ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನಸಭೆ
ಹೆಬ್ಬಾಳದ ಅಮಾನಿಕೆರೆ ಗ್ರಾಮದಲ್ಲಿ ರೈತರಿಂದ ವಶಪಡಿಸಿಕೊಂಡಿದ್ದ 45.5 ಎಕರೆ ಜಾಗವನ್ನು ಸಮಗ್ರ ಬಹುಮಾದರಿ ಸಂಯೋಜಿತ ಮೂಲಸೌಕರ್ಯ ಅಭಿವೃದ್ಧಿಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್) ನೀಡುವಂತೆ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಬುಧವಾರ ಗಮನ ಸೆಳೆಯುವ ಸೂಚನೆಯಡಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಹೆಬ್ಬಾಳದ ಅಮಾನಿಕೆರೆ ಗ್ರಾಮದ ಕೋಟ್ಯಂತರ ರು. ಮೌಲ್ಯದ 45.5 ಎಕರೆ ಜಮೀನನ್ನು ಸರ್ಕಾರ ಭೂಸ್ವಾಧೀನಪಡಿಸಿಕೊಂಡಿದೆ. ಈ ಜಾಗವನ್ನು ಮಲ್ಟಿ ಮಾಡೆಲ್ ಟ್ರಾನ್ಸೋಪೋಟೇಷನ್ ಹಾಗೂ ಸ್ಟಾಬ್ಲಿಂಗ್ ಡಿಪೋಟ್ ಮತ್ತು ಸಬ್ ಅರ್ಬನ್ ರೈಲು, ಮೆಟ್ರೋ ಹಾಗೂ ಬಿಎಂಟಿಸಿಯನ್ನು ಜೋಡಣೆ ಮಾಡುವ ಸಮಗ್ರ ಬಹುಮಾದರಿ ಸಂಯೋಜಿತ ಮೂಲಸೌಕರ್ಯ ಅಭಿವೃದ್ಧಿ ಉದ್ದೇಶಕ್ಕಾಗಿ ತಮಗೆ ನೀಡುವಂತೆ ಬಿಎಂಆರ್‌ಸಿಎಲ್ ಕೇಳಿತ್ತು.
2020ರಲ್ಲಿ ನಡೆದ ಹೈ ಪವರ್ ಕಮಿಟಿ ಸಭೆಯಲ್ಲಿ 45.5 ಎಕರೆ ಜಾಗವನ್ನು ಬಿಎಂಆರ್‌ಸಿಎಲ್‌ಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇವಲ 9 ಎಕರೆ ಜಾಗವನ್ನು ಬಿಎಂಆರ್‌ಸಿಎಲ್‌ಗೆ ನೀಡಿದ್ದಾರೆ. ಹೆಬ್ಬಾಳದ ಈ ಜಾಗ ಬಹುಕೋಟಿ ಮೌಲ್ಯದ್ದು. ಏರ್‌ಪೋರ್ಟ್‌ಗೆ ಹೋಗುವ ರೈಲುಗಳು, ಜೆ.ಪಿ.ನಗರ-ಹೆಬ್ಬಾಳ ಮೆಟ್ರೋ ಲೈನ್, ಸಿಲ್ಕ್ ಬೋರ್ಡ್-ಏರ್‌ಪೋರ್ಟ್ ಮೆಟ್ರೋ ಲೈನ್, ಸರ್ಜಾಪುರ-ಹೆಬ್ಬಾಳ ಮೆಟ್ರೋ ಲೈನ್ ಸಂದಿಸುವ ಜಾಗ ಇದಾಗಿದೆ. ಇದನ್ನು ದೊಡ್ಡ ಟ್ರಾನ್ಸ್‌ಪೋರ್ಟ್ ಹಬ್ ಮಾಡಬಹುದಾಗಿದೆ. ಇದರಿಂದ ಬೆಂಗಳೂರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಯಾವುದೋ ಒತ್ತಡಕ್ಕೆ ಮಣಿದು ಈ ಜಾಗವನ್ನು ಬಹುಮಹಡಿ ಕಾಂಪ್ಲೆಕ್ಸ್ ಹಾಗೂ ಬಿಲ್ಡರ್ಸ್‌ಗೆ ನೀಡಲು ಹಿಂಬಾಗಿಲ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಸಂಪೂರ್ಣ ಜಾಗವನ್ನು ಉಳಿಸಿಕೊಂಡು ಟ್ರಾನ್ಸ್ ಪೋರ್ಟ್ ಹಬ್ ಮಾಡಲು ಬಿಎಂಆರ್‌ಸಿಎಲ್‌ಗೆ ನೀಡಬೇಕು. ಸರ್ಕಾರದ ಉತ್ತರದಲ್ಲಿ ಕಾನೂನು ತೊಡಕಿದೆ ಎಂದು ಹೇಳಿದೆ. ಸರ್ಕಾರದಲ್ಲಿ ಕಾನೂನು ವಿಭಾಗವಿದ್ದು, ತೊಡಕುಗಳನ್ನು ನಿವಾರಿಸಿ 45.5 ಎಕರೆ ಜಾಗವನ್ನು ಬಿಎಂಆರ್‌ಸಿಎಲ್‌ಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.