ಜನರ ಸೇವೆಗೆ ಈ ಬಾರಿ ಅವಕಾಶ ನೀಡಿ: ಗೀತಾ

| Published : Mar 28 2024, 12:46 AM IST

ಸಾರಾಂಶ

ಈಡಿಗ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ಧೇಶಿಸಿ ಮಾತನಾಡಿ, ತಂದೆ ಬಂಗಾರಪ್ಪನವರ ಹೋರಾಟದ ರಕ್ತ ನನ್ನಲ್ಲಿ ಇದೆ. ಹಿಂದಿನ ಬಾರಿ ಜೆಡಿಎಸ್ ನಿಂದ ನಿಂತು ಚುನಾವಣೆ ಗೆಲ್ಲಲು ಆಗಲಿಲ್ಲ. ಈ ಬಾರಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ.

ಕನ್ನಡಪ್ರಭ ವಾರ್ತೆ ಹೊಸನಗರ

ಮನೆಮಗಳು ತವರಿಗೆ ಬಂದಿದ್ದಾಳೆ ಮತದ ಆಶೀರ್ವಾದ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮನವಿ ಮಾಡಿದರು.

ಇಲ್ಲಿನ ಈಡಿಗ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ಧೇಶಿಸಿ ಮಾತನಾಡಿ, ತಂದೆ ಬಂಗಾರಪ್ಪನವರ ಹೋರಾಟದ ರಕ್ತ ನನ್ನಲ್ಲಿ ಇದೆ. ಹಿಂದಿನ ಬಾರಿ ಜೆಡಿಎಸ್ ನಿಂದ ನಿಂತು ಚುನಾವಣೆ ಗೆಲ್ಲಲು ಆಗಲಿಲ್ಲ. ಈ ಬಾರಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದ ಕೋರಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಈ ಬಾರಿ ಹೊಸ ಬದಲಾವಣೆ ಗಾಳಿ ಬೀಸುತ್ತಿದೆ. ಬಗರ್ ಹುಕುಂ ರೈತರ, ಶರಾವತಿ ಸಂತ್ರಸ್ತರ ಹಾಗೂ ಬಡವರ ಪರ ಲೋಕಸಭೆಯಲ್ಲಿ ಒಂದೇ ಒಂದು ವಿಚಾರ ಮಂಡಿಸದ ಈಗಿನ ಸಂಸದರ ಮಾಜಿ ಮಾಡುವ ಅವಕಾಶ ನಿಮ್ಮಲಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಗೀತಾ ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ಪಡೆ ನಂಬಿ ಬಂದಿದ್ದಾರೆ. ಅವರಿಗೆ ಅನ್ಯಾಯ ಸಲ್ಲದು ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಖಜಾನೆ ಲೂಟಿ ಮಾಡಿದೆ. ಚುನಾವಣೆ ಬಾಂಡ್ ಎಂಬುದು ಶತಮಾನದ ದೊಡ್ಡ ಹಗರಣ ಎಂದರು.

ವೇದಿಕೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್, ತಾಲೂಕು ಅಧ್ಯಕ್ಷ ಚಂದ್ರಮೌಳಿ, ಮಹಿಳಾ ಅಧ್ಯಕ್ಷ ಸುಮಾ ಸುಬ್ರಹ್ಮಣ್ಯ, ಪಟ್ಟಣ ಘಟಕದ ಅಧ್ಯಕ್ಷ ಗುರುರಾಜ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಶಾಸಕ ಆಯನೂರು ಮಂಜುನಾಥ್, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳಿದ್ದರು.