ಸಾರಾಂಶ
ಅಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಗೀತಾ ಮಾಡಲಗೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯ ದುರ್ಗಪ್ಪ ಹಿರೇಮನಿ ಮಾತ್ರ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಕಾಂಗ್ರೇಸ್‌ನ ಗೀತಾ ಮಾಡಲಗೇರಿ ಪುರಸಭೆ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ದುರ್ಗಪ್ಪ ಹಿರೇಮನಿ ಅವಿರೋಧವಾಗಿ ಆಯ್ಕೆಯಾದರು.
ರೋಣ: ಸ್ಥಳೀಯ ಪುರಸಭೆ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ 5ನೇ ವಾರ್ಡಿನ ಸದಸ್ಯೆ ಗೀತಾ ಎಂ. ಮಾಡಲಗೇರಿ, ಉಪಾಧ್ಯಕ್ಷರಾಗಿ 9ನೇ ವಾರ್ಡಿನ ಸದಸ್ಯ ದುರ್ಗಪ್ಪ ಹಿರೇಮನಿ ಸೋಮವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಎಸ್.ಸಿ. ಪುರುಷ ಸ್ಥಾನಕ್ಕೆ ಮಿಸಲಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಗೀತಾ ಮಾಡಲಗೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯ ದುರ್ಗಪ್ಪ ಹಿರೇಮನಿ ಮಾತ್ರ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಸಂಖ್ಯಾ ಬಲವಿದ್ದು, ಅದರಲ್ಲಿ 16 ಕಾಂಗ್ರೆಸ್ ಸದಸ್ಯರು, 7 ಬಿಜೆಪಿ ಸದಸ್ಯರು. ಇದರಿಂದಾಗಿ ಕಾಂಗ್ರೇಸ್‌ನ ಗೀತಾ ಮಾಡಲಗೇರಿ ಪುರಸಭೆ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ದುರ್ಗಪ್ಪ ಹಿರೇಮನಿ ಅವಿರೋಧವಾಗಿ ಆಯ್ಕೆಯಾದರು.ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ್ ನಾಗರಾಜ ಕೆ. ಕಾರ್ಯ ನಿರ್ವಹಿಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಹಾಗೂ ಚುನಾವಣೆ ನಿಯೋಜಿತ ಸಿಬ್ಬಂದಿ ಉಪಸ್ಥಿತರಿದ್ದರು.ಪುರಸಭೆಗೆ ನೂತನ ಅದ್ಯಕ್ಷರಾಗಿ ಆಯ್ಕೆಗೊಂಡ ಗೀತಾ ಮಾಡಲಗೇರಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡ ದುರ್ಗಪ್ಪ ಹಿರೇಮನಿ ಅವರನ್ನು ಪುರಸಭೆ ಸಭಾಭವನದಲ್ಲಿ ಸದಸ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದರು.
ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂ ಮಾಲೆ ಹಾಕಿ, ಸಿಹಿ ತಿನ್ನಿಸಿ ಶುಭ ಹಾರೈಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬಳಿಕ ಶಾಸಕರ ನಿವಾಸಕ್ಕೆ ತೆರಳಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ.ಜಿ.ಎಸ್. ಪಾಟೀಲ ಸನ್ಮಾನಿಸಿದರು. ರೋಣ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ, ನೈರ್ಮಲ್ಯ ಕಾಪಾಡುವಲ್ಲಿ ನಿತ್ಯ ವಾರ್ಡ್ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ಪುರಸಭೆ ಸದಸ್ಯರಾದ ಮಿಥುನ ಪಾಟೀಲ, ಗದಿಗೆಪ್ಪ ಕಿರೇಸೂರ, ಬಾವಾಸಾಬ ಬೇಟಗೇರಿ, ಮಲ್ಲಯ್ಯ ಮಹಾಪುರುಷಮಠ, ದಾವಲಸಾಬ ಬಾಡಿನ, ರಂಗವ್ವ ಭಜಂತ್ರಿ, ಅಪ್ತಾಬ ಅಹ್ಮದ್ ತಹಸೀಲ್ದಾರ್, ಬಸವ್ವ ಕೊಪ್ಪದ, ಹನಮಂತಪ್ಪ ತಳ್ಳಿಕೇರಿ, ಈಶ್ವರ ಕಡಬಿನಕಟ್ಟಿ, ಅಂದಪ್ಪ ಗಡಗಿ, ಶಕುಂತಲಾ ಚಿತ್ರಗಾರ, ಚನ್ನಬಸಮ್ಮ ಹಿರೇಮಠ, ಬಾಳಪ್ಪ ಭಜಂತ್ರಿ , ಪಿಕಾರ್ಡ್ ಬ್ಯಾಂಕ ಅಧ್ಯಕ್ಷ ಬಸವರಾಜ ನವಲಗುಂದ, ಮಲ್ಲಪ್ಪ ಮಾಡಲಗೇರಿ, ಅಶೋಕ ಗಡಗಿ ಸೇರಿದಂತೆ ಅನೇಕರಿದ್ದರು.