ರೈತರಿಗೆ ರಾತ್ರಿ ಬದಲಿಗೆ ಹಗಲಲ್ಲೇ ವಿದ್ಯುತ್‌ ನೀಡಿ

| Published : Jan 30 2025, 01:46 AM IST

ಸಾರಾಂಶ

ರಾತ್ರಿವೇಳೆ ಕರಡಿ, ಕತ್ತೆ ಕಿರುಬ, ಚಿರತೆ ಹಾವಳಿ ಹೆಚ್ಚಿರುವ ಕಾರಣ ಕೃಷಿಗೆ ಪೂರೈಕೆ ಮಾಡುವ ವಿದ್ಯುತ್ ಸೌಲಭ್ಯವನ್ನು ಹಗಲು ವೇಳೆಯಲ್ಲೇ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೆಸ್ಕಾಂಗೆ ಬುಧವಾರ ಜಗಳೂರಲ್ಲಿ ಮನವಿ ಸಲ್ಲಿಸಿದ್ದಾರೆ.

- ಬೆಸ್ಕಾಂ ಎಇಇ ಸುಧಾಮಣಿಗೆ ಮನವಿ ಸಲ್ಲಿಸಿ ರೈತ ಸಂಘ ಒತ್ತಾಯ

- - -

- ರಾತ್ರಿ ಕರಡಿ, ಚಿರತೆ, ಕತ್ತೆಕಿರುಬ ಮತ್ತಿತರ ಕಾಡು ಪ್ರಾಣಿಗಳ ಹಾವಳಿ

- ಅಡಕೆ, ರಾಗಿ, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ನೀರು ಹರಿಸಲು ಸಮಸ್ಯೆ - - - ಕನ್ನಡಪ್ರಭ ವಾರ್ತೆ ಜಗಳೂರು

ರಾತ್ರಿವೇಳೆ ಕರಡಿ, ಕತ್ತೆ ಕಿರುಬ, ಚಿರತೆ ಹಾವಳಿ ಹೆಚ್ಚಿರುವ ಕಾರಣ ಕೃಷಿಗೆ ಪೂರೈಕೆ ಮಾಡುವ ವಿದ್ಯುತ್ ಸೌಲಭ್ಯವನ್ನು ಹಗಲು ವೇಳೆಯಲ್ಲೇ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೆಸ್ಕಾಂಗೆ ಬುಧವಾರ ಮನವಿ ಸಲ್ಲಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ಭೈರನಾಯಕನಹಳ್ಳಿ ಬಿ.ಕುಮಾರ್ ನೇತೃತ್ವದಲ್ಲಿ ಸಂಘದ ಸದಸ್ಯರು ಬೆಸ್ಕಾಂ ಕಚೇರಿ ಎದುರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಕುಮಾರ್ ಮಾತನಾಡಿ, ಭರಮಸಮುದ್ರ, ಸಿದ್ದಮ್ಮನಹಳ್ಳಿ, ತಿಮ್ಲಾಪುರ, ಕಾಮಗೇತನಹಳ್ಳಿ, ಹೊಸಹಟ್ಟಿ, ಅಣಬೂರು ಸೇರಿದಂತೆ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಕರಡಿ, ಚಿರತೆ, ಕತ್ತೆಕಿರುಬ ಸೇರಿದಂತೆ ಅನೇಕ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಈ ಮಧ್ಯೆ ಸರ್ಕಾರ ರಾತ್ರಿ 10 ರಿಂದ 2 ಗಂಟೆ, ಬೆಳಗಿನ ಜಾವ 2 ರಿಂದ 6 ಗಂಟೆವರೆಗೆ ಸರತಿಯಂತೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಇದರಿಂದ ರೈತರು ಗದ್ದೆ-ತೋಟಗಳಿಗೆ ನೀರು ಹಾಯಿಸಲು ರೈತರು ರಾತ್ರಿವೇಳೆಯೇ ಜಮೀನುಗಳಿಗೆ ಹೋಗಬೇಕಾದ ದುಸ್ಥಿತಿ ಉಂಟಾಗುತ್ತಿದೆ ಎಂದು ಆರೋಪಿಸಿದರು.

ರಾತ್ರಿ ಕತ್ತಲಲ್ಲಿ ರೈತರ ಮೇಲೆ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಅಡಕೆ, ರಾಗಿ, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ನೀರು ಹರಿಸಲು ರಾತ್ರಿವೇಳೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಂಜೆ 6ರಿಂದ 10 ಗಂಟೆಯವರೆಗೆ ವಿದ್ಯುತ್ ಪೂರೈಸಿದರೆ ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಸೂಕ್ತವಾಗುತ್ತದೆ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಬೆಸ್ಕಾಂ ಎಇಇ ಸುಧಾಮಣಿ ಅವರು, ಹಿರೇಮೇಮಲ್ಲನ ಹೊಳೆ ಎಫ್7, ಎಫ್8 ರಲ್ಲಿ ಎಲ್ಲೆಲ್ಲಿ ಸಾಧ್ಯತೆ ಇದೆಯೋ ಅಲ್ಲಲ್ಲಿ ರಾತ್ರಿಯ ಬದಲಿಗೆ ಹಗಲು ವೇಳೆ, ಇಲ್ಲವೇ ಸಂಜೆ ವೇಳೆ ವಿದ್ಯುತ್ ಪೂರೈಕೆಗೆ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭ ಜಿಲ್ಲಾಧ್ಯಕ್ಷ ಬಸವರಾಜ ಕೆ., ರೈತ ಮುಖಂಡರಾದ ಲೋಕೇಶ್, ತಿಪ್ಪೇಸ್ವಾಮಿ, ಜಗದೀಶ್ ಎಸ್.ಎಂ. ಎ.ಡಿ.ಚನ್ನಪ್ಪ, ಕೆ.ಬಿ.ತಿಪ್ಪೇಸ್ವಾಮಿ, ಸೂರಪ್ಪ, ಮಧು, ಬಸವರಾಜ್, ಶಾಮರಾಜ್, ಮಹಲಿಂಗಪ್ಪ, ಮಂಗಳಮ್ಮ, ಭಾರತಮ್ಮ, ಶಿವನಮ್ಮ, ಮಂಜುನಾಥ್, ನೂರಾರು ರೈತರು ಇದ್ದರು.

- - - -29ಜೆಎಲ್ಆರ್ಚಿತ್ರ1:

ಜಗಳೂರು ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ರಾತ್ರಿ ಬದಲಿಗೆ ಸರ್ಕಾರ ಹಗಲು ಹೊತ್ತು ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ನೂರಾರು ರೈತರು ಬೆಸ್ಕಾಂ ಎಇಇ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.