ಸಾರಾಂಶ
- ಚುನಾವಣೆಗೆ ನಾನೇ ನಿಲ್ಲಬೇಕಿತ್ತೇನೋ ಅನಿಸುತ್ತಿದೆ ಎಂದ ಮಾಜಿ ಸಂಸದ । ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಣೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಆರು ಸಲ ಬಿಜೆಪಿಯನ್ನು ಕ್ಷೇತ್ರದ ಮತದಾರರು ಗೆಲ್ಲಿಸಿದ್ದು, 2 ಸಲವಷ್ಟೇ ನಾವು ಸೋತಿದ್ದೇವೆ. ಮೊನ್ನೆಯ ಫಲಿತಾಂಶವನ್ನು ನೋಡಿದರೆ ನಾನೇ ನಿಲ್ಲಬೇಕಿತ್ತೇನೋ ಅನಿಸುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ದಾ-ಹ ಅರ್ಬನ್ ಕೋ ಆಪ್ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಬಂದ ದಿನದಿಂದಲೂ ಎಷ್ಟೋ ಮುಖಂಡರು, ಕಾರ್ಯಕರ್ತರು, ಅಭಿಮಾನಿ, ಬೆಂಬಲಿಗರು ರೋದಿಸುತ್ತಾ, ಕಣ್ಣೀರು ಹಾಕುತ್ತಾ ಮಾತನಾಡಿದಾಗ ನನಗೂ ವ್ಯಥೆಯಾಗುತ್ತದೆ ಎಂದರು.ಚುನಾವಣೆ ಮುನ್ನಾ ದಿನಗಳಲ್ಲಿ ನನಗೆ ಆರೋಗ್ಯ ಕೈ ಕೊಟ್ಟಿತ್ತು. ಈಗ ಸುಧಾರಣೆಯಾಗಿದೆ. ನನ್ನ ಪಾಡಿಗೆ ನಾನು ನಡೆಯುವಂತಾಗಿದ್ದೇನೆ. ಇಷ್ಟೆಲ್ಲಾ ನೋವು, ನಿರಾಸೆ ಮಧ್ಯೆಯೂ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿದ್ದಾರೆಂಬ ಖುಷಿ ಇದೆ. ಆದರೆ, ಸತತವಾಗಿ ಬಿಜೆಪಿ ಗೆಲ್ಲಿಸುತ್ತಿದ್ದ ದಾವಣಗೆರೆ ಈ ಸಲ ಮೋದಿ ಸರ್ಕಾರದಲ್ಲಿ ತನ್ನ ಕೊಡುಗೆ ನೀಡದ ನೋವಿದೆ ಎಂದು ತಿಳಿಸಿದರು.
ಇನ್ನೂ 10 ವರ್ಷದಲ್ಲಿ ದೇಶವನ್ನು ವಿಶ್ವದ ಬಲಿಷ್ಟ ಶಕ್ತಿಯಾಗಿಸುವ ತಾಕತ್ತು ನರೇಂದ್ರ ಮೋದಿಗೆ ಇದೆ. ದಾವಣಗೆರೆ ಸೇರಿದಂತೆ ಚುನಾವಣೆಯಲ್ಲಿ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಹಿನ್ನಡೆಯಾಗಿರಬಹುದು. ನನ್ನ ಜೀವ ಇರುವವರೆಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರನ್ನು ಮರೆಯುವುದಿಲ್ಲ ಎಂದು ಹೇಳಿದರು.ಸೋಲಿನ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ. ಹಾಗೆ ಮಾಡಿದರೆ ಪ್ರಯೋಜನವೂ ಇಲ್ಲ. ಮತ್ತೆ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯನ್ನು ಸಂಘಟಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಮುಂಬರುವ ತಾಪಂ, ಜಿಪಂ, ಮಹಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಮತ್ತೆ ಬಲಿಷ್ಠಗೊಳಿಸಲು ಶ್ರಮಿಸುತ್ತೇವೆ. ನಡೆಯುವ ಮನುಷ್ಯ ಎಡವೋದು ಸಹಜ. ನಾವು ಎಲ್ಲಿ ಎಡವಿದ್ದೇವೆಂಬುದನ್ನು ಅರಿತು, ತಿದ್ದಿಕೊಳ್ಳೋಣ. ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಕುಟುಂಬ ಮರೆಯಲ್ಲ. ನೀವೇ ನಮ್ಮ ಕುಟುಂಬಕ್ಕೆ ಆಸ್ತಿ ಎಂದು ಜಿ.ಎಂ.ಸಿದ್ದೇಶ್ವರ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಭೀಮಸಮುದ್ರದ ಮನೆಯಷ್ಟೇ ನನ್ನ ಕುಟುಂಬವಾಗಿತ್ತು. ದಾವಣಗೆರೆಗೆ ಬಂದ ಮೇಲೆ ನನ್ನ ಕುಟುಂಬ ವಿಸ್ತಾರವಾಗಿದೆ. ಚುನಾವಣೆಯಲ್ಲಿ ನಿಮ್ಮೆಲ್ಲರ ಪರಿಶ್ರಮಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಲಿ. ಸೋತ ನೋವು, ಬೇಸರ ನಿಮಗಿರುವಂತೆ ನಮಗೂ ಇದೆ. ಆದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಿರುವುದು ಆ ನೋವನ್ನೆಲ್ಲಾ ಮರೆಸಿದೆ. ಆದರೆ, ದಾವಣಗೆರೆ ಬಿಜೆಪಿ ಸಂಸದರಾಗಿ ದೆಹಲಿಯಲ್ಲಿ ಇರಬೇಕಿತ್ತೆಂಬ ಸಹಜ ಕೊರಗು ಎಲ್ಲರಿಗೂ ಇದ್ದೇ ಇದೆ ಎಂದರು.ಸಮೀಕ್ಷೆಯಲ್ಲಿ ಸಿದ್ದೇಶ್ವರ ಹೆಸರೇ ಇತ್ತು. ಆದರೆ, ನಮಗೆ ಟಿಕೆಟ್ ಕೊಡದಂತೆ ಸುಮಾರು 15 ದಿನ ಸಮಸ್ಯೆ ಮಾಡಿದ್ದರು. ಇದರಿಂದ ಚುನಾವಣೆಯ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಏನೇನು ಆಗಿದೆಯೋ ಅದನ್ನೆಲ್ಲಾ ಸರಿ ಮಾಡೋಣ. ನೀವ್ಯಾರು ಸೋಲಿನ ಬಗ್ಗೆ ನೋವು, ಸಂಕಟಪಡಬೇಡಿ. ನಾವೆಲ್ಲರೂ ಸದಾ ನಿಮ್ಮೊಂದಿಗೆ ಇರುತ್ತೇವೆ. ಮುಂಬರುವ ತಾಪಂ, ಜಿಪಂ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಖಂಡರು, ಕಾರ್ಯಕರ್ತರು ಸಜ್ಜಾಗಿ. ಮತ್ತೆ ಬಿಜೆಪಿಗೆ ಹಳೆಯ ಲಯ ತರೋಣ ಎಂದು ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಜಿ.ಎಸ್.ಅನಿತಕುಮಾರ, ಜಿ.ಎಸ್.ಅಶ್ವಿನಿ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಚಂದ್ರಶೇಖರ ಪೂಜಾರ, ಎಚ್.ಸಿ.ಮಹೇಶ ಪಲ್ಲಾಗಟ್ಟೆ, ಸಂಗನಗೌಡ, ಮಾಜಿ ಮೇಯರ್‌ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ, ಉಪ ಮೇಯರ್ ಯಶೋಧ ಯೋಗೇಶ, ಮಾಜಿ ಉಪ ಮೇಯರ್ ಶಿಲ್ಪ ಜಯಪ್ರಕಾಶ, ಗಾಯತ್ರಿ ಬಾಯಿ, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಎ.ವೈ.ಪ್ರಕಾಶ, ಎಂ.ಹಾಲೇಶ, ಬಿ.ಎಸ್.ಜಗದೀಶ, ಧನಂಜಯ ಕಡ್ಲೇಬಾಳು, ಅಜಿತ್ ಸಾವಂತ, ಆರ್.ಎಲ್.ಶಿವಪ್ರಕಾಶ, ಹರಪನಹಳ್ಳಿ ನಂಜನ ಗೌಡ, ಐರಣಿ ಅಣ್ಣೇಶ, ಜಿ.ಗಂಗಾಧರ ಶಿವಯೋಗಪ್ಪ ಇತರರು ಇದ್ದರು.- - - ಕೋಟ್ಸ್ ದಾವಣಗೆರೆ ನೂತನ ಸಂಸದರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸರ್ವರನ್ನೂ ಸಮಾನದೃಷ್ಟಿಯಲ್ಲಿ ಕಾಣಲಿ. ಲೋಕಸಭೆ ಚುನಾವಣೆಗೆ ನಾನು ಅಧಿಕಾರಕ್ಕಾಗಿ ಸ್ಪರ್ಧಿಸಿರಲಿಲ್ಲ. ಸೇವೆಗಾಗಿ ಒಪ್ಪಿಕೊಂಡಿದ್ದೆ. ಆದರೂ, ಫಲಿತಾಂಶದಲ್ಲಿ ನಾವು ಸೋತಿದ್ದರೂ, ಗೆಲುವು ನಮ್ಮದೇ ಎಂಬುದನ್ನು ನಾವ್ಯಾರೂ ಮರೆಯಬಾರದು. ದೃತಿಗೆಡಬಾರದು
- ಗಾಯತ್ರಿ ಸಿದ್ದೇಶ್ವರ, ಪರಾಜಿತ ಬಿಜೆಪಿ ಅಭ್ಯರ್ಥಿ- - - -9ಕೆಡಿವಿಜಿ3:
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಎಚ್ಚೆಸ್ ಶಿವಶಂಕರ, ಬಿ.ಪಿ.ಹರೀಶ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಯಶವಂತರಾವ್ ಜಾಧವ್, ಎನ್.ರಾಜಶೇಖರ ನಾಗಪ್ಪ ಇದ್ದರು. -9ಕೆಡಿವಿಜಿ4:ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾರತ ಮಾತೆ, ಬಿಜೆಪಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. -9ಕೆಡಿವಿಜಿ5:
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮಗಲ್ಲಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.