ಮೌಢ್ಯಗಳನ್ನು ತೊಡೆದು ಹಾಕಿ ಮುನ್ನಡೆಯಿರಿ

| Published : Mar 01 2025, 01:01 AM IST

ಸಾರಾಂಶ

ಮೌಡ್ಯ ಆಚರಣೆಯ ಪಾಲನೆಯಿಂದ ಸಮುದಾಯ ಹಿಂದೆ ಬೀಳಲು ಸಾಧ್ಯವಿದ್ದು ಮೂಢ ಪದ್ದತಿಯ ಮೂಲಕ ಹೆಣ್ಣುಮಕ್ಕಳಿಗೆ ನಿರ್ಬಂಧ ಹೇರುವುದು ಸರಿಯಲ್ಲ.ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚು ಅರಿವು ಮೂಡಿಸಬೇಕು.ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಸಬೇಕೆಂದರು.

ಕನ್ನಡಪ್ರಭವಾರ್ತೆ ಪಾವಗಡ

ಕಂದಾಚಾರ, ಮೌಡ್ಯಾಚಾರಗಳನ್ನು ತೊಡೆದು ಹಾಕದ ಹೊರತು ಗೊಲ್ಲ ಸಮುದಾಯ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ ಎಂದು ನಿವೃತ್ತ ಪೊಲೀಸ್ ಕಮಿಷನರ್ ಕೋದಂಡರಾಮಯ್ಯ ಅಭಿಪ್ರಾಯಪಟ್ಟರು.ಶಿವರಾತ್ರಿ ಅಂಗವಾಗಿ ಶುಕ್ರವಾರ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಗೊಲ್ಲರ ಆರಾಧ್ಯ ದೈವನಾದ ಶ್ರೀ ಪಾಲೇನಹಳ್ಳಿ ಚಿತ್ರಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೌಡ್ಯ ಆಚರಣೆಯ ಪಾಲನೆಯಿಂದ ಸಮುದಾಯ ಹಿಂದೆ ಬೀಳಲು ಸಾಧ್ಯವಿದ್ದು ಮೂಢ ಪದ್ದತಿಯ ಮೂಲಕ ಹೆಣ್ಣುಮಕ್ಕಳಿಗೆ ನಿರ್ಬಂಧ ಹೇರುವುದು ಸರಿಯಲ್ಲ.ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚು ಅರಿವು ಮೂಡಿಸಬೇಕು.ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಸಬೇಕೆಂದರು.

ಶಿಕ್ಷಣವಿಲ್ಲದಿದ್ದರೆ ಇಂತಹ ಪದ್ದತಿಗಳನ್ನು ತಡೆಯಲು ಸಾಧ್ಯವಿಲ್ಲ. ಸಮುದಾಯದ ಜನರು ಶೈಕ್ಷಣಿಕವಾಗಿ , ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಬೇಕು.ಅಗ ಮಾತ್ರ ಸಮುದಾಯ ಪ್ರಗತಿ ಕಾಣಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ನಾವು ಕಾರ್ಯನ್ಮುಖರಾಗುವ ಮೂಲಕ ಅನಿಷ್ಟತೆಗಳನ್ನು ದೂರವಿಡುವಂತೆ ಕರೆ ನೀಡಿದರು.ವಿಶ್ವೇಶ್ವರಯ್ಯ ಜಲಮಂಡಳಿ ವ್ಯವಸ್ಥಾಪಕ ಸಣ್ಣ ಚಿತ್ತಯ್ಯ ಮಾತನಾಡಿ ಪಾವಗಡಕ್ಕೆ ತುಂಗಭದ್ರಾ ನೀರು ಹರಿಸುವ ಪ್ರಕ್ರಿಯೆಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಸಹಕಾರ ಪ್ರಾಮುಖ್ಯವಾಗಿದೆ. 2025 ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ನೀರು ಹರಿಸಲು 2350 ಕೋಟಿ ರು. ಸರ್ಕಾರ ಬಿಡುಗಡೆ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರವೇ ಅಗಿದೆ. ಗೊಲ್ಲ ಸಮುದಾಯ ಅಭಿವೃದ್ಧಿಯತ್ತ ಹೆಚ್ಚು ಅಸಕ್ತಿವಹಿಸಬೇಕು. ಸಮುದಾಯದ ಮಕ್ಕಳಿಗೆ ಅಧ್ಯಯನದ ಕಡೆ ಗಮನ ಕೊಟ್ಟು,ದುಶ್ಚಟಗಳಿಂದ ದೂರವಿರಿಸುವತ್ತ ಫೋಷಕರು ತಿಳಿಹೇಳುವಂತೆ ಸಲಹೆ ನೀಡಿದರು.

ಪ್ರಾಧ್ಯಾಪಕಿ ಜಿ.ಕೆ.ಪ್ರೇಮ ಅವರು ಮಾತನಾಡಿ ಹೆಣ್ಣುಮಕ್ಕಳನ್ನು ಮೌಡ್ಯತೆಯ ಬಲಿಪಶುವಾಗಿಸುವುದು ನಿಲ್ಲಿಸಬೇಕು.ಹೆಣ್ಣನ್ನು ಮುಕ್ತವಾಗಿಸದ ಹೊರತು ಸಮುದಾಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು. ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹಳ್ಳಿ ಚಿಕ್ಕಣ್ಣ ಮಾತನಾಡಿ,ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ.ಈ ಚಿತ್ರಲಿಂಗೇಶ್ವರ ದೇಗುಲ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು. ಇದು ಸಮುದಾಯದ ಧಾರ್ಮಿಕ ಕಾರ್ಯಕ್ಕೆ ಮಹತ್ವದ ಸಂಕೇತವಾಗಲಿದೆ ಎಂದರು.

ಇದೇ ವೇಳೆ ಜಮೀನು ಖರೀದಿಸಿ ಇಲ್ಲಿನ ದೇವಸ್ಥಾನದ ಪ್ರಗತಿಗೆ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಸಹಕಾರ ಇಲಾಖೆ ಅಪಾರ ನಿಬಂಧಕ ಎಂ.ಡಿ. ನರಸಿಂಹಮೂರ್ತಿ, ಡಾ.ಚಿತ್ತಯ್ಯ ಪೂಜಾರ್, ಮುಖಂಡರಾದ ರವಿಕುಮಾರ್, ಗುತ್ತಿಗೆದಾರ ಮಹಾಲಿಂಗಪ್ಪ ಹಾಗೂ ಇತರೆ ಮುಖಂಡರು ಸಮಾಜದ ಪ್ರಗತಿ ಕುರಿತು ಮಾತನಾಡಿದರು. ಬಳಿಕ ಟ್ರಸ್ಟ್ ಅಡಿಯಲ್ಲಿ ಪಾಲೇನಹಳ್ಳಿಶ್ರೀ ಪ್ರಶಸ್ತಿಯನ್ನು ಕಾರ್ಯಪಾಲಕ ಅಭಿಯಂತರಾದ ದೊಡ್ಡ ಚಿತ್ತಪ್ಪ ಅವರಿಗೆ ನೀಡಿದ್ದು ಶಿವರಾತ್ರಿ ಹಿನ್ನಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು. ಮೇಲು ದೀಪೋತ್ಸವ ಭಕ್ತರನ್ನು ಗಮನ ಹೆಚ್ಚು ಸೆಳೆದಿದ್ದು, ಕೋಲಾಟ, ಚಕ್ಕಭಜನೆ,ಜಾನಪದ ಹಾಡುಗಳ ಮೂಲಕ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು.

ಹಿಂದೂಳಿದ ವರ್ಗಗಳ ತಾಲೂಕು ಅಧ್ಯಕ್ಷ ಎಂ.ಮೈಲಾರರೆಡ್ಡಿ,ಅಂಜನರೆಡ್ಡಿ, ಸಿ.ಎನ್.ಸಿ ಕಂಪನಿ ಮಾಲೀಕ ಚಿತ್ತಪ್ಪ,ಹಿರೇತುರ್ಪಿ,ಗಂಗಣ್ಣ,ಜಂಗಮರಹಳ್ಳಿ ಶಿವಣ್ಣ, ಮಹಲಿಂಗಪ್ಪ,ಗೋಪಿ,ಚಿಕ್ಕಚಿತ್ತಪ್ಪ,ಅಮರಾಪುರ ಚಿಕ್ಕಣ್ಣ,ಬಸಣ್ಣ ಕಾರ್ಯದರ್ಶಿ,ನಾಗಪ್ಪ,ಚಿತ್ತಯ್ಯ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ದೇವರ ಗುಡಿಯ ಅಣ್ಣತಮಂದಿರು ಮತ್ತು ಭಕ್ತರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.