ಸಾರಾಂಶ
ಸಿದ್ದಾಪುರ: ಗಾಯತ್ರಿ ಮಂತ್ರದ ಪ್ರತಿಯೊಂದು ಅಕ್ಷರವೂ ಬೆಳಕನ್ನು ನೀಡುತ್ತದೆ. ಗಾಯತ್ರಿ ಮಂತ್ರ ಕೇವಲ ಶಕ್ತಿ ಅಲ್ಲ, ಅಸಾಧಾರಣ ಶಕ್ತಿಯನ್ನು ನೀಡುವಂತಹುದಲ್ಲದೇ ನಮ್ಮ ಪರಂಪರೆಯನ್ನು ಕೊಂಡಾಡಿದ ಮಂತ್ರ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ತಾಲೂಕಿನ ಭಾನ್ಕುಳಿ ಮಠದಲ್ಲಿ ಶಂಕರಪಂಚಮಿ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಗಾಯತ್ರಿ ಮಂತ್ರದ ಕುರಿತು ಶ್ರೀಗಳು ಭಾನುವಾರ ಉಪನ್ಯಾಸ ನೀಡಿ, ಗಾಯತ್ರಿ ಮಂತ್ರ ವೇದದ ಮೂಲ. ನಾಲ್ಕೂ ವೇದಗಳಿಗೂ ಗಾಯತ್ರಿ ಮಂತ್ರ ತಾಯಿ ಇದ್ದಂತೆ. ಇಂತಹ ಗಾಯತ್ರಿ ಮಂತ್ರವನ್ನು ಉಪಾಸನೆ ಮಾಡುವಾಗ ಅಕ್ಷರ, ಸ್ವರದಲ್ಲಿ ವ್ಯತ್ಯಾಸವಾಗದಂತೆ ಉಚ್ಚಾರವನ್ನು ಸರಿಯಾಗಿ ಮಾಡಬೇಕು. ಗಂಗೆ, ಗಾಯತ್ರಿ, ಗುರು, ಗೋವು ಇವೆಲ್ಲವೂ ನಮ್ಮ ಪಾಲಿಗಿದೆ. ತಡೆ ಒಡ್ಡುವವರು ಯಾರೂ ಇಲ್ಲ. ಗಾಯತ್ರಿ ಮಂತ್ರ ಅಮೃತ ಸೇತುವೆ. ನಾವು ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹಿರಿಯರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಬೇಕು. ಯಾರೂ ಅಯೋಗ್ಯರಲ್ಲ. ಎಲ್ಲರೂ ಯೋಗ್ಯರು. ಗುರುತಿಸುವ ಗುರುಶಕ್ತಿ ಬೇಕು. ಅಸಾಧ್ಯವಾದದ್ದು ಎನ್ನುವುದು ಯಾವುದೂ ಇಲ್ಲ. ಪುರುಷರು ಗಾಯತ್ರಿ ಮಂತ್ರವನ್ನು ಜಪಿಸುವ ಹಾಗೆ ಮಹಿಳೆಯರು ಪ್ರೇರೇಪಣೆ ನೀಡಬೇಕು. ಪತಿಯಾದವನು ಗಾಯತ್ರಿ ಮಂತ್ರವನ್ನು ಜಪಿಸಿದ ಅರ್ಧ ಪುಣ್ಯ ಮಡದಿಗೆ ಬರುತ್ತದೆ. ಮಹಿಳೆಯರು ಗಾಯತ್ರಿ ಮಂತ್ರವನ್ನು ಅಭ್ಯಾಸ ಮಾಡಲಿಕ್ಕೆ ಹೋಗಬಾರದು ಎಂದು ಶ್ರೀಗಳು ನುಡಿದರು.ಇದೇ ಸಂದರ್ಭದಲ್ಲಿ ಹತ್ತು ವರ್ಷದೊಳಗಿನ ಹತ್ತು ವಟುಗಳ ಪಾದಪೂಜೆ ನಡೆಯಿತು. ಶತರುದ್ರಹವನ, ಅಕ್ಷರಲಕ್ಷ ಗಾಯತ್ರೀ ಜಪಮಹಾಯಜ್ಞ ನಡೆಯಿತು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ದಂಪತಿ ಸಭಾಪೂಜೆ ನೆರವೇರಿಸಿದರು.
ಶಂಕರ ಪಂಚಮಿ ಉತ್ಸವ ಸಮಿತಿ ಅಧ್ಯಕ್ಷ ಜಯರಾಮ ಭಟ್ಟ ಗುಂಜಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.