ಜಿಲ್ಲೆಯಲ್ಲಿ ಹೆಚ್ಚಿದ ಹಸಿರೀಕರಣಕ್ಕೆ ಒತ್ತು ನೀಡಿದ ಜಿಪಂ, ತಾಪಂ

| Published : Nov 13 2024, 12:50 AM IST

ಸಾರಾಂಶ

ಹಸಿರು ಗ್ರಾಮ ಕನಸಿನ ಯೋಜನೆ ಸಾಕಾರಕ್ಕೆ ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳು ಕೂಡ ಕಂಕಣಬದ್ಧವಾಗಿವೆ. ಹೀಗಾಗಿ 5 ತಾಲೂಕಿನಲ್ಲಿ ಸಸ್ಯಕ್ಷೇತ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ 211 ಗ್ರಾಮ ಪಂಚಾಯತಿಗಳನ್ನೂ ಹಸಿರು ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಸದಾ ಬಿಸಿಲು ಹಾಗೂ ಧೂಳಿನಿಂದ ಕೂಡಿರುವ ವಿಜಯಪುರ ಜಿಲ್ಲೆಯಲ್ಲಿ ಅರಣ್ಯೀಕರಣ ಮಾಡುವ ಮೂಲಕ ಹಸಿರಿನಿಂದ ಕಂಗೊಳಿಸುವಂತಾಗಬೇಕು ಎಂದು ಜಿಪಂ ಹಾಗೂ ಅರಣ್ಯ ಇಲಾಖೆ ಸಂಕಲ್ಪ ಮಾಡಿವೆ. ಹಸಿರು ಗ್ರಾಮ ಕನಸಿನ ಯೋಜನೆ ಸಾಕಾರಕ್ಕೆ ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳು ಕೂಡ ಕಂಕಣಬದ್ಧವಾಗಿವೆ. ಹೀಗಾಗಿ 5 ತಾಲೂಕಿನಲ್ಲಿ ಸಸ್ಯಕ್ಷೇತ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ 211 ಗ್ರಾಮ ಪಂಚಾಯತಿಗಳನ್ನೂ ಹಸಿರು ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಜಿಲ್ಲೆಯಲ್ಲಿ 1794.76 ಹೆಕ್ಟೇರ್ ಅರಣ್ಯ ಪ್ರದೇಶದ ವಿಸ್ತೀರ್ಣವಿದೆ. ಇದರಲ್ಲಿ 1053.29 ಹೆಕ್ಟೇರ್ ಸರ್ಕಾರಿ ಜಮೀನಿದ್ದು, 754.52 ಹೆಕ್ಟೇರ್‌ನಲ್ಲಿ 2.49 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಗೆ 2024-25ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 4.50 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಈಗಾಗಲೇ 2.66 ಲಕ್ಷ ಮಾನವ ದಿನಗಳನ್ನು ಪೂರೈಸಲಾಗಿದೆ.

ಐದು ಸಸ್ಯ ಕ್ಷೇತ್ರಗಳು:

ವಿಜಯಪುರ ತಾಲೂಕಿನ ಹಡಗಲಿ, ಇಂಡಿ ತಾಲೂಕಿನ ಬಬಲಾದ, ಬ.ಬಾಗೇವಾಡಿ ತಾಲೂಕಿನ ಮಣೂರ, ಸಿಂದಗಿ ತಾಲೂಕಿನ ಬಬಲೇಶ್ವರ ಹಾಗೂ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮ ಸೇರಿ 5 ಸಸ್ಯ ಕ್ಷೇತ್ರಗಳಿವೆ. ಇದರಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 56,468 ಸಸಿಗಳನ್ನು ಹಾಗೂ ಇತರೆ ಯೋಜನೆಗಳಡಿ 55,360 ಸಸಿಗಳನ್ನು ಬೆಳೆಸಲಾಗಿದೆ. ಈಗಾಗಲೇ ರೈತರಿಗೆ ಹಾಗೂ ಸಾರ್ವಜನಿಕರಿಗೆ 60,705 ಸಸಿಗಳನ್ನು ವಿತರಿಸಲಾಗಿದೆ. ಇನ್ನೂ 1,00,748 ಸಸಿಗಳನ್ನು ಬೆಳೆಸಿ ನಾಟಿ ಮಾಡಲಾಗುವುದು.

ಅರಣ್ಯ ಇಲಾಖೆಯಿಂದ ಶ್ರೀಗಂಧ, ಹೊಂಗೆ, ಬೇವು, ಸೀತಾಫಲ, ನೆಲ್ಲಿ, ಮಹಾಗಣಿ, ಹೆಬ್ಬೇವು, ನಿಂಬೆ, ಕಾಡುಬಾದಾಮಿ, ಸಾಗವಾನಿ, ರಕ್ತಚಂದನ ಸೇರಿದಂತೆ ಇತರೆ 22 ಬಗೆಯ 2.42 ಲಕ್ಷ ಸಸಿಗಳನ್ನು ಪೋಷಣೆ ಮಾಡಿ 2024-25ನೇ ಸಾಲಿಗೆ ರೈತರಿಗೆ ರಿಯಾಯಿತಿ ದರಗಳಲ್ಲಿ ಸುಮಾರು 2,42,000 ಸಸಿಗಳನ್ನು ವಿತರಿಸಲಾಗಿದೆ.

ನೆಡುತೋಪಿನಿಂದ ಹಲವು ಪ್ರಯೋಜನಗಳು:

ಇಳಿಜಾರಿಗೆ ಅಡ್ಡಲಾಗಿ ಸಸಿಗಳನ್ನು ನೆಟ್ಟಿದ್ದರಿಂದ ವೇಗವಾಗಿ ಬೀಸುವ ಗಾಳಿ, ರಭಸವಾಗಿ ಹರಿಯುವ ನೀರಿನಿಂದ ಮಣ್ಣಿನ ಸವಕಳಿ ತಡೆಯುವುದು. ಮಳೆಗಾಲದಲ್ಲಿ ಮಣ್ಣು ಹರಿದು ಕೆರೆ, ಹಳ್ಳಗಳಿಗೆ ಜಾರಿ ಶೇಖರಣೆ ಆಗುವುದನ್ನು ತಪ್ಪಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಕಂದಕ ಬದುಗಳು ಮತ್ತು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳ ನಿರ್ಮಾಣ, ತೆಗ್ಗು ಪ್ರದೇಶದಲ್ಲಿ ಹೊಂಡಗಳನ್ನು ನಿರ್ಮಿಸಿ ನೀರಿನ ಶೇಖರಣೆ ಮತ್ತು ಅಂತರ್ಜಲ ಹೆಚ್ಚಿಸಲಾಗಿದೆ. ಇದರಿಂದಾಗಿ ರೈತರ ಕೊಳವೆಬಾವಿ, ಬಾವಿಗಳು ಮತ್ತು ಕೆರೆ-ಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ.

---------------ಅರಣ್ಯೀಕರಣದಿಂದಾಗಿ ಈ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಹೆಚ್ಚುತ್ತದೆ. ಅಲ್ಲದೆ, ಗಿಡ-ಮರಗಳು ಮೋಡಗಳ ಆಕರ್ಷಣೆಯಿಂದ ಈ ಭಾಗದ ಭೌಗೋಳಿಕ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಬೀಳುವುದು. ರೈತರು ಬೆಳೆದ ಬೆಳೆಗಳಿಗೆ ಸಾಕಷ್ಟು ನೀರು ಮತ್ತು ಬೋರ್‌ವೆಲ್, ತೆರೆದ ಬಾವಿಗಳು ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ರೈತರು ಹೆಚ್ಚಿನ ಇಳುವರಿ ಮತ್ತು ಅಧಿಕ ಲಾಭ ಪಡೆಯುತ್ತಿದ್ದಾರೆ.

- ರಿಷಿ ಆನಂದ, ಜಿಲ್ಲಾ ಪಂಚಾಯತಿ ಸಿಇಓ.

ಕಳೆದ ವರ್ಷದಿಂದ ಅರಣ್ಯ ಪ್ರದೇಶ, ರಸ್ತೆಬದಿ, ಸಂಘ- ಸಂಸ್ಥೆಗಳು ಸೇರಿದಂತೆ ಮುಂತಾದವುಗಳಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕುಂದಿರುವ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸುವತ್ತ ಅರಣ್ಯ ಇಲಾಖೆಯು ಮಹತ್ವದ ಪಾತ್ರವಹಿಸುತ್ತಿದೆ. ಇದಕ್ಕೆ ಜಿಲ್ಲೆಯಲ್ಲಿ ಎಲ್ಲರ ಸಹಕಾರವೂ ದೊರಕುತ್ತಿದೆ.

- ವನೀತಾ.ಆರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ.