ಸಮಯಕ್ಕೆ ಮಹತ್ವ ನೀಡಿ ಸಾಧನೆ ಮಾಡಿ: ಪಿ.ವೈ. ಗುಡಗುಡಿ

| Published : Feb 07 2024, 01:48 AM IST

ಸಾರಾಂಶ

ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ಕೊಟ್ಟು, ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ಕೊಟ್ಟು, ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪಿ.ವೈ. ಗುಡಗುಡಿ ಕರೆ ನೀಡಿದರು.

ಇಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನ್ಯೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶೈಕ್ಷಣಿಕ ಮುನ್ನಡೆ ಇತರರಿಗೆ ಮಾದರಿಯಾಗುವಂತೆ ಇರಬೇಕು. ನಾಳೆಗಾಗಿ ನಾವು ಇಂದೇ ಸಿದ್ಧಗೊಳ್ಳುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಈಗ ಮಹಿಳೆಯರಿಗೆ ಒಳ್ಳೆಯ ಅವಕಾಶ ನೀಡುವ ಕಾಲ. ಸಂವಿಧಾನ ಸಮಾನತೆಗೆ ಒತ್ತು ನೀಡಿದೆ. ಶ್ರದ್ಧೆಯ ಓದು, ಸಾಂಸ್ಕೃತಿಕ ಮನಸ್ಸು, ಸಾಮಾಜಿಕ ಜವಾಬ್ದಾರಿ ಎಲ್ಲರದ್ದಾಗಿರಲಿ. ನಾವು ಸಮಾಜ ಜೀವಿಗಳು ಎಂಬ ಅರಿವು ನಮ್ಮಲ್ಲಿರಲಿ. ಪಾಲಕರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಬದುಕಿನ ಯಶಸ್ಸು ಸಾಧಿಸಿ ಎಂದರು.

ಆಶಯ ನುಡಿಯಾಡಿದ ಪ್ರಭಾರ ಪ್ರಾಚಾರ್ಯ ರವೀಂದ್ರ ಜಡೆಗೊಂಡರ, ನಮ್ಮ ಶಿಕ್ಷಣ ಸಂಸ್ಥೆ ಶಿಸ್ತು, ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ. ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಉತ್ತಮ ಗುಣಮಟ್ಟ ಹೊಂದಿದ ವಿದ್ಯಾಲಯ ನಮ್ಮದು ಎಂಬ ಹೆಮ್ಮೆಯಿದೆ ಎಂದರು.

ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿದರು.

ಮಾತೃ ಸಂಸ್ಥೆ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಅಶೋಕ ಹಂಗರಗಿ, ಹನುಮಂತಪ್ಪ ಮಲಗುಂದ, ರೇಖಾ ಶೆಟ್ಟರ, ಮಧುಮತಿ ಪೂಜಾರ, ಭೀಮನಗೌಡ ಪಾಟೀಲ, ಸುರೇಶ ರಾಯ್ಕರ, ಕಾರ್ಯದರ್ಶಿ ಮನೋಹರ ಬಳಿಗಾರ, ಕುಮಾರೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಸಿ. ಚಿರಂಜೀವಿ ಅತಿಥಿಗಳಾಗಿದ್ದರು. ಉಪನ್ಯಾಸಕರಾದ ಎಫ್.ಎಸ್. ಕಾಳಿ, ಕೆ.ಬಿ. ಶೇಷಗಿರಿ, ಎ.ಎಚ್. ಹಳ್ಳಳ್ಳಿ, ಅಕ್ಷತಾ ಕೂಡಲಮಠ, ಶಶಿಕಲಾ ಬಡಿಗೇರ, ಮಂಜುನಾಥ ಎಸ್.ಎಲ್. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಂಜಿತಾ ಪಾಟೀಲ ಸಂಗಡಿಗರು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಎಫ್.ಎಸ್. ಕಾಳಿ ವಾರ್ಷಿಕ ವರದಿ ವಾಚನ ಮಾಡಿದರು. ಅಕ್ಷತಾ ಕೂಡಲಮಠ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಲ್. ಮಂಜುನಾಥ ವಂದಿಸಿದರು.

ಪ್ರತಿಭಾ ಪುರಸ್ಕಾರ: ಪ್ರಥಮ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿಗಳಿಂದ ರಂಗೋಲಿ, ವಿವಿಧ ತಿನಿಸು ತಯಾರಿಕೆ, ವಿಜ್ಞಾನ ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಸ್ಪರ್ಧೆ ನಡೆಸಿ, ಪ್ರದರ್ಶಿಸಿ ಬಹುಮಾನ ನೀಡಲಾಯಿತು.