ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನುರಿತ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತದೆ, ಜೊತೆಗೆ ಶಿಕ್ಷಣಕ್ಕಾಗಿ ಸರ್ಕಾರಗಳೂ ಸಹ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಉತ್ತನ ಸ್ಥಾನ ಅಲಂಕರಿಸಬೇಕೆಂದು ಡಿಡಿಪಿಐ ಮುನಿಕೆಂಪೇಗೌಡ ತಿಳಿಸಿದರು.ತಾಲೂಕಿನ ಸೋಮೇನಹಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಚಿಣ್ಣರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂಪ್ಯೂಟರ್ ಜ್ಞಾನ ಅಗತ್ಯಇಂದಿನ ದಿನಗಳಲ್ಲಿ ಉಚಿತವಾಗಿ ಶಿಕ್ಷಣ ಸೇರಿದಂತೆ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳು ದೊರೆಯುತ್ತಿದೆ. ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸಾಧನೆ ಮಾಡಬೇಕು. ಕಂಪ್ಯೂಟರ್ ಜ್ಞಾನ ತುಂಬಾನೆ ಪ್ರಾಮುಖ್ಯತೆ ವಹಿಸುತ್ತದೆ. ಕಂಪ್ಯೂಟರ್ ಜ್ಞಾನ ಇಲ್ಲದೇ ಇದ್ದರೇ ಅವಿದ್ಯಾವಂತ ಎಂದೇ ಕರೆಯಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಾಂತ್ರಿಕ ಶಿಕ್ಷಣವನ್ನೂ ಸಹ ಪಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡಿ. ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ಅನೇಕರು ಇಂದು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ಸಾವಿರ ವಿದ್ಯಾರ್ಥಿ ವೇತನ ಸಹ ಸಿಗಲಿದೆ. ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಮಂಗಳಮ್ಮ ಅಶ್ವತ್ಥಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಬಿ.ಆರ್.ಪಿ.ಕೆ.ವಿ.ಮಂಜುನಾಥ್, ಸಿ.ಆರ್.ಪಿಗಾಳದ ರಾಜೇಶ್, ಷರೀಫ್, ಶಾಲೆಯ ಮುಖ್ಯಶಿಕ್ಷಕ ನಾಗಲಿಂಗಪ್ಪ, ಸಹ ಶಿಕ್ಷಕರಾದ ರಾಜಶೇಖರ್, ರಾಘವೇಂದ್ರ, ಶ್ರೀನಿವಾಸ್, ಮನೋಹರ್, ರಶ್ಮಿ, ಲೀಲಾವತಿ, ಮಂಜುಳ, ಲಕ್ಷ್ಮೀ ಕೃಪ, ಜ್ಯೋತಿ ಸೇರಿದಂತೆ ಹಲವರು ಇದ್ದರು.