ಸುಳ್ಳು ಆಶ್ವಾಸನೆ ನೀಡುವ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಸಂತೋಷ್ ಲಾಡ್

| Published : May 05 2024, 02:07 AM IST

ಸುಳ್ಳು ಆಶ್ವಾಸನೆ ನೀಡುವ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಸಂತೋಷ್ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಸುಳ್ಳು ಆಶ್ವಾಸನೆ ನೀಡುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿ ಜನರು ಕಿತ್ತೆಸೆಯಬೇಕು ಎಂದು ಸಚಿವ ಸಂತೋಷ್ ಲಾಡ್ ಕರೆ ನೀಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಜನರಿಗೆ ಸುಳ್ಳು ಆಶ್ವಾಸನೆ ನೀಡುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿ ಜನರು ಕಿತ್ತೆಸೆಯಬೇಕು ಎಂದು ಸಚಿವ ಸಂತೋಷ್ ಲಾಡ್ ಕರೆ ನೀಡಿದರು.

ಮುಧೋಳ ಮತ್ತು ಲೋಕಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ರಾತ್ರಿ ನಗರದ ಶಿವಾಜಿ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ನಾನು ಬರೀ ಮೋದಿ ಅವರನ್ನು ಬೈಯ್ಯುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದು ಹೇಳಿದರು.

2014ರ ಮೊದಲು ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ಸ್ವಿಸ್ ಬ್ಯಾಂಕ್‌ನಿಂದ ಹಣ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ, ಪ್ರತಿ ವರ್ಷ ಯುವಕರಿಗೆ 2 ಕೋಟಿ ಉದ್ಯೋಗ,, ರೈತರ ಸಾಲ ಮನ್ನಾ ಹಾಗೂ ರೈತರ ಆದಾಯ ದ್ವಿಗುಣ ಮುಂತಾದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿ ಈವರೆಗೂ ಈಡೇರಿಸಿಲ್ಲ ಎಂದು ದೂರಿದರು.ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು, ಕೂಲಿ ಕಾರ್ಮಿಕರು ಬದುಕುವುದು ಕಷ್ಟವಾಗಿದೆ. ಕಪ್ಪು ಹಣ ವೈಟ್ ಮಾಡುತ್ತೇನೆ ಎಂದು ರಾತ್ರೋರಾತ್ರಿ ನೋಟ್‌ ಬ್ಯಾನ್ ಮಾಡಿದಾಗ ಬಡವರು, ರೈತರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತು ಅದೆಷ್ಟೋ ಜನರು ಪ್ರಾಣ ಕಳೆದುಕೊಂಡರು. ಶ್ರೀಮಂತರು ಯಾರೂ ಬ್ಯಾಂಕ್ ಮುಂದೆ ನಿಂತು ಪ್ರಾಣ ಕಳೆದುಕೊಳ್ಳಲಿಲ್ಲ. ಈ ಕುರಿತು ಪ್ರಶ್ನಿಸಿದರೆ ನಾನು ಬೈಯ್ಯುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ₹55 ಲಕ್ಷ ಕೋಟಿ ಸಾಲವಿತ್ತು, ಇದೀಗ ಅದು ₹ 183 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದ ಅವರು, ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಬೆಂಬಲಿಸಿ ಎಂದು ಮತದಾರರಿಗೆ ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ಬಿಜೆಪಿ ಚುನಾವಣೆ ಬಂದಾಗ ಜಾತಿ-ಧರ್ಮದ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿ ಒಡೆದು ಅಳುವ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ, ಉದಯಕುಮಾರ ಸಾರವಾಡ, ಅಶೋಕ ಕಿವಡಿ, ಶಿವಾನಂದ ಉದಪುಡಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.