ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನಲ್ಲಿ 2018ರ ನೆರೆ ಹಾವಳಿಗೆ ಮನೆ ಹಾನಿಯಾದ ಸಾವಿರಾರು ಫಲಾನುಭಾವಿಗಳ ಅರ್ಜಿ ಫೈಲ್ ತಹಸೀಲ್ದಾರ್ ಕಚೇರಿಯಿಂದ ಮಾಯವಾಗಿರುವುದು ವಿಷಯ ನೆರೆ ಸಂತ್ರಸ್ಥರ ಸಲುವಾಗಿ ಅಥಣಿ ಶಾಸಕ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡೆಸಿದ ತಾಲೂಕು ಆಡಳಿತದ ವಿಶೇಷ ಸಭೆಯಲ್ಲಿ ಬೆಳಕಿಗೆ ಬಂದಿದೆ.2018 ರಲ್ಲಿ ಅಥಣಿ ತಾಲೂಕಿನ ಕೃಷ್ಣಾ ನದಿಗೆ ನೆರೆ ಹಾವಳಿ ಬಂದಾಗ ನದಿ ತೀರದ ಗ್ರಾಮದಲ್ಲಿ ಸಾಕಷ್ಟು ಜನರ ಮನೆಗಳು ಹಾನಿ ಆಗಿದ್ದವು. ಅವುಗಳನ್ನು ಎ.ಬಿ.ಸಿ. ಎಂದು ವರ್ಗೀಕರಿಸಿ ಸರ್ವೆ ಮಾಡಿ ಪರಿಹಾರ ನೀಡಬೇಕಾಗಿತ್ತು. ಆದರೆ, ಅರ್ಜಿ ಸಲ್ಲಿಸಿದ ಸಾವಿರಾರು ಜನರಿಗೆ ಇದುವರಿಗೆ ಪರಿಹಾರ ಬಂದಿಲ್ಲ. ಈ ಕುರಿತು ಸಾರ್ವಜನಿಕರು ಶಾಸಕರಿಗೆ ಸಾಕಷ್ಟು ದೂರ ನೀಡಿದ್ದರು. ಆದರೆ, ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳು ಗ್ರಾಪಂ ಪಿಡಿಒ ಗಳತ್ತ ಕೈ ಮಾಡಿ ಜಾರಿಕೊಳ್ಳುತಿದ್ದರು. ಪಿಡಿಒ ಗಳು ಸರ್ವೆ ಮಾಡಿ ಅರ್ಜಿ ನೀಡಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತ ಬಂದಿದ್ದಾರೆ.
ಭಾನುವಾರ ನಡೆದ ತಾಲೂಕು ಆಡಳಿತ ಸಭೆಯಲ್ಲಿ ಪಿಡಿಒ ಮತ್ತು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸಹಿತ ಜಂಟಿಯಾಗಿ ಸಭೆ ಭಾಗವಹಿಸಿದ್ದರು. ಸಭೆಯಲ್ಲಿ ಪಿಡಿಒಗಳು ಸರ್ವೆ ಮಾಡಿ ದಾಖಲೆಗಳನ್ನು ತಹಸೀಲ್ದಾರ್ ಕಚೇರಿಗೆ ತಲುಪಿಸಿರುವ ಬಗ್ಗೆ ದಾಖಲೆ ತೊರಿಸಿದಾಗ ಸಭೆಯಲ್ಲಿ ಹಾಜರಿದ್ದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ತಬ್ಬಿಬ್ಬಾದರು. ಬರುವ ಜನವರಿ 6ಕ್ಕೆ ಜಿಲ್ಲಾಧಿಕಾರಿಗಳ ನೈತ್ರತ್ವದಲ್ಲಿ ಈ ವಿಷಯ ಕುರಿತು ಸಭೆ ನಡೆಸುವುದಾಗಿ ಸೂಚಿಸಿದ ಶಾಸಕರು, ಅಷ್ಟರೊಳಗೆ ದಾಖಲೆಗಳನ್ನು ಸರಿ ಮಾಡಿಕೊಂಡು ಬರದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಚ್ಚರಿಸಿದರು.ಜಾರಿಕೊಳ್ಳಲು ಯತ್ನ: ತಹಸೀಲ್ದಾರ ಕಚೇರಿಯ ಈ ವಿಭಾಗವನ್ನು ನಿರ್ವಹಸಿಸುತ್ತಿರುವ ಪ್ರಥಮ ದರ್ಜೆ ಗುಮಾಸ್ತ ಪ್ರಸಾದ ರತ್ನಾಕರ ಅವರು ತಾವು ಬರುವ ಪೂರ್ವದಲ್ಲಿ ಹಿಂದಿನ ಸಿಬ್ಬಂದಿ ದಯಾನಂದ ಬೊಂಬಡೆ ಅವರ ಮೇಲೆ ಹಾಕಿ ಜಾರಿಕೊಳ್ಳಲು ಯತ್ನ ಮಾಡಿದಾಗ, ಅವರನ್ನು ಕರೆಯಿಸಿ ಆಗಿರುವ ತಪ್ಪುಗಳನ್ನು ಸರಿ ಮಾಡಿ ಎಂದು ಸಭೆಯಲ್ಲಿ ಹಾಜರಿದ್ದ ಉಪ-ವಿಭಾಗಧೀಕಾರಿ ಎಸ್.ಎಸ್.ಸಂಪಗಾಂವಿ ಮತ್ತು ಅಥಣಿ ತಹಸೀಲ್ದಾರ ವಾಣಿ ಐ ಸೂಚನೆ ನೀಡಿದರು.
ಲಂಚದ ಆರೋಪ: ಲಂಚ ನೀಡದವರ ಅರ್ಜಿಗಳನ್ನು ಮಾಯ ಮಾಡಿರುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದರಿಂದ.ಸಭೆ ಮಹತ್ವ ಪಡೆದಿತ್ತು. ಅರ್ಜಿಗಳು ಮಾಯವಾಗಿರುವುದರಿಂದ ಲಂಚ ಬೇಡಿಕೆ ಇಟ್ಟಿರುವ ಬಗ್ಗೆ ಹಲವಾರು ಸಂಶಯಕ್ಕೆ ಕಾರಣವಾಗಿದೆ.