ಸಾರಾಂಶ
ಭಟ್ಕಳ: ಮಕ್ಕಳಿಗೆ ಮೌಲ್ಯ ಮತ್ತು ಸಂಸ್ಕಾರಯುತ ಶಿಕ್ಷಣ ನೀಡಿ ಧರ್ಮ, ಧಾರ್ಮಿಕತೆ ಮತ್ತು ದೇಶಾಭಿಮಾನದ ಭಾವನೆ ಮೂಡಿಸಬೇಕು ಎಂದು ನಾಮಧಾರಿ ಸಮಾಜದ ಕುಲಗುರುಗಳು ಹಾಗೂ ಧರ್ಮಸ್ಥಳದ ಉಜಿರೆಯ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಮಂಗಳವಾರ ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ವರ್ಧಂತಿ ಮತ್ತು ಪಾಲಕಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದ್ವೇಷ, ಕಲುಷಿತ ಭಾವನೆ ದೂರ ಇಟ್ಟು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಿದರೆ ಸಮಾಜ ಮತ್ತಷ್ಟು ಎತ್ತರಕ್ಕೇರಲು ಸಾಧ್ಯವಾಗುತ್ತದೆ. ಉತ್ತರ ಭಾರತದ ನಾಗಾಸಾಧುಗಳ ನಿರಂತರ 15 ವರ್ಷಗಳ ಸಂಪರ್ಕ ಹಾಗೂ ನಾವು ಮಾಡುವ ಧರ್ಮಜಾಗೃತಿ ಕಾರ್ಯವನ್ನು ಗುರುತಿಸಿ ಮಹಾಕುಂಭಮೇಳದಲ್ಲಿ ಜುನಾ ಆಖಾಡದಿಂದ ನಮಗೆ ಮಹಾಮಂಡಲೇಶ್ವರ ಪದವಿ ನೀಡಿ ಗೌರವಿಸಿದ್ದಾರೆ.
ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಈ ಗೌರವ ನಮಗೆ ದೊರಕಿರುವುದು ಸಮಸ್ತ ನಾಮಧಾರಿ ಸಮಾಜಕ್ಕೆ ಸಿಕ್ಕಂತಹ ಗೌರವವಾಗಿದೆ ಎಂದ ಅವರು, ಇದೊಂದು ರಾಷ್ಟ್ರಮಟ್ಟದ ಗೌರವವಾಗಿದ್ದು, ಇದರಿಂದ ದೇಶಾದ್ಯಂತ ಧರ್ಮ ಜಾಗೃತಿ ಮತ್ತು ನಾರಾಯಣ ಗುರು ಸಿದ್ಧಾಂತ ಪಸರಿಸುವಂತೆ ಮಾಡಲು ನೆರವಾಗಲಿದೆ ಎಂದರು.ಗುರುಮಠ ಮತ್ತ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ದೇವಸ್ಥಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಯಶಸ್ವಿಗೆ ಸಮಾಜದವರು ಉತ್ತಮ ರೀತಿಯ ಸಹಕಾರ ನೀಡುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಸ್ವಾಮೀಜಿಯವರ ಚಾತುರ್ಮಾಸ್ಯ ಕಾರ್ಯಕ್ರಮ ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ನೆರವೇರಿಸಿರುವುದು ಹೆಮ್ಮೆಯ ವಿಚಾರ. ಅದರಂತೆ ನಮ್ಮ ಸಮಾಜದ ಗುರುಗಳಿಗೆ ಕುಂಭಮೇಳದಲ್ಲಿ ಮಹಾಮಂಡಲೇಶ್ವರದಂಥ ಅತ್ಯುನ್ನತ ಗೌರವ ಲಭಿಸಿರುವುದು ಇಡೀ ನಮ್ಮ ಸಮಾಜವೇ ಹೆಮ್ಮೆ ಪಡುವಂತಾಗಿದೆ ಎಂದರು.
ಗೌರವಾಧ್ಯಕ್ಷ ಕೃಷ್ಣಾ ನಾಯ್ಕ, ಪ್ರದಾನ ಕಾರ್ಯದರ್ಶಿ ಡಿ.ಎಲ್. ನಾಯ್ಕ, ಸದಸ್ಯರಿದ್ದರು. ನಾಮಧಾರಿ ಸಮಾಜದ ಉಪಾಧ್ಯಕ್ಷ ಎಂ.ಕೆ. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಕೆ.ಆರ್. ನಾಯ್ಕ ವಂದಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಗಂಗಾಧರ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಳೆದ 35 ವರ್ಷಗಳಿಂದ ದೇವಸ್ಥಾನದ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಸಂಕಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದರ ಗುರುತಿಸುವ ಕಾರ್ಯವಾಗಲಿಹೊನ್ನಾವರ: ಹೆಚ್ಚು ಪ್ರಚಾರವಿಲ್ಲದ, ಎಲೆಮರೆಯ ಕಾಯಿಯಂತಿರುವ ಜಿಲ್ಲೆಯ ಯಕ್ಷಗಾನ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ತಿಳಿಸಿದರು.ಮಾಳ್ಕೋಡದಲ್ಲಿ ಆಯೋಜಿಸಿದ್ದ ಮಾಳ್ಕೋಡ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನವು ಶ್ರೇಷ್ಠವಾದ ಕಲೆ. ಯಕ್ಷಗಾನಕ್ಕೆ ಜಿಲ್ಲೆಯ ಕೊಡುಗೆ ಬಹು ದೊಡ್ಡದು. ಯಕ್ಷಗಾನ ಕಲಾವಿದರ ಅಭಿವೃದ್ಧಿಗೆ ಎಲ್ಲರೂ ಸಹಕಾರವನ್ನು ನೀಡಬೇಕು ಎಂದರು.ಕೊಳಲು ತಯಾರಕ, ಸಿದ್ದಾಪುರದ ಮಂಜುನಾಥ ಹೆಗಡೆ ನೆಟ್ಗಾರ, ಯಕ್ಷಗಾನ ಕಲಾವಿದ ಅಶೋಕ್ ಭಟ್, ಸಿದ್ದಾಪುರ, ಹಿರಿಯ ಕೊನೆ ಗೌಡ ಹನುಮಂತ ಗೌಡ ಮಾಳ್ಕೋಡ ಅವರನ್ನು ಸನ್ಮಾನಿಸಲಾಯಿತು. ಸಹಕಾರಿ ಧುರೀಣ ಕೇಶವ ನಾಯ್ಕ ಬಳ್ಕೂರು, ಶಂಭು ಬೈಲಾರ ಇದ್ದರು. ಸಂಗೀತ ಕಾರ್ಯಕ್ರಮದಲ್ಲಿ ಗುರುಪ್ರಸಾದ ಹೆಗಡೆ ಕೊಳಲು ವಾದನ, ಸುಮಾ ಹೆಗಡೆ ಅವರ ಸಂತೂರ್ ಹಾಗೂ ಅಕ್ಷಯ ಹೆಗಡೆ ಅಂಸಳ್ಳಿ ತಬಲಾ ಸಾಥ್ ಜನಮೆಚ್ಚುಗೆ ಗಳಿಸಿತು.ಬಳಿಕ ನಡೆದ ಕೀಚಕ ವಧೆ ಯಕ್ಷಗಾನದಲ್ಲಿ ಕೀಚಕನಾಗಿ ಜಗದೀಶ ಹೆಗಡೆ ಮಾಳಕೋಡ, ಬಲಭೀಮನಾಗಿ ಲಕ್ಷ್ಮಿನಾರಾಯಣ ಹೆಗಡೆ ಶಿರಗುಣಿ, ಸೈರೇಂಧ್ರಿಯಾಗಿ ಜಯರಾಮ ಕೊಠಾರಿ, ನಂತರ ನಡೆದ ಇನ್ನೊಂದು ಆಖ್ಯಾನ ಚಂದ್ರಾವಳಿ ವಿಲಾಸದಲ್ಲಿ ಚಂದ್ರಾವಳಿಯಾಗಿ ವಂಡಾರು ಗೋವಿಂದ, ಕೃಷ್ಣನಾಗಿ ರಾಜೇಶ್ ಭಂಡಾರಿ ಗುಣವಂತೆ, ಚಂದಗೋಪನಾಗಿ ಅಶೋಕ್ ಬಟ್ ಸಿದ್ದಾಪುರ, ಅಜ್ಜಿಯಾಗಿ ಶ್ರೀಧರ ಹೆಗಡೆ ಚಪ್ಪರಮನೆ ಮನೋಜ್ಞವಾಗಿ ಅಭಿನಯಿಸಿದರು.ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸರ್ವೇಶ್ವರ ಮೂರೂರು, ಸುಬ್ರಹ್ಮಣ್ಯ ಭಂಡಾರಿ ಗುಣವಂತೆ, ಪರಮೇಶ್ವರ ಭಂಡಾರಿ ಕರ್ಕಿ, ರಾಘವೇಂದ್ರ ಹೆಗಡೆ ಯಲ್ಲಾಪುರ ಸಹಕರಿಸಿದರು. ಸುಜಾತಾ ಹೆಗಡೆ, ಮಾನಸ ಮತ್ತು ಗೌರೀಶ ಹೆಗಡೆ ಸಂಯೋಜಿಸಿದರು.