ಸಾರಾಂಶ
ಯಲ್ಲಾಪುರ:
ಸಂಘ-ಸಂಸ್ಥೆಗಳ ಆರಂಭದಲ್ಲಿ ಮುನ್ನೆಲೆಯಲ್ಲಿರುವ ಸದಸ್ಯರೇ ಮುಂದಿನ ದಿನಗಳಲ್ಲಿಯೂ ಅವುಗಳನ್ನು ಉಳಿಸಿ, ಬೆಳೆಸುವುದು ಜವಾಬ್ದಾರಿಯ ಕೆಲಸ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿದರು.ಪಟ್ಟಣದ ವೆಂಕಟರಮಣ ಮಠದಲ್ಲಿ ಯಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಯುವ ನಾಮಧಾರಿ ಸಂಘಗಳು ಹಮ್ಮಿಕೊಂಡಿದ್ದ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ನಮ್ಮಲ್ಲಿರುವ ಅನೇಕ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳಿರದ ಕಾರಣ ಪ್ರತಿಭಾ ವಿಕಾಸಕ್ಕೆ ಅಡ್ಡಿಯಾಗುತ್ತಿದೆ. ಇಂತಹ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಾಗಿದೆ. ನಮ್ಮ ಸಂಘವು ಧರ್ಮ, ಜಾತಿ ಮುಂತಾದ ಅಂಶ ಪರಿಗಣಿಸದೇ ಬಡವರಿಗೆ ಅನುಕೂಲತೆ ಕಲ್ಪಿಸುವ ಗುರಿ ಹೊಂದಿದೆ ಎಂದ ಅವರು, ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ಕೊಡಿಸಿ, ಆಗ ಅಭಿವೃದ್ಧಿ ತಾನೇ ಆಗುತ್ತದೆ ಎಂದರು.ಶಾಸಕ ಭೀಮಣ್ಣ ನಾಯಕ ಮಾತನಾಡಿ, ಸಂಘಟನೆ ಎಂದಿಗೂ ಯಾರೊಬ್ಬರ ಸ್ವತ್ತಲ್ಲ. ಇದು ಇಡೀ ಸಮಾಜದ ಜನರ ಹೊಣೆಗಾರಿಕೆಯಾಗಿದೆ. ಇದನ್ನು ಜನರು ಅರಿತರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಸಮಾಜದ ಸಮಗ್ರ ಏಳಿಗೆ ಜವಾಬ್ದಾರಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಶಿಕ್ಷಣ ಮತ್ತು ಸಂಸ್ಕಾರಗಳಿಂದ ಮಾತ್ರ ಸಾಮಾಜಿಕ ಸುಧಾರಣೆ ಸಾಧ್ಯ ಎಂದ ಅವರು, ನಮ್ಮ ಸಮಾಜದ ಜನರನ್ನು ಗೌರವಿಸುವ ರೀತಿಯೇ ಉಳಿದವರನ್ನು ಗೌರವಿಸುವ ಪರಿಪಾಠ ನಮ್ಮದಾಗಬೇಕು ಎಂದರು.ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ನಾಯ್ಕ, ನಾಗೇಶ ನಾಯ್ಕ ಕಾಗಾಲ, ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ, ಈಶ್ವರ ನಾಯ್ಕ ಭಟ್ಕಳ ಮಾತನಾಡಿದರು.
ಭೂಮಿಕಾ ನಾಯ್ಕರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗುರು ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದರು. ಸಂಘದ ತಾಲೂಕಾಧ್ಯಕ್ಷ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ನಾಯ್ಕ ನಿರ್ವಹಿಸಿದರು. ನರ್ಮದಾ ನಾಯ್ಕ ವಂದಿಸಿದರು. ಇದೇ ವೇಳೆ ಶಾಸಕರಾದ ಬಿ.ಕೆ. ಹರಿಪ್ರಸಾದ ಮತ್ತು ಭೀಮಣ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಶೈಕ್ಷಣಿಕ ಸಾಧನೆಗಾಗಿ ರಕ್ಷಿತಾ ನಾಯ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪಟ್ಟಣದ ಹೆಸ್ಕಾಂ ಅಧಿಕಾರಿ ರಮಾಕಾಂತ ನಾಯ್ಕ, ನಾಮಧಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶ್ರೀನಿವಾಸ ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮತ್ತಿತರರು ವೇದಿಕೆಯಲ್ಲಿದ್ದರು.