ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಾರದಂತೆ ಎಚ್ಚರ ವಹಿಸಿ: ಅಜಯ್ ನಾಗಭೂಷಣ್

| Published : Dec 26 2023, 01:30 AM IST / Updated: Dec 26 2023, 12:54 PM IST

ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಾರದಂತೆ ಎಚ್ಚರ ವಹಿಸಿ: ಅಜಯ್ ನಾಗಭೂಷಣ್
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪ್ರದೇಶಗಳೆಂದು ಘೋಷಣೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು. ಅಧಿಕಾರಿಗಳು ಕೇಂದ್ರದಲ್ಲೇ ವಾಸವಾಗಿರಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅ‍ವರು, ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪ್ರದೇಶಗಳೆಂದು ಘೋಷಣೆ ಮಾಡಿದೆ, ಸಮಸ್ಯಾತ್ಮಕ ವಾರ್ಡ್‌ಗಳನ್ನು ಗುರಿತಿಸಿ, ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದರು.

ಕೇಂದ್ರದಲ್ಲೇ ವಾಸವಾಗಿರಬೇಕು:

ನಗರ, ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾದಾಗ ಜನತೆ ಮೊದಲು ಕೇಳೊದು ಪೌರಾಯುಕ್ತರನ್ನ, ಕೆಲಸದ ದಿನಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರದಲ್ಲಿ ವಾಸ ಇರಬೇಕು, ಜಿಲ್ಲಾಧಿಕಾರಿ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋದ ಬಗ್ಗೆ ನನ್ನ ಗಮನಕ್ಕೆ ಬಂದರೆ ಶಿಸ್ತುಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಡಿಯುವ ನೀರಿಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಕೋಟ್ಯಂತರ ರು.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಆದರೂ ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಬರುತ್ತಲೆ ಇವೆ. ದುರಸ್ತಿ ಹಂತದಲ್ಲಿರುವ ಕೊಳವೆ ಬಾವಿಗಳನ್ನು ಶೀಘ್ರದಲ್ಲೇ ಸರಿಪಡಿಸಿ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.

ಪೈಪ್‌ಲೈನ್‌ ಕಾಮಗಾರಿ:

ಕೋಲಾರ, ಬಂಗಾರಪೇಟೆ ಸೇರಿದಂತೆ ಕೆಲ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಯರಗೋಳ್ ಡ್ಯಾಂ ಯೋಜನೆ ಜಾರಿಯಾಗಿದೆ. ಬಾಕಿ ಇರುವ ಪೈಪ್ ಲೈನ್ ಕೆಲಸ ಮುಗಿಸಬೇಕು, ಕಡ್ಡಾಯವಾಗಿ ಎಂಜಿನಿಯರ್ ಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ನೀರಿನ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲು ಕ್ರಮವಹಿಸಲಾಗಿದೆ ಎಂದು ಕೋಲಾರ ನಗರಸಭೆ ಪೌರಾಯುಕ್ತ ಶಿವಾನಂದ ಸಭೆಗೆ ಮಾಹಿತಿ ನೀಡಿದರು, ಇದಕ್ಕೆ ಗರಂ ಆದ ಅಜಯ್ ನಾಗಭೂಷಣ್, ಟೆಂಡರ್ ಸಬೂಬು ಹೇಳಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿನ ನಿರ್ವಹಣೆಗೆ ಸಡಲೀಕರಣ ಕೊಟ್ಟಿದ್ದಾರೆ, ಬರದ ನಡುವೆ ಟೆಂಡರ್ ಯಾಕೆ ಕರೆಯಬೇಕು. ಟೆಂಡರ್ ಸಬೂಬು ನೆಪ ಹೇಳಬೇಡಿ, ೫ ಲಕ್ಷ ರು.ಗಳ ಒಳಗೆ ಕೋಟೆಷನ್ ಪಡೆದು ಕೆಲಸ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಯರಗೋಳ್‌ ನೀರು:

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಯರಗೋಳ್ ಡ್ಯಾಂನಲ್ಲಿ ೪೭೦ ಎಂಸಿಎಲ್ ನೀರು ಯರಗೋಳ್ ಡ್ಯಾಂನಲ್ಲಿ ಲಭ್ಯವಿದೆ. ನಗರದಲ್ಲಿ ೭ ಒವರ್ ಹೇಡ್ ಟ್ಯಾಂಕ್‌ಗಳಿದ್ದು, ನೀರು ತುಂಬಿಸಿ ಪೂರೈಸಲಾಗುತ್ತಿದೆ. ಬಾಕಿ ಇರುವ ಪೈಪ್ ಲೈನ್ ಕೆಲಸ ಪ್ರಗತಿಯಲ್ಲಿ ಇದೆ. ಸದ್ಯಕ್ಕೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ, ಕಳೆದ ಮೂರು ವರ್ಷಗಳ ಹಿಂದಿನ ವರದಿ ಗಮನಿಸಿ ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆ ಎದುರಿಸಲು ಮುಂದಿನ ೬ ತಿಂಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.

ಬಿಜಿಎಂಎಲ್‌ನಿಂದ ಹಣ ಪಾವತಿ:

ಕೆಜಿಎಫ್ ನಗರದ ೧೭ ವಾರ್ಡ್‌ಗಳಿಗೆ ಬೇತಮಂಗಲ ಕೆರೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬಾಕಿ ಇರುವ ವಾರ್ಡ್‌ಗಳಿಗೆ ಕೊಳವೆಬಾವಿ ಮೂಲಕ ಸರಬರಾಜು ಮಾಡಲಾಗುತ್ತಿದೆ, ಇದಕ್ಕೆ ಬಿಜಿಎಂಎಲ್ ನವರು ವಾರ್ಷಿಕವಾಗಿ ೫೦ ಲಕ್ಷ ರು.ಗಳ ಪಾವತಿ ಮಾಡುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಲೂರು, ಬಂಗಾರಪೇಟೆ, ಮುಳಬಾಗಿಲು ಶ್ರೀನಿವಾಸಪುರ ನಗರಸಭೆ ಮತ್ತು ಪುರಸಭೆಯ ಪ್ರಗತಿ ಪರಿಶೀಲನೆ ನಡೆಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು, ಸಭೆಯಲ್ಲಿ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಪಂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.