ಸಾರಾಂಶ
ಮಕ್ಕಳು ದೇಶದ ಸಂಪತ್ತು, ಅವರಿಗೆ ಮಾನವೀಯ ಮೌಲ್ಯದೊಂದಿಗೆ ಶಿಕ್ಷಣ ನೀಡಬೇಕು. ಅಂತಹ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.
ಲಕ್ಷ್ಮೇಶ್ವರ: ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ, ಸಂಪ್ರದಾಯ ಕಲಿಸಬೇಕು. ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.
ಸಮೀಪದ ಶಿಗ್ಲಿಯ ಸಂಗಮೇಶ್ವರ ರೂರಲ್ ಡೆವಲಪ್‌ಮೆಂಟ್ ಮತ್ತು ಎಜ್ಯುಕೇಶನ್ ಸೊಸೈಟಿಯ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉಳ್ಳಟ್ಟಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪಾರಿತೋಷಕ ವಿತರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ದೇಶದ ಸಂಪತ್ತು, ಅವರಿಗೆ ಮಾನವೀಯ ಮೌಲ್ಯದೊಂದಿಗೆ ಶಿಕ್ಷಣ ನೀಡಬೇಕು. ಅಂತಹ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಮತ್ತು ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಪ್ರದಾಯ ಕಲಿಸಬೇಕು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಸಂಪ್ರದಾಯಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಗಂಗಾಧರ ಶಿರಹಟ್ಟಿ ಮಾತನಾಡಿ, ಶಿಕ್ಷಕರು ಪ್ರಸ್ತುತ ಶಿಕ್ಷಣಕ್ಕೆ ತಕ್ಕಂತೆ ಬದಲಾವಣೆಯಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ತಂದೆ-ತಾಯಿಯರು ಮಕ್ಕಳ ಜತೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಅವರ ಉಜ್ವಲ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಪಾಲಕರು ಮಕ್ಕಳಿಗೆ ಮೊಬೈಲ್ ಮತ್ತು ಟಿವಿ ಬಳಕೆ ಮಾಡಲು ಆಸ್ಪದ ನೀಡದೆ ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು ಎಂದು ಹೇಳಿದರು.
ಈ ವೇಳೆ ದೊಡ್ಡೂರ ಕ್ಲಸ್ಟರ್‌ನ ಸಿಆರ್‌ಪಿ ಶಿವಾನಂದ ಅಸುಂಡಿ ಮಾತನಾಡಿ, ಪರಿಶ್ರಮದಿಂದ ಓದಿದಲ್ಲಿ ಗುರಿ ಮುಟ್ಟಲು ಸಾಧ್ಯ. ಆದ್ದರಿಂದ ಮಕ್ಕಳು ಓದಿನ ಕಡೆ ಗಮನ ಹರಿಸಿ ಗುರಿ ಮುಟ್ಟಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಅಧ್ಯಕ್ಷ ರಾಮೇಶ್ವರ ಶಿರಹಟ್ಟಿ, ರಾಜಶೇಖರ ಶಿರಹಟ್ಟಿ, ಫಕ್ಕೀರೇಶ್ವರ ಶಿರಹಟ್ಟಿ, ಮಲ್ಲೇಶಪ್ಪ ದಲಾಲ್, ಹಾಗೂ ಪಾಲಕರ ಪರವಾಗಿ ಸಂತೋಷಕುಮಾರ ಕಳ್ಳಳ್ಳಿ ಹಾಗೂ ದಾಕ್ಷಾಯಿಣಿ ಉಂಡಿ ಮತ್ತು ಶಾಲಾ ಶಿಕ್ಷಕಿಯರಾದ ಅನಿತಾ ಬಳ್ಳಾರಿ, ವಿಜಯಲಕ್ಷ್ಮೀ ರಗಟಿ, ಸಂಗೀತಾ ಕೊಂಚಿಗೇರಿ, ಅನ್ನಪೂರ್ಣಾ ಗುಡ್ಡಿಮಠ, ಉಮಾ ಅಳಲಗೇರಿ, ದೀಪಾ ಪವಾಡಶೆಟ್ಟರ, ಭಾರತಿ ದೇಸಾಯಿ, ದೀಪಾ ತಂಬ್ರಳ್ಳಿ, ಅನಿತಾ ದೂಪದ ಹಾಗೂ ಇತರರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯಿನಿ ರತ್ನಾ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಮೋಕ್ಷಾ ಪಟೇಲ್ ಸ್ವಾಗತಿಸಿದರು. ರಾಜೇಶ್ವರಿ ನವಲಿ ವಂದಿಸಿದರು.