ಸಾರಾಂಶ
ಚಿತ್ರದುರ್ಗ: ಸಂಸದ ಗೋವಿಂದ ಕಾರಜೋಳ ಅವರ ಕಚೇರಿ ಉದ್ಘಾಟನೆಗೆ ಜಿಲ್ಲೆಯ ಎಲ್ಲ ಪ್ರಮುಖ ಮಠಾಧೀಶರನ್ನು ಆಹ್ವಾನಿಸಿ ಕಾವಿ ಬಣ್ಣದ ಜರತಾರಿ ಶಾಲು ಹೊದಿಸಿ, ರುದ್ರಾಕ್ಷಿ ಹಾರ ಹಾಕಿ ಗೌರವಿಸುವುದರ ಮೂಲಕ ಗುರು ಕಾಣಿಕೆ ನೀಡಿ ಧನ್ಯತೆ ಪ್ರದರ್ಶಿಸಿದರು.
ತಮ್ಮ ಸ್ವಂತ ಗೃಹ ಪ್ರವೇಶ ಎಂಬಷ್ಟರ ಮಟ್ಟಿಗೆ ಭಕ್ತಿ, ಭಾವಗಳ ಮೇಳೈಸಿದ್ದರು. ಕಚೇರಿಗೆ ನಮಗಿಂತ ಮೊದಲು ಗುರುಗಳ ಪ್ರವೇಶವಾಗಲಿ ಎಂಬ ಇಂಗಿತ ಅವರದ್ದಾಗಿತ್ತು. ಗೌರವ ಸ್ವೀಕರಿಸಿದ ಮಠಾಧೀಶರು ಗೋವಿಂದ ಕಾರಜೋಳ ಆವರು ಪ್ರಾರಂಭ ಮಾಡಿರುವ ಕಾರ್ಯಾಲಯ ನೊಂದ ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಕೇಂದ್ರವಾಗಲಿ ಎಂದು ಹಾರೈಸಿದರು.ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀ, ಹಿರಿಯೂರಿನ ಆದಿಜಾಂಬವ ಮಠದ ಷಡಾಕ್ಷರಮುನಿ ಶ್ರೀ, ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಯಾದವಾನಂದ ಗುರುಪೀಠದ ಶ್ರೀ ಕೃಷ್ಣಾಯಾದವನಂದ ಶ್ರೀ, ಬಂಜಾರ ಗುರುಪೀಠದ ಸೇವಾಲಾಲ್ ಶ್ರೀ, ಮೇದಾರ ಗುರುಪೀಠದ ಬಸವಕೇತೇಶ್ವರ ಶ್ರೀ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ, ಸಿದ್ದಯ್ಯನ ಕೋಟೆಯ ಬಸವಲಿಂಗ ಶ್ರೀ, ಚಕ್ಕೋತಿಯ ಶಿವಮೂರ್ತಿ ಶ್ರೀ, ಮಡಿವಾಳ ಗುರುಪೀಠದ ಮಡಿವಾಳ ಮಾಚಿದೇವ ಶ್ರೀ, ಛಲವಾದಿ ಗುರುಪೀಠದ ಬಸವನಾಗಿ ದೇವ ಶ್ರೀಗಳು ಭಾಗವಹಿಸಿದ್ದರು. ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಎಸ್‌ಸಿ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಹನುಮಂತೇಗೌಡ, ಮುಖಂಡರಾದ ಅನಿತ್ ಕುಮಾರ್, ನಗರಸಭಾ ಸದಸ್ಯರಾದ ವೆಂಕಟೇಶ್, ಹರೀಶ್, ಶ್ರೀನಿವಾಸ್, ಭಾಸ್ಕರ್ ಸೇರಿ ಬಿಜೆಪಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.