ಉತ್ತಮ ಸೇವೆ ನೀಡಿ ಜನರ ವಿಶ್ವಾಸ ಗಳಿಸಿ

| Published : Feb 19 2025, 12:49 AM IST

ಸಾರಾಂಶ

ಆನವಟ್ಟಿ: ಹೊಸದಾಗಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಮಾನ್ಯತೆ ಪಡೆದ ಕೂಡಲೇ ನಿವಾಸಿಗಳಿಗೆ ತೆರೆಗೆ ಹೆಚ್ಚಾಗುತ್ತದೆ, ಇದರಿಂದ ಪಟ್ಟಣ ಪಂಚಾಯಿತಿ ಮೇಲೆ ಕೋಪಗೊಳ್ಳುತ್ತಾರೆ. ಜನರಿಗೆ ಮೂಲಸೌಕರ್ಯ ಸೌಲಭ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಉತ್ತಮ ಸೇವೆ ನೀಡಿ ಜನರ ವಿಶ್ವಾಸ ಗಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಮಧು ಬಂಗಾರಪ್ಪ ಕಿವಿಮಾತು ಹೇಳಿದರು.

ಆನವಟ್ಟಿ: ಹೊಸದಾಗಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಮಾನ್ಯತೆ ಪಡೆದ ಕೂಡಲೇ ನಿವಾಸಿಗಳಿಗೆ ತೆರೆಗೆ ಹೆಚ್ಚಾಗುತ್ತದೆ, ಇದರಿಂದ ಪಟ್ಟಣ ಪಂಚಾಯಿತಿ ಮೇಲೆ ಕೋಪಗೊಳ್ಳುತ್ತಾರೆ. ಜನರಿಗೆ ಮೂಲಸೌಕರ್ಯ ಸೌಲಭ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಉತ್ತಮ ಸೇವೆ ನೀಡಿ ಜನರ ವಿಶ್ವಾಸ ಗಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಮಧು ಬಂಗಾರಪ್ಪ ಕಿವಿಮಾತು ಹೇಳಿದರು.ಮಂಗಳವಾರ ಆನವಟ್ಟಿಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಪೌರಾಡಳಿತ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಕ್ಷಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭೂ ದಾಖಲೆಯಲ್ಲಿ ನಡೆಯುವ ಅವವ್ಯಹಾರ, ಅಧಿಕಾರಿಗಳ ಭ್ರಷ್ಟತೆ, ನಿರಂತರ ಜನರು ಕಚೇರಿಗಳನ್ನು ಅಲೆದಾಡಿಸುವುದು ತಪ್ಪಿಸುವ ಸುಲುವಾಗಿ ಆಧುನಿಕ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ನಕ್ಷಾ ಸರ್ವೇ ಯೋಜನೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಬೇರೊಬ್ಬರ ಭೂ ಹಕ್ಕು ಪತ್ರಗಳನ್ನು ತಿದ್ದಿಪಡಿ ಮಾಡಿ, ಮೋಸ ಮಾಡಬಹುದಾದ ಹಳೆಯ ವ್ಯವಸ್ಥೆಯನ್ನು ಬಿಟ್ಟು, ಜನರಿಗೆ ಅನ್ಯಾಯವಾಗದೆ ಯಾವಾಗ ಬೇಕಾದರೂ ನಕಲು ಪ್ರತಿ ಪಡೆಯಲು ಅವಕಾಶ ದೊರೆಯುವಂತೆ ಕಾನೂನಾತ್ಮಕವಾಗಿ ಸುರಕ್ಷತೆ ಇರುವಂತೆ ಉಚಿತವಾಗಿ ನಕ್ಷಾ ಯೋಜನೆಯಲ್ಲಿ ಭೂ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಅಧಿಕಾರಿಗಳು ಪ್ರತಿ ಮನೆಗೆ ಬಂದು ಮಾಹಿತಿ ಸಂಗ್ರಹಿಸುತ್ತಾರೆ, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಕಂದಾಯ ಇಲಾಖೆಗೆ ಸೇರಿಸಿದ ಸರ್ಕಾರಿ ಜಾಗ ಬಿಟ್ಟರೇ, ಹೆಚ್ಚು ಸರ್ಕಾರಿ ಜಾಗವಿರುವುದು ಶಿಕ್ಷಣ ಇಲಾಖೆಯಲ್ಲಿ. ಕೆಲವು ದಾನಿಗಳು ನೀಡಿರುವ ಜಾಗವನ್ನು, ಮರಳಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಪ್ರಯತ್ನಗಳಿಗೆ ಕಡಿವಾಣ ಹಾಕಲು ಸರ್ಕಾರದಿಂದ ಹೊಸದೊಂದು ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂದ ಅವರು, ಗ್ರಾಮದಲ್ಲಿ ಶಾಲೆ ಪ್ರಾರಂಭವಾಗಿದೆ ಎಂದರೆ ಆಗ ಜಾಗ ಶಾಲೆಗೆ ಸೇರಬೇಕು ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ತಿರ್ಮಾನ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ 10 ಪಟ್ಟಣ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಆನವಟ್ಟಿಯೂ ಸೇರಿದೆ. ದಿನಕ್ಕೆ ಆರು ಸಾವಿರ ಸರ್ವೇಗಳನ್ನು ಮಾಡಲಾಗುತ್ತಿದೆ. ಸೊರಬ ತಾಲೂಕಿನಲ್ಲಿ ಇಲ್ಲಿಯ ವರೆಗೂ 75 ಲಕ್ಷ ಭೂ ದಾಖಲೆಗಳ ಸರ್ವೇ ಮಾಡಲಾಗಿದೆ ಎಂದು ತಿಳಿಸಿದರು.

ಈಗ ನಗರ ಪ್ರದೇಶಗಳಲ್ಲಿ ಮಾತ್ರ ನಕ್ಷಾ ಯೋಜನೆಯಲ್ಲಿ ಸರ್ವೇ ಮಾಡಲಾಗುತ್ತಿದೆ. ಮುಂದೆ ಹಂತ-ಹಂತವಾಗಿ ಗ್ರಾಮೀಣ ಪ್ರದೇಶವನ್ನು ನಕ್ಷಾ ಯೋಜನೆಯಲ್ಲಿ ಸೇರಿಸಲಾಗುವುದು ಎಂದರು.

ಸಮಾರಂಭದಲ್ಲಿ ಸಾಗರ ಉಪವಿಭಾಗ ಆಧಿಕಾರಿ ಯತೀಶ್‌, ಶಿವಮೊಗ್ಗ ಭೂದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ, ಮುಖ್ಯಾಧಿಕಾರಿ ಸಂತೋಷ್‌ ಕುಮಾರ್‌, ಕಾಂಗ್ರೆಸ್‌ ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಸದಾನಂದಗೌಡ ಪಾಟೀಲ್‌ ಬಿಳಗಲಿ, ಮುಖಂಡರಾದ ಕೆ.ಪಿ.ರುದ್ರಗೌಡ, ಜರ್ಮಲೆ ಚಂದ್ರಶೇಖರ್‌, ಸಿದ್ದಲಿಂಗೇಶ್‌ ನೇರಲಗಿ, ಶಿವಲಿಂಗೇಗೌಡ, ನಾಗರಾಜ ಗೌಡ ಶಿಕಾರಿಪುರ, ಮಧುಕೇಶ್ವರ ಪಾಟೀಲ್‌, ಪಿ.ಎಸ್‌.ಮಂಜುನಾಥ, ಅನೀಶ್‌ ಪಾಟೀಲ್‌, ಕೃಷ್ಣಪ್ಪ, ಮಹ್ಮದ್‌ ಗೌಸ್‌ ಮಕಂದರ್‌, ಹಬಿಬುಲ್ಲಾ ಹವ್ದಾರ್‌, ಸಂಜೀವ ತರಕಾರಿ, ಚಾಂದ್‌ ನೂರಿ ಇದ್ದರು.