ಉದ್ಯೋಗ ಗಿಟ್ಟಿಸಲು ಪದವಿ ಜತೆಗೆ ಕೌಶಲ್ಯವೂ ಬೇಕು

| Published : Feb 15 2025, 12:30 AM IST

ಉದ್ಯೋಗ ಗಿಟ್ಟಿಸಲು ಪದವಿ ಜತೆಗೆ ಕೌಶಲ್ಯವೂ ಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಪದವಿ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಕಲಿತುಕೊಂಡರೆ ಆಧುನಿಕ ಸಮಾಜದಲ್ಲಿ ಉದ್ಯೋಗ ಗಳಿಸಲು ಸಾಧ್ಯ. ಯಾವುದೇ ಪದವಿಗೆ ಉದ್ಯೋಗ ತಂದು ಕೊಡುವ ಶಕ್ತಿ ಇಲ್ಲ, ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆಗೆ ನಾವು ಓಡಬೇಕು ಆಗ ಮಾತ್ರ ನಾವು ಜೀವನದಲ್ಲಿ ಯಶಸ್ಸಿಯಾಗಲು ಸಾಧ್ಯ. ವಿದ್ಯಾರ್ಥಿಗಳಾದ ನೀವೂ ಪದವಿ ಜೊತೆಗೆ ನೀವು ಉದ್ಯೋಗ ಬಯಸುವ ಕ್ಷೇತ್ರದ ಅಗತ್ಯತೆಗೆ ಅನೂಕೂಲವಾಗುವ ರೀತಿಯಲ್ಲಿ ಕೌಶಲ್ಯಗಳನ್ನು ಕಲಿಯಬೇಕು ಎಂದು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಫಾಯಜ್ ಪಾಷ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪ್ರತಿ ವರ್ಷ ಭಾರತದಲ್ಲಿ ೮೫ ಲಕ್ಷ ವಿದ್ಯಾರ್ಥಿಗಳು ಪದವೀಧರರಾಗುತ್ತಿದ್ದಾರೆ. ಆದರೆ ಬದಲಾದ ಜಾಗತಿಕ ಲೋಕದಲ್ಲಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಕೌಶಲ್ಯಗಳ ಕೊರತೆ ಇದೆ. ಪದವಿ ನಂತರ ಕೌಶಲ್ಯಗಳನ್ನು ಪಡೆಯಲು ಸಾವಿರಾರು ರುಪಾಯಿ ಖರ್ಚು ಮಾಡಿ ಖಾಸಗಿ ಸಂಸ್ಥೆಗಳಿಂದ ತರಬೇತಿ ಪಡೆಯಬೇಕು. ಆದರೆ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ಆದು ದುಬಾರಿ ಆಗುತ್ತದೆ ಎಂದು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಫಾಯಜ್ ಪಾಷ ತಿಳಿಸಿದರು.

ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಎಚ್.ಡಿ. ದೇವೇಗೌಡ ಸರ್ಕಾರಿ ಪದವಿ ಕಾಲೇಜು ಹಾಗೂ ಬಜಾಜ್ ಫೈನಾನ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹದಿನೈದು ದಿನಗಳ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪದವಿ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಕಲಿತುಕೊಂಡರೆ ಆಧುನಿಕ ಸಮಾಜದಲ್ಲಿ ಉದ್ಯೋಗ ಗಳಿಸಲು ಸಾಧ್ಯ. ಯಾವುದೇ ಪದವಿಗೆ ಉದ್ಯೋಗ ತಂದು ಕೊಡುವ ಶಕ್ತಿ ಇಲ್ಲ, ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆಗೆ ನಾವು ಓಡಬೇಕು ಆಗ ಮಾತ್ರ ನಾವು ಜೀವನದಲ್ಲಿ ಯಶಸ್ಸಿಯಾಗಲು ಸಾಧ್ಯ. ವಿದ್ಯಾರ್ಥಿಗಳಾದ ನೀವೂ ಪದವಿ ಜೊತೆಗೆ ನೀವು ಉದ್ಯೋಗ ಬಯಸುವ ಕ್ಷೇತ್ರದ ಅಗತ್ಯತೆಗೆ ಅನೂಕೂಲವಾಗುವ ರೀತಿಯಲ್ಲಿ ಕೌಶಲ್ಯಗಳನ್ನು ಕಲಿಯಬೇಕು, ಅಂತಹ ಕೌಶಲ್ಯಗಳನ್ನು ಎಚ್.ಡಿ. ದೇವೇಗೌಡ ಸರ್ಕಾರಿ ಪದವಿ ಕಾಲೇಜು ಯಾವುದೆ ಶುಲ್ಕವಿಲ್ಲದೆ ಉಚಿತವಾಗಿ ತರಬೇತಿ ನೀಡಲು ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿ, ವಿದ್ಯಾರ್ಥಿಗಳಾದ ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಾಂಶುಪಾಲ ಡಾ. ವಿಶ್ವನಾಥ ಕೆ.ಸಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವುದು ಮುಖ್ಯವಲ್ಲ ಆ ಪದವಿಯನ್ನು ಹೇಗೆ ಪಡೆಯುತ್ತಿದ್ದೇನೆ ಎಂಬುವುದು ಮುಖ್ಯ. ಪದವಿ ಪಡೆದು ಹೊರಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಗೆ ನಾವು ಯಾವುದಾದರೊಂದು ಉದ್ಯೋಗ ಗಳಿಸಿಕೊಳ್ಳಬಲ್ಲೇ ಅನಿಸಿದರೆ ಆಗ ನಿಜವಾಗಿಯೂ ಆ ಶಿಕ್ಷಣಕ್ಕೆ ಹಾಗೂ ಆ ಶಿಕ್ಷಣ ನೀಡಿದ ಸಂಸ್ಥೆಗೆ ಗೌರವ ದೊರೆಯುತ್ತದೆ, ನಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಆಯೋಜಿಸುತ್ತಿದ್ದ ಸರ್ಟಿಫಿಕೇಟ್ ಕೋರ್ಸ್ ತರಬೇತಿಯನ್ನು ಎಲ್ಲ ಅಧ್ಯಾಪಕರ ಸಲಹೆಯ ಮೇರೆಗೆ ಸ್ನಾತಕ ಪದವಿ ವಿದ್ಯಾರ್ಥಿಗಳಿಗೂ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯುಳ್ಳಯವರಾಗಿದ್ದು, ರೈತಾಪಿ ವರ್ಗದವರಾಗಿದ್ದರೆ, ಇವರಿಗೂ ಕಾರ್ಪೋರೇಟ್ ಕ್ಷೇತ್ರದಲ್ಲಿ ದುಡಿಯಬೇಕು ಎಂಬ ಮನಸ್ಸಿದೆ. ಆದರೆ ಕೌಶಲ್ಯಗಳ ಕೊರತೆ ಇದೆ. ಆ ಕೊರತೆಯನ್ನು ನೀಗಿಸಲು ನಾವು ಬಜಾಜ್ ಫೈನಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಈ ತರಬೇತಿ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಮಾದೇಶ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಲೋಹಿತ್ ಜಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭುವನೇಂದ್ರ ಎಸ್.ಕೆ., ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶಿವಕುಮಾರ್ ಪಿ.ಆರ್., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಹೇಶ್ ಕೆ.ಎಸ್., ಧರ್ಮೋಜೀರಾವ್, ಪ್ರಹ್ಲಾದ್ ಹಾಗೂ ತರಭೇತುದಾರರಾದ ವಿಶ್ವನಾಥ್ ಹಾಜರಿದ್ದರು.