಂಭ್ರಮ ಎಲ್ಲಡೆ ಮನಮಾಡಿತ್ತು.
ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಮಾರಾಟಕ್ಕಾಗಿ ಗೌರಿ - ಗಣೇಶ ಮೂರ್ತಿಗಳನ್ನು ಇರಿಸಲಾಗಿತ್ತು. ಚಿಕ್ಕ ಮಕ್ಕಳು ಅವುಗಳನ್ನು ನೋಡಿ ಖುಷಿ ಪಡುತ್ತಿದ್ದರೆ ಯುವಕರು ಖರೀದಿಯಲ್ಲಿ ಬಿಜಿಯಾಗಿದ್ದರು. ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಮಂಗಳವಾರ ಗೌರಿ ಇರಿಸಿ ಪೂಜೆ ಮಾಡಲಾಯಿತು. ಮಹಿಳೆಯರು ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಬುಧವಾರ ಎಲ್ಲೆಡೆ ಗಣೇಶ ಮೂರ್ತಿ ತೆಗೆದುಕೊಂಡು ಹೋಗುವಾಗ ಜೈ ಗಣೇಶ ಘೋಷಣೆಗಳು ಮೊಳಗಲಿವೆ. ಮುಂಜಾಗ್ರತಾ ಕ್ರಮ:ಜಿಲ್ಲಾದ್ಯಂತ ಆ. 27 ಹಾಗೂ 28 ರಂದು ಹಿಂದೂ ಸಮುದಾಯದವರು ಗೌರಿ-ಗಣೇಶ ಹಬ್ಬ ಹಾಗೂ ಸೆ.5 ರಂದು ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಆಚರಣೆ ಮಾಡಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಕ್ಷ್ಮ ಪ್ರದೇಶಗಳಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಧಿಸೂಚನೆ ಹೊರಡಿಸಿದ್ದಾರೆ.
ಆ. 27 ರಿಂದ ಸೆ. 28 ರವರೆಗೆ ಕಾರ್ಯ ನಿರ್ವಹಿಸಲು 24 ಮಂದಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, 24 ಮಂದಿಗಳ ಪೈಕಿ 11 ಮಂದಿ ರಿಸರ್ವ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.ಜಿಲ್ಲೆಯ ಪ್ರಮುಖ ನಗರ, ಪಟ್ಟಣ ವ್ಯಾಪ್ತಿಯ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿ ಅಧಿಸೂಚಿಸಿದ್ದು, ಈ ಪ್ರದೇಶ ಗಳಲ್ಲಿ ಪಟಾಕಿ ಹಚ್ಚುವುದು, ದಹಿಸಬಹುದಾದ (ಸುಡುವ) ಯಾವುದೇ ವಸ್ತುಗಳ ಬಳಕೆ, ವಿವಾದಿತ ಬ್ಯಾನರ್, ಬಂಟಿಂಗ್ಸ್‌ಗಳನ್ನು ಕಟ್ಟುವುದು, ವಿವಾದಾತ್ಮಕ ಘೋಷಣೆ ಕೂಗುವುದು, ಪುಡಿ ಬಣ್ಣ ಚೆಲ್ಲುವುದು ಮತ್ತು ಎರಚುವುದು, ಕುಣಿಯುವುದು, ವಿನಾಕಾರಣ ಬಾವುಟ ಹಿಡಿದುಕೊಂಡು ಓಡಾಡುವುದು, ಮೆರವಣಿಗೆ ಸಂದರ್ಭದಲ್ಲಿ ಲೇಸರ್ ಲೈಟ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿರುವ ವರದಿ ಅವಲೋಕಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
--- ಬಾಕ್ಸ್ ---ಸೂಕ್ಷ್ಮ ಪ್ರದೇಶಗಳುಚಿಕ್ಕಮಗಳೂರು ನಗರದ ಷರೀಫ್ ಗಲ್ಲಿ ಕ್ರಾಸ್, ಎಂ.ಜಿ.ರಸ್ತೆ, ಅಂಡೆ ಛತ್ರ ಕ್ರಾಸ್, ಎಂ.ಜಿ.ರಸ್ತೆ, ಛೋಟಾ ಮಕಾನ್ ಕ್ರಾಸ್, ಎಂ.ಜಿ.ರಸ್ತೆ, ಬಸವನಹಳ್ಳಿ, ವಿಜಯಪುರ ಈದ್ಗಾ, ವಿಜಯಪುರ, ಬಡಾ ಮಕಾನ್ ಕ್ರಾಸ್, ಬಸವನಹಳ್ಳಿ ಮುಖ್ಯ ರಸ್ತೆ, ಉಪ್ಪಳ್ಳಿ ಹಾಗೂ ಉಪ್ಪಳ್ಳಿ ಸರ್ಕಲ್, ಪಾಂಚ್ ಪೀರ್ ದರ್ಗಾ, ಉಪ್ಪಳ್ಳಿ, ಕೆಇಬಿ ಈದ್ಗಾ, ಬದ್ರಿಯಾ ಸರ್ಕಲ್, ಓಂಕಾರೇಶ್ವರ ದೇವಸ್ಥಾನ, ಕಾಮಧೇನು ಗಣಪತಿ ದೇವಸ್ಥಾನ. ಆಲ್ದೂರಿನ ಕೆಂಪೇಗೌಡ ಸರ್ಕಲ್, ಅಂಬೇಡ್ಕರ್ ಸರ್ಕಲ್, ಜಾಮಿಯಾ ಮಸೀದಿ ಮುಂಭಾಗ, ದಿಲ್ಲಿ ಸರ್ಕಲ್, ಹಾಂದಿ ಗ್ರಾಮ ಹಾಗೂ ಕಿಲಾರಿಯ ಮಸೀದಿ, ಬಾಳೆಹೊನ್ನೂರಿನ ಜಾಮಿಯಾ ಮಸೀದಿ, ಮೈನ್ ರೋಡ್, ಆಲ್ ಬದ್ರಿಯಾ ಮಸೀದಿ, ಕೊಪ್ಪ ರಸ್ತೆ, ಜಯಪುರ, ವೆಲ್‌ಕಮ್ ಗೇಟ್ ಹತ್ತಿರ, ಶೃಂಗೇರಿ, ಟಿ.ಬಿ.ಸರ್ಕಲ್ ಮತ್ತು ಮಸೀದಿ, ನರಸಿಂಹರಾಜಪುರ, ಜಾಮಿಯಾ ಮಸೀದಿ, ಕೋಡಿಕ್ಯಾಂಪ್, ನೂರಾನಿ ಮಸೀದಿ, ಗಾಳಿಹಳ್ಳಿ ಕ್ರಾಸ್, ಕೆ.ಇ.ಬಿ. ಸರ್ಕಲ್‌ನ ಬಜಾರ್ ಮಸೀದಿ, ತರೀಕೆರೆ ಪಟ್ಟಣ, ಜಾಮಿಯಾ ಮಸೀದಿ, ಬರಗೇನಹಳ್ಳಿ ರಸ್ತೆ, ರಂಗೇನಹಳ್ಳಿ, ಎಂ.ಎಸ್.ಆರ್.ಸರ್ಕಲ್, ಕಡೂರು ಪಟ್ಟಣ, ಸುಭಾಷ್ ಸರ್ಕಲ್, ಕೆ.ಎಂ.ರೋಡ್, ಈ ಪ್ರದೇಶಗಳನ್ನು ನಿರ್ಬಂಧಿತ ಸ್ಥಳಗಳೆಂದು ಗುರುತಿಸಲಾಗಿದೆ.ಕಾರ್ಯಕ್ರಮದ ಸಂಘಟಕರು, ಸಂಯೋಜಕರು ಹಾಗೂ ಸಾರ್ವಜನಿಕರು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಉಲ್ಲಂಘನೆ ಶಿಕ್ಷಾರ್ಹವಾಗಿರುತ್ತದೆ ಎಂದು ಅವರು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
- 26 ಕೆಸಿಕೆಎಂ 1ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿ ಮಾರಾಟಕ್ಕೆ ಇರಿಸಲಾಗಿರುವ ಗಣೇಶ ಮೂರ್ತಿ.