ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕು ವೀರಶೈವ ಜಂಗಮ ಪುರೋಹಿತ-ಅರ್ಚಕ ಸಂಘ [ರಿ] ದ ವತಿಯಿಂದ ಇದೇ 26 ಹಾಗೂ 27 ರಂದು ಪಟ್ಟಣದ ಮಂಗಳ ಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗೌರಿ ಶಂಕರ ಕಲ್ಯಾಣೋತ್ಸವ ಹಾಗೂ ಇಷ್ಠಲಿಂಗ ಮಹಾಪೂಜೆ ಅಪೇಕ್ಷಿತ ಭಕ್ತಾಧಿಗಳಿಗೆ ರುದ್ರಾಕ್ಷಿ ಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವೇ.ಪ್ರಭುಸ್ವಾಮಿ ಆರಾಧ್ಯಮಠ ತಿಳಿಸಿದರು.ಮಂಗಳವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ವೀರಶೈವ ಜಂಗಮ ಪುರೋಹಿತ-ಅರ್ಚಕ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದ ಮಂಗಳಭವನದಲ್ಲಿ ಇದೇ 26 ರ ಗುರುವಾರ ಸಂಜೆ ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ದಿವ್ಯ ಸಾನ್ನಿದ್ಯದಲ್ಲಿ ಗೌರಿಶಂಕರ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಗೋಧೂಳಿ ಲಗ್ನದಲ್ಲಿ ಶ್ರೀ ಗೌರಿಗೆ ಮಾಂಗಲ್ಯ ಧಾರಣೆ ನಡೆಯಲಿದೆ ಎಂದ ಅವರು ಕಲ್ಯಾಣ ಪ್ರಾಪ್ತಿ, ಸಂತಾನ ಪ್ರಾಪ್ತಿ, ಜಾತಕ ದೋಷವಿರುವವರು ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಧರ್ಮಸಭೆಯಲ್ಲಿ ಸಂಸದ ರಾಘವೇಂದ್ರ,ಶಾಸಕ ವಿಜಯೇಂದ್ರ,ಮಾಜಿ ಶಾಸಕ ಎಂ.ಪಿ ರೇಣುಕಾಸ್ವಾಮಿ, ತಹಸೀಲ್ದಾರ್ ಮಲ್ಲೇಶ್ ಪೂಜಾರ್, ಡಿವೈಎಸ್‌ಪಿ ಕೇಶವ, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್ ಪಾಲ್ಗೊಳ್ಳಲಿದ್ದು, ಸ್ಥಳೀಯ ಕಾಳೇನಹಳ್ಳಿ ಶಿವ ಯೋಗಾಶ್ರಮದ ಡಾ.ಸಿದ್ದಲಿಂಗ ಸ್ವಾಮಿಗಳು, ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರ ದೇಶೀಕೇಂದ್ರ ಸ್ವಾಮಿಗಳು, ದಿಂಡದಹಳ್ಳಿ ಹಿರೇಮಠದ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕಡೇನಂದಿಹಳ್ಳಿ ಶ್ರೀ ಮಠದ ಷ.ಬ್ರ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು, ಸಂಘದ ಗೌರವಾಧ್ಯಕ್ಷ ವೇ.ಪುಟ್ಟಯ್ಯ ಶಾಸ್ತ್ರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ಈ ಧಾರ್ಮಿಕ ಕಾರ್ಯದಲ್ಲಿ ಸರ್ವ ಭಕ್ತಾಧಿಗಳು ಸನಾತನ ಸಂಸ್ಕೃತಿ, ಹಿಂದೂತ್ವದ ಪ್ರತೀಕವಾಗಿ ಪುರುಷರು ಪಂಚೆ ಶಲ್ಯ ಹಾಗೂ ಮಹಿಳೆಯರು ಸೀರೆ ಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿ ಶ್ರೀ ಗುರು ಕಾರುಣ್ಯಕ್ಕೆ ಪಾತ್ರರಾಗುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9945610882, 9741501860 ಗೆ ಸಂಪರ್ಕಿಸುವಂತೆ ತಿಳಿಸಿದರು.
ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸುಧೀರ್ ಮಾರವಳ್ಳಿ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ವೇ.ಪುಟ್ಟಸ್ವಾಮಿ ಬೆಂಡೆಕಟ್ಟೆ ಅವರು ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶಿವಕುಮಾರಸ್ವಾಮಿ ಕವಲಿ, ಖಜಾಂಚಿ ಮಹಾಂತಯ್ಯ ಶಾಸ್ತ್ರಿ ಗಾಮ, ಅರ್ಚಕ ಮೃತ್ಯುಂಜಯ ಸ್ವಾಮಿ, ಕಾನಳ್ಳಿ ಪ್ರಸಾದ್ ಶಾಸ್ತ್ರಿ, ವಾಗೀಶಯ್ಯ ತರಲಘಟ್ಟ, ಕೊಟ್ರೇಶ್ ಶಾಸ್ತ್ರಿ, ಕಾರ್ಯದರ್ಶಿ ಶಿವಪುತ್ರಯ್ಯ, ನಂದೀಶಶಾಸ್ತ್ರಿ, ಕರಿಬಸವಯ್ಯ, ಸಂಗಯ್ಯ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಧರ್ಮಸಭೆ ಆಯೋಜನೆ
ಸೆ.27ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಇಷ್ಟಲಿಂಗ ಮಹಾಪೂಜೆ ನಡೆಯಲಿದ್ದು, 10 ಗಂಟೆಗೆ ಅಪೇಕ್ಷಿತ ಸರ್ವ ಭಕ್ತಾಧಿಗಳಿಗೆ ಉಚಿತವಾಗಿ ರುದ್ರಾಕ್ಷಿ ಧಾರಣೆ, 12 ಗಂಟೆಗೆ ಧರ್ಮ ಸಭೆ ಆಯೋಜಿಸಲಾಗಿದೆ ವೇ.ಪ್ರಭುಸ್ವಾಮಿ ಆರಾಧ್ಯಮಠ ತಿಳಿಸಿದರು.